ADVERTISEMENT

ವಿಜಯಪುರ ಮಹಾನಗರ ಪಾಲಿಕೆ: ಜನಕ್ಕೆ ‘ಹೊರೆ’ಯಾಗದ, ಹೊಸತೇನೂ ಇಲ್ಲದ ಬಜೆಟ್‌

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 2:20 IST
Last Updated 24 ಜನವರಿ 2026, 2:20 IST
ವಿಜಯಪುರ ಮಹಾನಗರ ಪಾಲಿಕೆಯ 2026–27ನೇ ಸಾಲಿನ ಬಜೆಟ್‌  ಪ್ರತಿಯನ್ನು ಮೇಯರ್‌ ಎಂ.ಎಸ್‌.ಕರಡಿ ಮತ್ತು ಆಯುಕ್ತ ವಿಜಯಕುಮಾರ್‌ ಮೆಕ್ಕಳಕಿ ಪ್ರದರ್ಶಿಸಿದರು
ವಿಜಯಪುರ ಮಹಾನಗರ ಪಾಲಿಕೆಯ 2026–27ನೇ ಸಾಲಿನ ಬಜೆಟ್‌  ಪ್ರತಿಯನ್ನು ಮೇಯರ್‌ ಎಂ.ಎಸ್‌.ಕರಡಿ ಮತ್ತು ಆಯುಕ್ತ ವಿಜಯಕುಮಾರ್‌ ಮೆಕ್ಕಳಕಿ ಪ್ರದರ್ಶಿಸಿದರು   

ವಿಜಯಪುರ: ವಿಜಯಪುರ ನಗರಕ್ಕೆ ಯಾವುದೇ ಹೊಸ ಯೋಜನೆಗಳಿಲ್ಲದ ಹಾಗೂ ಜನರಿಗೆ ಹೊರೆಯೂ ಆಗದ 2026–27ನೇ ಸಾಲಿನ ಬಜೆಟ್‌ ಅನ್ನು ಮೇಯರ್‌ ಎಂ.ಎಸ್‌.ಕರಡಿ ಶುಕ್ರವಾರ ಮಂಡಿಸಿದರು.

ಪಾಲಿಕೆಗೆ ವಿವಿಧ ಮೂಲಗಳಿಂದ ಅಂದಾಜು ₹265.20 ಕೋಟಿ ಆದಾಯ ಸಂಗ್ರಹಿಸಿ, ಅದರಿಂದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ₹265.08 ಕೋಟಿ ವೆಚ್ಚ ಮಾಡುವುದಾಗಿ ಲೆಕ್ಕ ನೀಡಿದ ಮೇಯರ್ ಕರಡಿಯವರು, ‘ಹಾಸಿಗೆ ಇದ್ದಷ್ಟೇ ಕಾಲು ಚಾಚು’ ಎಂಬ ಗಾದೆ ಮಾತಿನಂತೆ ಸೀಮಿತ ಆದಾಯದಲ್ಲಿ ಖರ್ಚನ್ನು ಕಳೆದು ₹12 ಲಕ್ಷ ಉಳಿತಾಯ ಮಾಡಿರುವುದಕ್ಕೆ ಆಡಳಿತರೂಢ ಬಿಜೆಪಿ ಸದಸ್ಯರು ಮೇಜು ಕುಟ್ಟಿ ಅಭಿನಂದಿಸಿದರು.

ಬಜೆಟ್‌ ಮುಖ್ಯಾಂಶಗಳು:

‌ಪಾಲಿಕೆಯ ವ್ಯಾಪ್ತಿಯಲ್ಲಿ ಒಳಚರಂಡಿ ತುರ್ತು ನಿರ್ವಹಣೆಗಾಗಿ ಪ್ರತಿ ವಾರ್ಡ್‌ಗೆ ₹10 ಲಕ್ಷ, ಪ್ರತಿ ವಾರ್ಡ್‌ಗಳಿಗೆ ಮೂಲಸೌಕರ್ಯ ಒದಗಿಸಲು ತಲಾ ₹20 ಲಕ್ಷ, ನಗರದಲ್ಲಿರುವ ಸ್ಮಶಾನಗಳ ಅಭಿವೃದ್ಧಿ ಮತ್ತು ಮೂಲಸೌಕರ್ಯಕ್ಕೆ ಒಟ್ಟು ₹50 ಲಕ್ಷ, ಸುಸಜ್ಜಿತವಾದ ಫುಡ್‌ ಕೋರ್ಟ್‌ ನಿರ್ಮಾಣಕ್ಕೆ ₹50 ಲಕ್ಷ ಮೀಸಲಿಟ್ಟಿರುವುದಾಗಿ ಹೇಳಿದರು.

