ADVERTISEMENT

ವಿಜಯಪುರ: ಕಂಟೈನ್ಮೆಂಟ್‌ ಝೋನ್‌ 37ಕ್ಕೆ ಏರಿಕೆ

ವಿಜಯಪುರ ಜಿಲ್ಲೆಯ ಗ್ರಾಮೀಣ ಪ್ರದೇಶಕ್ಕೂ ವ್ಯಾಪಿಸಿದ ಕೋವಿಡ್‌

​ಪ್ರಜಾವಾಣಿ ವಾರ್ತೆ
Published 7 ಜೂನ್ 2020, 12:45 IST
Last Updated 7 ಜೂನ್ 2020, 12:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಿಜಯಪುರ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್‌–19 ವ್ಯಾಪಿಸತೊಡಗಿದೆ. ಆರಂಭದಲ್ಲಿ ಕೇವಲ ವಿಜಯಪುರಕ್ಕೆ ಸೀಮಿತವಾಗಿದ್ದ ಸೋಂಕು ಇದೀಗ ಇಡೀ ಜಿಲ್ಲೆಗೆ ತನ್ನ ಕಬಂಧ ಬಾಹು ಚಾಚಿದೆ.

ಎರಡು ತಿಂಗಳ ಅವಧಿಯಲ್ಲಿ ಸೋಂಕಿತರ ಸಂಖ್ಯೆ 200 ಗಡಿ ಸಮೀಪಿಸಿದೆ. ಸಾವಿನ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಆದರೆ, ಜಿಲ್ಲೆಯ ಜನರು ಇದಾವುದರ ಅರಿವಿಲ್ಲದವರಂತೆ ಪರಸ್ಪರ ಅಂತರವನ್ನು ಕಾಯ್ದುಕೊಳ್ಳದೇ, ಮಾಸ್ಕ್‌ ತೊಡದೇ, ಸ್ಯಾನಿಟೈಜರ್‌ ಬಳಸದೇ ತಮ್ಮ ದೈನಂದಿನ ಜೀವನವನ್ನು ನಿರಾಳವಾಗಿ ನಡೆಸತೊಡಗಿದ್ದಾರೆ.

ದುಡಿಯಲು ಮಹಾರಾಷ್ಟ್ರಕ್ಕೆ ಹೋಗಿದ್ದ ಸಾವಿರಾರು ಕೂಲಿಕಾರ್ಮಿಕರು ಕೊರೊನಾ ಲಾಕ್‌ಡೌನ್‌ ಬಳಿಕ ತಮ್ಮ ತಮ್ಮ ಊರುಗಳಿಗೆ ಮರಳಿದ್ದಾರೆ. ಜೊತೆಗೆ ಹಲವರು ಸೋಂಕು ಅಂಟಿಸಿಕೊಂಡು ಬಂದಿದ್ದಾರೆ. ಸುರಕ್ಷಿತವಾಗಿದ್ದ ಜಿಲ್ಲೆಯ ಗ್ರಾಮೀಣ ಪ್ರದೇಶಕ್ಕೂ ಇದೀಗ ಸೋಂಕು ವ್ಯಾಪಿಸಿದೆ. ಪರಿಣಾಮ 37 ಕಂಟೈನ್ಮೆಂಟ್‌ ಝೋನ್‌ ನಿರ್ಮಾಣವಾಗಿವೆ.

ADVERTISEMENT

ಕಂಟೈನ್ಮೆಂಟ್‌ ಝೋನ್‌ ವಿವರ:

ವಿಜಯಪುರ ನಗರದಲ್ಲಿ ಚಪ್ಪರಬಂದ್‌ ಕಾಲೊನಿ, ಬಿಎಲ್‌ಡಿಇ, ಬಾರಾಕಮಾನ್‌, ಇಕ್ರಾ ಶಾಲೆ, ಅಲ್ಲಾಪುರ ಬೇಸ್‌.

ತಿಕೋಟಾ ತಾಲ್ಲೂಕಿನ ರತ್ನಾಪುರ, ಬರಟಗಿ, ಹೊನವಾಡ. ಬಬಲೇಶ್ವರ ತಾಲ್ಲೂಕಿನ ಅರ್ಜುಣಗಿ.

ತಾಳಿಕೋಟೆ ತಾಲ್ಲೂಕಿನ ತಾಳಿಕೋಟೆ ಪಟ್ಟಣ, ತಮದಡ್ಡಿ, ಲಿಂಗದಹಳ್ಳಿ, ನೀರಲಗಿ, ಕಾರಿಗನೂರ, ಇಂದಿರಾನಗರ ತಾಂಡಾ, ಬಸರಕೋಡ.

