
ವಿಜಯಪುರ: ಬೆಳೆ ಹಾನಿ ಪ್ರಮಾಣ ಹೆಚ್ಚಾಗಿದ್ದರೂ ಪರಿಹಾರ ನೀಡುವಲ್ಲಿ ಸರ್ಕಾರ ತಾರತಮ್ಯ, ಅಸಮರ್ಪಕ ಹಾಗೂ ಅನ್ಯಾಯ ಮಾಡಿದೆ ಎಂದು ಬಸವನ ಬಾಗೇವಾಡಿ ತಾಲೂಕಿನ ಡೋಣೂರ ಗ್ರಾಮದ ರೈತರು ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದರು.
ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ಬೆಳೆ ಪರಿಹಾರ ಹಣ ಬಹಳಷ್ಟು ರೈತರಿಗೆ ಜಮೆ ಆಗಿಲ್ಲ. ಕೆಲ ರೈತರಿಗೆ ಒಟ್ಟು ಪರಿಹಾರ ₹2000, ಕೆಲವರಿಗೆ ₹5000 ಹಣ ಜಮಾ ಮಾಡಲಾಗಿದೆ. ಒಣ ಬೇಸಾಯಕ್ಕೆ ಪ್ರತಿ ಹೆಕ್ಟೆರ್‌ಗೆ ₹17 ಸಾವಿರ ಹಾಗೂ ನೀರಾವರಿಗೆ ₹25.5 ಸಾವಿರ ಮತ್ತು ಬಹುವಾರ್ಷಿಕ ಬೆಳೆಗಳಿಗೆ ₹31 ಸಾವಿರ ಎಂದು ಸರ್ಕಾರವೇ ನಿಗದಿ ಮಾಡಿದೆ. ಆದರೆ ಬಿಡಿಗಾಸು ನೀಡಿ ಕೈ ತೊಳೆದುಕೊಂಡಿರುವುದು ಯಾವ ನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ ಇಲಾಖೆ ಅಧಿಕೃತ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 3.5 ಲಕ್ಷಕ್ಕೂ ಅಧಿಕ ಹೆಕ್ಟೆರ್ ಬೆಳೆ ನಷ್ಟವಾಗಿದೆ. ಇದಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದ್ದರೂ ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆ ಜಂಟಿ ಸಮೀಕ್ಷೆಯಲ್ಲಿ ಅಧಿಕಾರಿಗಳು ಹಾನಿ ಪ್ರಮಾಣವನ್ನು ತಪ್ಪಾಗಿ ನಮೂದು ಮಾಡಿದ್ದಾರೆ. ಅಲ್ಲದೇ ತಮಗೆ ಇಷ್ಟ ಬಂದಂತೆ ಬರೆದುಕೊಂಡಿದ್ದು ಬೆಳೆ ಹಾನಿ ಪರಿಹಾರ ನೀಡುವಲ್ಲಿ ಬಹಳಷ್ಟು ರೈತರಿಗೆ ಅನ್ಯಾಯ ಮಾಡಿದ್ದು, ತಪ್ಪಿತಸ್ಥ ಅಧಿಕಾರಗಳ ವಿರುದ್ಧ ಜಿಲ್ಲಾಡಳಿತ ಕೂಡಲೇ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡ ಶಿವಪ್ಪ ಮರನೂರ, ಅಮೃತ ಹಳ್ಳಿ, ಭರಮಪ್ಪ ಮರನೂರ, ಗೋಲಪ್ಪ ಕೆರುಟಗಿ, ಮಲ್ಲಿಕಾರ್ಜುನ ಹೂಗಾರ, ಬಸವರಾಜ ಸಜ್ಜನ, ಭೀಮಪ್ಪ ಕುಬಾಣಿ, ಭೀಮರಾಯ ಅಗಸರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.