ADVERTISEMENT

ವಿಜಯಪುರ: ಭಂಡಾರದಲ್ಲಿ ಮಿಂದೆದ್ದ ಭಕ್ತರು

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2025, 7:51 IST
Last Updated 22 ಅಕ್ಟೋಬರ್ 2025, 7:51 IST
ನಾಗಠಾಣದಲ್ಲಿ ಶ್ರೀ ಭೀರದೇವರ - ಪರಮಾನಂದ ದೇವರ ಭಂಡಾರ ಜಾತ್ರೆಯ ನೋಟ
ನಾಗಠಾಣದಲ್ಲಿ ಶ್ರೀ ಭೀರದೇವರ - ಪರಮಾನಂದ ದೇವರ ಭಂಡಾರ ಜಾತ್ರೆಯ ನೋಟ   

ವಿಜಯಪುರ: ತಾಲ್ಲೂಕಿನ ನಾಗಠಾಣ ಗ್ರಾಮದಲ್ಲಿ ಶ್ರೀ ಭೀರದೇವರ ಹಾಗೂ ಶ್ರೀ ಪರಮಾನಂದ ದೇವರ ಭಂಡಾರ ಜಾತ್ರೆ ಭಕ್ತಿಭಾವದಿಂದ ನೆರವೇರಿತು.

ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರ, ಗೋವಾ ಸೇರಿದಂತೆ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸಿ ಭಕ್ತಿಭಾವದಲ್ಲಿ ಮಿಂದೇಳುವ ದೃಶ್ಯ ಮನಮೋಹಕವಾಗಿತ್ತು.

ದೀಪಾವಳಿ ಅಮವಾಸ್ಯೆ ದಿನ ಭೀರದೇವರ ಹಾಗೂ ಪಾಡ್ಯ ದಿನ ಪರಮಾನಂದ ದೇವರ ಶೃಂಗಾರ ಚೌಕಿಯೊಂದಿಗೆ ಸಾರವಾಡ ಗೊಂಬೆ ಕುಣಿತ, ಕರಡಿ ಮಜಲು, ಡೊಳ್ಳು ವಾದ್ಯದೊಂದಿಗೆ ಭಕ್ತರ ಮನೆಗೆ ದರ್ಶನ ಕೊಡುತ್ತಾರೆ. ನಂತರ ಗುಡಿಗೆ ಬರುವ ಸಂದರ್ಭದಲ್ಲಿ ಭಕ್ತರು ಚೌಕಿ ಮತ್ತು ಪಲ್ಲಕ್ಕಿಗಳ ಮೇಲೆ ರಾಶಿ ರಾಶಿಗಟ್ಟಲೆ ಭಂಡಾರ, ಖಾರಿಕ, ಕುರಿ ಉಣ್ಣೆಯನ್ನು ಹಾರಿಸಿದರು.

ADVERTISEMENT

ಡೊಳ್ಳಿನ ಹಾಡಿಕೆ, ಭಾರ ಎತ್ತುವುದು, ಜಂಗಿ ಕುಸ್ತಿ, ಕಬಡ್ಡಿ, ಕ್ರಿಕೆಟ್, ಗುಡ್ಡಗಾಡು ಓಟ, ಸಾಮಾಜಿಕ ನಾಟಕದಂತಹ ಕಾರ್ಯಕ್ರಮಗಳು ಭಕ್ತರ ಮನ ಗೆದ್ದಿವೆ. ಭಕ್ತರು ದೇವರ ಬಳಿ ಬೇಡಿಕೊಂಡ ಹರಕೆಗಳನ್ನು ತೀರಿಸುವ ದೃಶ್ಯ ಸಾಮಾನ್ಯವಾಗಿತ್ತು. ಜಾತ್ರಾ ಕಮೀಟಿ ಹಾಗೂ ಪರಮಾನಂದ ದಾಸೋಹ ಸಮಿತಿ ವತಿಯಿಂದ ನಿರಂತರ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಯಾವುದೇ ಜಾತಿ, ಮತ, ಪಂಥ ಭೇದವಿಲ್ಲದೇ ಎಲ್ಲರೂ ಈ ಜಾತ್ರೆಯಲ್ಲಿ ಭಾಗಿಯಾಗುವುದು ವಿಶೇಷ. ಇಲ್ಲಿಗೆ ಆಗಮಿಸುವ ಪ್ರತಿಯೊಬ್ಬ ಭಕ್ತರು ಭಂಡಾರವನ್ನು ದೇವಾಲಯ ಹಾಗೂ ದೇವರ ಮೇಲೆ ಎಸೆಯುವುದು ಇಲ್ಲಿನ ಸಂಪ್ರದಾಯ. ಜಾತ್ರೆಯಲ್ಲಿ ಕಮೀಟಿಯ ಸರ್ವ ಪದಾಧಿಕಾರಿಗಳು, ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.