ಮುದ್ದೇಬಿಹಾಳದ ಸರೂರ ಎಲ್‌.ಟಿ., ಕಾಳಗಿ ತಾಂಡ, ಚೀರ್ಚಿಂಕನಾಳ.

ಸಿಂದಗಿ ತಾಲ್ಲೂಕಿನ ಆಲಮೇಲ, ಗುತ್ತರಗಿ, ಕೋರಳ್ಳಿ, ಮಡನಳ್ಳಿ, ಗಣಿಹಾರ.

ದೇವರ ಹಿಪ್ಪರಗಿಯ ಇಂಗಳಗಿ, ಮುಳಸಾವಳಗಿ, ಕೆರೂಟಗಿ ತಾಂಡ, ನಿಡಗುಂದಿ ತಾಲ್ಲೂಕಿನ ಮಾರಡಗಿ ಎಲ್‌.ಟಿ. ಚಡಚಣ ತಾಲ್ಲೂಕಿನ ಡುಮಕನಾಳ. ಇಂಡಿ ತಾಲ್ಲೂಕಿನ ಹಳಗುಣಕಿ, ಚಿಕ್ಕರೂಗಿ, ಝಳಕಿ.

ಬಸವನ ಬಾಗೇವಾಡಿ ತಾಲ್ಲೂಕಿನ ಬ್ಯಾಕೋಡ, ಇಂಗಳೇಶ್ವರ ತಾಂಡಾ, ಬಳ್ಳಾಪುರ ತಾಂಡಾ, ಜಾಲಿಹಾಳ ತಾಂಡಾ, ಕರಬಂಟನಾಳ ತಾಂಡಾವನ್ನು ಕಂಟೈನ್ಮೆಂಟ್‌ ಝೋನ್‌ ಆಗಿವೆ.

ಕಂಟೈನ್ಮೆಂಟ್ ಝೋನ್: ಹಲವು ನಿರ್ಬಂಧ

ಬಸವನಬಾಗೇವಾಡಿ: ತಾಲ್ಲೂಕಿನಲ್ಲಿ ಕೋವಿಡ್‌ ಪಾಸಿಟಿವ್ ಪ್ರಕರಣಗಳು ಕಂಡು ಬಂದ ಪ್ರದೇಶಗಳನ್ನು ಕಂಟೈನ್ಮೆಂಟ್‌ ಝೋನ್ ಎಂದು ನೋಟಿಪಿಕೇಶನ್ ಮಾಡಲಾಗಿದೆ. ಇದರಿಂದಾಗಿ ಅಲ್ಲಿನ ಪ್ರದೇಶಗಳಿಗೆ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ.

ಕಂಟೇನ್ಮಂಟ್‌ ಝೋನ್ ಪ್ರದೇಶದಲ್ಲಿರುವ ಜನರ ಆರೋಗ್ಯದ ಮೇಲೆ ಆರೋಗ್ಯ ಸಿಬ್ಬಂದಿ ನಿಗಾವಹಿಸಿದ್ದಾರೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಇದ್ದರೆ ಅಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. 14 ದಿನ ಈ ಪ್ರದೇಶದಲ್ಲಿ ನಮ್ಮ ಸಿಬ್ಬಂದಿ ಜನರ ಆರೋಗ್ಯದ ಕುರಿತು ಸಮೀಕ್ಷೆ ಮಾಡತ್ತಾರೆ. ತಾಲ್ಲೂಕಿನಲ್ಲಿ 300-400 ಜನರ ಗಂಟಲು ದ್ರವ ಪರೀಕ್ಷೆ ವರದಿ ಬರಬೇಕಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಎಸ್.ಎಸ್.ಓತಗೇರಿ ಹೇಳಿದರು.

ಕಂಟೈನ್ಮೆಂಟ್ ಝೋನ್ ಪ್ರದೇಶದಲ್ಲಿ ಸಂಪೂರ್ಣ ಲಾಕ್ ಡೌನ್ ಇರಲಿದೆ. ಅಲ್ಲಿನ ಜನರು ತಮಗೆ ಅಗತ್ಯವಿರುವ ದಿನಸಿ, ತರಕಾರಿ ಸೇರಿದಂತೆ ವಸ್ತುಗಳನ್ನು ಹಣ ನೀಡಿ ಪಂಚಾಯಿತಿ ಸಿಬ್ಬಂದಿಯಿಂದ ತರಿಸಿಕೊಳ್ಳಬಹುದು. ಜನರು ಯಾವುದೇ ಕಾರಣಕ್ಕೂ ಮನೆಯಿಂದ ಹೊರಗೆ ಬಾರದಂತೆ ಸೂಚಿಸಲಾಗಿದೆ ಎಂದು ತಹಶೀಲ್ದಾರ್‌ ಎಂ.ಎನ್.ಬಳಿಗಾರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.