ADVERTISEMENT

ಸಂಚಾರ ದೃಷ್ಟಿಯಿಂದ ಬಹಳ ಅಗತ್ಯವಾಗಿದ್ದ ಶಿವಾಜಿ ವೃತ್ತದಿಂದ ಗೋದಾವರಿ ಹೋಟೆಲ್‌ ವರೆಗೆ ರಸ್ತೆ ವಿಸ್ತರಣೆ, ಅಭಿವೃದ್ಧಿ ಹಾಗೂ ಸೌಂದರ್ಯೀಕರಣವನ್ನು ₹3 ಕೋಟಿ ವಿಶೇಷ ಅನುದಾನದಲ್ಲಿ ಮಾಡುವುದಾಗಿ ತಿಳಿಸಿದರು.

ಸಾರ್ವಜನಿಕರ ಅನುಕೂಲಕ್ಕಾಗಿ ಎರಡು ಸುಸಜ್ಜಿತ ಮುಕ್ತಿ ವಾಹನಗಳನ್ನು ₹50 ಲಕ್ಷದಲ್ಲಿ ಖರೀದಿಸಲಾಗುವುದು, ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಹಾಗೂ ಉದ್ಯೋಗಕ್ಕಾಗಿ ₹20 ಲಕ್ಷ ಸಹಾಯಧನ ನೀಡಲಾಗುವುದು ಎಂದರು.

ಅಂಗವಿಕಲರ ಅಭಿವೃದ್ಧಿಗಾಗಿ ಶೇ 5 ಯೋಜನೆಯಡಿ ಕ್ರೀಡೆಗಾಗಿ 2 ಮೂವಿಂಗ್‌ ಪೋಲ್ಸ್‌, 2 ನೆಟ್‌, ಕ್ರಿಕೆಟ್‌ ಪಿಚ್‌ ಟೇಬಲ್‌ ಹಾಗೂ ಇತರೆ ಅವಶ್ಯಕ ಸಾಮಗ್ರಿಗಳನ್ನು ವಿತರಿಸಲು ₹10 ಲಕ್ಷ ಅನುದಾನ ಮೀಸಲಿಡಲಾಗಿದೆ ಎಂದು ಹೇಳಿದರು.

ಬೀದಿ ನಾಯಿಗಳ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಹಾಗೂ ಪಾಲನೆಗಾಗಿ ₹62 ಲಕ್ಷದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಪಡಿಸಲಾಗುವುದು ಎಂದರು.

₹7 ಕೋಟಿ ವೆಚ್ಚದಲ್ಲಿ ಬೇಗಂ ತಲಾಬ್‌ ಕೆರೆ ಮತ್ತು ₹13 ಕೋಟಿ ವೆಚ್ಚದಲ್ಲಿ ಭೂತನಾಳ ಕೆರೆಯ ಸೌಂದರ್ಯೀಕರಣ, ಉದ್ಯಾನ, ವಾಕಿಂಗ್‌ ಟ್ರ್ಯಾಕ್‌ ಅಭಿವೃದ್ಧಿ ಮಾಡಲಾಗುವುದು ಎಂದು ತಿಳಿಸಿದರು.

16ನೇ ಹಣಕಾಸು ಯೋಜನೆಯಡಿ ₹2.60 ಕೋಟಿ ವೆಚ್ಚದಲ್ಲಿ 20 ಘನತ್ಯಾಜ್ಯ ವಿಲೇವಾರಿ ವಾಹನಗಳನ್ನು ಖರೀದಿಸಲಾಗುವುದು ಹಾಗೂ ₹60 ಲಕ್ಷದಲ್ಲಿ 8ನೇ ವಾರ್ಡಿನ ಉದ್ಯಾನವನ್ನು ಅಭಿವೃದ್ಧಿ ಪಡಿಸುವುದಾಗಿ ಹೇಳಿದರು.

ಸ್ವಚ್ಛ ಭಾರತ ಯೋಜನೆಯಲ್ಲಿ ಪಾಲಿಕೆ ಸ್ಟಾರ್‌ ರೇಟಿಂಗ್‌ ಹೆಚ್ಚಿಸುವ ದೃಷ್ಟಿಯಿಂದ ₹ 40 ಲಕ್ಷ ವೆಚ್ಚದಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಯೋಜನೆ ರೂಪಿಸಲಾಗುವುದು ಎಂದರು.

ನಗರದ ಪೌರಕಾರ್ಮಿಕರು ಮತ್ತು ಇತರೆ ಕಾರ್ಮಿಕರಿಗೆ ಪ್ರತಿದಿನ ಉಪಾಹಾರ ಪೂರೈಸುವ ಕಾರ್ಯಕ್ರಮಕ್ಕೆ ₹1.20 ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ತಿಳಿಸಿದರು.

