
ವಿಜಯಪುರ: ಖ್ಯಾತ ಉದ್ಯಮಿ, ಗುತ್ತಿಗೆದಾರ ಡಿ.ವೈ.ಉಪ್ಪಾರ (81) ಬುಧವಾರ ಬೆಂಗಳೂರಿನಲ್ಲಿ ನಿಧನರಾದರು.
ಸಿಂದಗಿ ತಾಲ್ಲೂಕಿನ ಯಂಕಂಚಿ ಗ್ರಾಮದಲ್ಲಿ ಗುರುವಾರ(ಜ.22) ಸಂಜೆ 5ಕ್ಕೆ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಮೂಲತಃ ಬಸವನಬಾಗೇವಾಡಿ ತಾಲ್ಲೂಕು ಯಾಳವಾರ ಗ್ರಾಮದ ಸಾಮಾನ್ಯ ಕುಟುಂಬದಿಂದ ಬಂದ ಅವರು, ಗುತ್ತಿಗೆ ಕಾಮಗಾರಿಗಳ ಕ್ಷೇತ್ರದಲ್ಲಿ ಗುಣಮಟ್ಟದ ಕಾಮಗಾರಿಗಳ ಮೂಲಕ ಹೆಸರು ಮಾಡಿದ್ದರು. ಕೃಷ್ಣಾ ಮೇಲ್ದಂಡೆ ಯೋಜನೆ ಸೇರಿದಂತೆ ನಾಡಿನಲ್ಲಿ ಹೆಸರಾಂತ ಕಾಮಗಾರಿಗಳನ್ನು ಮಾಡಿ ಅವರು ಯುವ ಗುತ್ತಿಗೆದಾರರಿಗೆ ಮಾದರಿಯಾಗಿದ್ದರು.
‘ಶ್ರೀ ಡಿ.ವೈ. ಉಪ್ಪಾರ ಎಜುಕೇಷನಲ್ ಅಂಡ್ ಸೋಶಿಯಲ್ ಫೌಂಡೇಷನ್’ ಮೂಲಕ ಅವರು ಶೈಕ್ಷಣಿಕ ಮತ್ತು ಧಾರ್ಮಿಕ ಚಟುವಟಿಕೆಗಳಿಗೆ ಅಪಾರ ಕೊಡುಗೆ ನೀಡುವ ಮೂಲಕ ಕೊಡುಗೈ ದಾನಿ ಎನಿಸಿಕೊಂಡಿದ್ದರು. ಬಡವರಿಗೂ ಸಾಕಷ್ಟು ನೆರವು ನೀಡಿದ್ದರು. ತಮ್ಮ ಜನಪರ ಕೆಲಸಗಳ ಮೂಲಕ ಹೆಸರು ಮಾಡಿದ್ದರು.
ಸಿಂದಗಿ ತಾಲ್ಲೂಕು ಸುಕ್ಷೇತ್ರ ಯಂಕಂಚಿ ಗ್ರಾಮದ ದಾವಲ್ ಮಲಿಕ್ ದೇವಸ್ಥಾನದ ಭಕ್ತರಾಗಿದ್ದರು. ಈ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದಾರೆ. ದೇವಸ್ಥಾನದ ಸುತ್ತಲಿನ ಹತ್ತಾರು ಎಕರೆ ಜಮೀನು ಖರೀದಿಸಿ ದೇವಸ್ಥಾನಕ್ಕೆ ದಾನವಾಗಿ ನೀಡಿದ್ದಾರೆ.
ವಿನಮ್ರತೆ, ಶಿಸ್ತು, ಪ್ರಾಮಾಣಿಕತೆ, ಕಠಿಣ ಪರಿಶ್ರಮ, ದೂರದೃಷ್ಠಿಯ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತಿತರ ಗಣ್ಯರು ಬೆಂಗಳೂರಿನಲ್ಲಿ ಉಪ್ಪಾರ ಅವರ ಪಾರ್ಥೀವ ಶರೀರದ ದರ್ಶನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.