ಡಾ.ಆನಂದ್ ಕೆ.
ವಿಜಯಪುರ: ಜಿಲ್ಲೆಯಲ್ಲಿರುವ ಬಾಲಕ ಹಾಗೂ ಬಾಲಕಿಯರ ವಸತಿ ನಿಲಯ ಹಾಗೂ ವಸತಿ ಶಾಲೆಗಳಲ್ಲಿರುವ ವಿದ್ಯಾರ್ಥಿಗಳ ಭವಿಷ್ಯ ಹಾಗೂ ಅವರ ಜೀವನ ಸುಂದರಗೊಳಿಸಿಕೊಳ್ಳಲು ಸರ್ಕಾರ ಒದಗಿಸಿರುವ ಸೌಲಭ್ಯಗಳು ಸಮರ್ಪಕವಾಗಿ ದೊರಕುತ್ತಿರುವ ಕುರಿತು ಅಧಿಕಾರಿಗಳು ಸ್ವಯಂಪ್ರೇರಿತವಾಗಿ ವಾರಕ್ಕೊಂದು ಸಲ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿ ಡಾ.ಆನಂದ್ ಕೆ.ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸಲಹೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಸಾಮಾಜಿಕ ಜವಾಬ್ದಾರಿಯೊಂದಿಗೆ ಅಧಿಕಾರಿಗಳು ಮೇಲಿಂದ ಮೇಲೆ ಹಾಸ್ಟೇಲ್‍ಗಳಿಗೆ ಭೇಟಿ ನೀಡಬೇಕು. ಅಲ್ಲಿ ಕಲ್ಪಿಸಲಾಗಿರುವ ಮೂಲ ಸೌಲಭ್ಯ, ಮಕ್ಕಳ ಜ್ಞಾನಾರ್ಜನೆ, ಕಲಿಕಾ ಸಂದರ್ಭದಲ್ಲಿ ಅನುಭವಿಸುತ್ತಿರುವ ಸಮಸ್ಯೆಗಳು ವಿಷಯಗಳ ಮನನ ಮುಂತಾದ ವಿಷಯಗಳ ಪರಿಹಾರ ಒದಗಿಸುವ ನಿಟ್ಟಿನಲ್ಲಿ ವಾರದಲ್ಲಿ ಒಂದು ಬಾರಿ ಒಂದು ವಸತಿ ನಿಲಯ ಹಾಗೂ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿ, ಇದು ಸ್ವಯಂ ಪ್ರೇರಿತ ಕಾರ್ಯವಾಗಿದೆ ಎಂದರು.
ಅಧಿಕಾರಿಗಳು ತಮ್ಮ ದೈನಂದಿನ ವೃತ್ತಿ ಬದುಕಿನಲ್ಲಿ ಅನೇಕ ವಿಷಯಗಳನ್ನು ತಿಳಿದುಕೊಂಡಿರುತ್ತೀರಿ, ತಮ್ಮದೇ ಆದ ಆಸಕ್ತಿ ಕ್ಷೇತ್ರಗಳಿವೆ. ಇಲ್ಲಿನ ವಿದ್ಯಾರ್ಥಿಗಳಿಗೆ ತಮ್ಮ ಆಸಕ್ತಿಯ ವಿಷಯಗಳ ಕುರಿತಾಗಿಯೂ ತಿಳಿಸಿಕೊಡಬಹುದಾಗಿದೆ. ಪರಿಸರ ಅಧ್ಯಯನ, ಭೂಗೋಳ ಶಾಸ್ತ್ರ, ಸಂವಿಧಾನ, ಗಣಿತ, ವಿಜ್ಞಾನಗಳಂತಹ ವಿಷಯಗಳ ಬಗ್ಗೆ ಮಕ್ಕಳಿಗೆ ಪಾಠ ಮಾಡುವುದರ ಮೂಲಕ ಮಕ್ಕಳಿಗೆ ಜ್ಞಾನ ಉಣಬಡಿಸುವ ಕಾರ್ಯ ಮಾಡಬೇಕು. ಮಕ್ಕಳ ಓದಿಗೆ ಮತ್ತಷ್ಟು ಪ್ರೋತ್ಸಾಹಿಸುವ ಮೂಲಕ ಅಲ್ಲಿನ ಗ್ರಂಥಾಲಯ ಬಳಕೆಗೂ ಪ್ರೋತ್ಸಾಹಿಸಬೇಕು. ಅವರ ಸಣ್ಣಪುಟ್ಟ ಸಮಸ್ಯೆ ಆಲಿಸುವ ಮೂಲಕ ಮಕ್ಕಳು ಆಸಕ್ತಿಯಿಂದ ಓದಲು ಪ್ರೇರಣೆ ನೀಡಬೇಕು ಎಂದು ಹೇಳಿದರು.
ಮಕ್ಕಳೊಂದಿಗೆ ಸಮಯ ಕಳೆಯುವುದರಿಂದ ದಿನನಿತ್ಯದ ಕಚೇರಿ ಕೆಲಸದಿಂದ ಕೊಂಚ ಬದಲಾವಣೆಯ ಅನುಭವ ಅಧಿಕಾರಿಗಳಿಗೆ ಆಗುವುದರೊಂದಿಗೆ ಪಾಲಕರಿಂದ ದೂರವಿದ್ದು ವಸತಿ ನಿಲಯದಲ್ಲಿ ಓದುತ್ತಿರುವ ಮಕ್ಕಳಿಗೆ ಮನೆಯ ವಾತಾವರಣ ಸೃಷ್ಟಿಸಲು ಸಹ ಅನುಕೂಲವಾಗುತ್ತದೆ. ಇದರಿಂದ ಅವರಲ್ಲಿ ಸಾಕಷ್ಟು ಓದಿನಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಲು ಇದೊಂದು ಮಹತ್ವದ ಕಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಹೆಚ್ಚುವರಿ ಜಿಲ್ಲಾಧಿಕಾರಿಗಳಾದ ಸೋಮಲಿಂಗ ಗೆಣ್ಣೂರ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮಣ್ಣಗೌಡ ಹಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಾಜಶೇಖರ ಡಂಬಳ, ಮಹಾನಗರ ಪಾಲಿಕೆ ಆಯುಕ್ತರಾದ ವಿಜಯಕುಮಾರ ಮೆಕ್ಕಳಕಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳೊಂದಿಗೆ ಬೆರೆತು ಅವರ ಕಷ್ಟ ಕಾರ್ಪಣ್ಯಗಳನ್ನು ತಿಳಿದುಕೊಂಡು ಸಾಧ್ಯವಾದಷ್ಟು ಪರಿಹರಿಸುವ ನಿಟ್ಟಿನಲ್ಲಿ ತಾವುಗಳು ಸ್ವಯಂ ಪ್ರೇರಿತರಾಗಿ ಈ ಜವಾಬ್ದಾರಿಯನ್ನು ಮಕ್ಕಳ ಹಿತದೃಷ್ಟಿಯಿಂದ ವಹಿಸಿಕೊಂಡು ನಿರ್ವಹಿಸಬೇಕು–ಡಾ.ಆನಂದ ಕೆ., ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.