ವಿಜಯಪುರ ಮಹಾನಗರ ಪಾಲಿಕೆಯ 2026–27ನೇ ಸಾಲಿನ ಬಜೆಟ್‌  ಚರ್ಚೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್‌ ಬಿಜೆಪಿ ಸದಸ್ಯರು 
ಮೇಯರ್‌ ಎಂ.ಎಸ್‌. ಕರಡಿ ಮಂಡಿಸಿರುವ ಬಜೆಟ್‌ ಯಾವುದೇ ಅಭಿವೃದ್ಧಿ ಯೋಜನೆಗಳನ್ನು ಒಳಗೊಂಡಿಲ್ಲ. ಹೊಸತೂ ಇಲ್ಲ ಸಮಧಾನಕರವಾದ ಬಜೆಟ್‌ ಅಲ್ಲ
ದಿನೇಶ ಹಳ್ಳಿ ಕಾಂಗ್ರೆಸ್‌ ಸದಸ್ಯ ಮಹಾನಗರ ಪಾಲಿಕೆ ವಿಜಯಪುರ
ಮಹಾನಗರ ಪಾಲಿಕೆ ಪ್ರತಿ ವಾರ್ಡ್‌ಗಳ ಅಭಿವೃದ್ಧಿಗೆ ಮೀಸಲಿಟ್ಟಿರುವ ಅನುದಾನ ಏತಕ್ಕೂ ಸಾಲದು. ಪ್ರತಿ ವಾರ್ಡ್‌ಗೆ ಕನಿಷ್ಠ ₹ 50 ಲಕ್ಷ ಮೀಸಲಿಡಬೇಕು
ಅಶೋಕ ನ್ಯಾಮಗೊಂಡ ಸದಸ್ಯ ಮಹಾನಗರ ಪಾಲಿಕೆ
ವಾಸ್ತವ ಬಜೆಟ್‌ ಇದಾಗಿದೆ. ಆದರೆ ಆಸ್ತಿ ತೆರಿಗೆ ಜಾಹೀರಾತು ತೆರಿಗೆ ಸಂಗ್ರಹಕ್ಕೆ ಆದ್ಯತೆ ನೀಡಬೇಕು. ಪಾಲಿಕೆಯಲ್ಲಿ ಅನಗತ್ಯ ವಾಹನ ಬಳಕೆಗೆ ಕಡಿವಾಣ ಹಾಕಬೇಕು
ರಾಜು ಮಗ್ಗಿಮಠ ಬಿಜೆಪಿ ಸದಸ್ಯ
ವಾಸ್ತವ ಬಜೆಟ್‌ ಇದಾಗಿದೆ. ಆದರೆ ಆಸ್ತಿ ತೆರಿಗೆ ಜಾಹೀರಾತು ತೆರಿಗೆ ಸಂಗ್ರಹಕ್ಕೆ ಆದ್ಯತೆ ನೀಡಬೇಕು. ಪಾಲಿಕೆಯಲ್ಲಿ ಅನಗತ್ಯ ವಾಹನ ಬಳಕೆಗೆ ಕಡಿವಾಣ ಹಾಕಬೇಕು
ರಾಜು ಮಗ್ಗಿಮಠ ಬಿಜೆಪಿ ಸದಸ್ಯ
ಬಜೆಟ್‌ ಕಾಗದಕ್ಕೆ ಸೀಮಿತವಾಗದೇ ಅನುಷ್ಠಾನಕ್ಕೆ ತರಲು ಆದ್ಯತೆ ನೀಡಬೇಕು. ನನೆಗುದಿಗೆ ಬಿದ್ದಿರುವ ಪಾಲಿಕೆ ವಾಣಿಜ್ಯ ಮಳಿಗೆಗಳ ಹರಾಜು ಹಾಕಬೇಕು 
ಶಿವರುದ್ರ ಬಾಗಲಕೋಟೆ ಬಿಜೆಪಿ ಸದಸ್ಯ
ಮೇಯರ್‌ ಕರಡಿಯವರು ಬಜೆಟ್‌ನಲ್ಲಿ ಯಾವುದೇ ತಾರತಮ್ಯ ಮಾಡದೇ ಪಕ್ಷಾತೀತವಾಗಿ ಎಲ್ಲ ವಾರ್ಡ್‌ಗಳಿಗೆ ಸರಿಸಮನಾಗಿ ಆದ್ಯತೆ ನೀಡಿದ್ದಾರೆ. 
ಸಪ್ನಾ ಕಣಮುಚನಾಳ ಬಿಜೆಪಿ ಸದಸ್ಯೆ
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಹಳಷ್ಟು ಗಿಡಗಳನ್ನು ನೆಡಲಾಗಿದೆ. ಆದರೆ ನೀರಿಲ್ಲದೇ ಒಣಗುತ್ತಿವೆ. ನೀರೊದಗಿಸಲು ಅಗತ್ಯ ಟ್ಯಾಂಕರ್‌ ವ್ಯವಸ್ಥೆ ಮಾಡಬೇಕು 
ಪ್ರೇಮಾನಂದ ಬಿರಾದಾರ ಪಾಲಿಕೆ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.