ಸಿಂದಗಿ: ಸೆ.18 ರಿಂದ ಇಂದಿನವರೆಗೆ ಪಟ್ಟಣದ ಹಲವು ಪ್ರದೇಶದಲ್ಲಿ ಭೂಮಿಯಿಂದ ಜೋರಾದ ಸಪ್ಪಳ ಕೇಳಿ ಬರುತ್ತಿದ್ದು, ಅದು ಭೂಕಂಪ ಅಲ್ಲ. ಜನತೆ ಆತಂಕ ಪಡುವ ಅಗತ್ಯತೆ ಇಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಮತ್ತು ನಿರ್ವಹಣಾ ಕೇಂದ್ರದ ವಿಜ್ಞಾನಿ ಜಗದೀಶ ಸ್ಪಷ್ಟನೆ ನೀಡಿದರು.
ಇಲ್ಲಿಯ ತಾಲ್ಲೂಕು ಪ್ರಜಾಸೌಧ ಆವರಣದ ಸಭಾಭವನದಲ್ಲಿ ಮಂಗಳವಾರ ಸುದ್ದಿಗಾರರ ಜೊತೆಗೆ ಮಾತನಾಡಿ, ಭೂಮಿಯಲ್ಲಿ ಈ ಸಪ್ಪಳ ಒಂದೆರಡು ಕಿ.ಮೀ ಸುತ್ತಮುತ್ತ ಮಾತ್ರ ಇದೆ. ಇದು ಸ್ಥಳೀಯರಿಗೆ ಆಗುವ ಅನುಭವವಾಗಿದೆ. ಕಲಬುರ್ಗಿ, ಬೀದರ, ವಿಜಯಪುರ ಜಿಲ್ಲೆಗಳು ಬರಪೀಡಿತ ಒಣಪ್ರದೇಶವಾಗಿದ್ದರಿಂದ ಅತ್ಯಧಿಕ ಮಳೆ, ಪ್ರವಾಹದ ನೀರು ಬಂದು ಈ ಭಾಗದ ಭೂಮಿಯಲ್ಲಿರುವ ಕಪ್ಪು ಕಲ್ಲು ಅದರ ಕೆಳಗೆ ಸುಣ್ಣಿನ ಅಂಶವಿರುವುದರಿಂದ ಮಣ್ಣು ಕುಸಿತವಾಗಿ ಈ ರೀತಿ ದೊಡ್ಡದಾಗಿ ಸಪ್ಪಳ ಕೇಳಿ ಬರುತ್ತಿದೆ ಎಂದು ವಿವರಿಸಿದರು.
ಸೆ.23 ರಂದು ಬೆಳಿಗ್ಗೆ ಜೋರಾದ ಸಪ್ಪಳವಾಗಿ ಸ್ವಲ್ಪ ಕಂಪನವಾಗಿರುವ ಅನುಭವವಾಗಿದೆ ಆಗಿದೆ. ಎಂಬ ಮಾಹಿತಿ ಸಾರ್ವಜನಿಕರಿಂದ ಕೇಳಿ ಬಂದಿದೆ. ಇದಕ್ಕಾಗಿ ಯಾರೂ ಆತಂಕ ಪಡಬಾರದು. ಅದರಿಂದ ಯಾವುದೇ ಅಪಾಯ ಆಗುವದಿಲ್ಲ. ಕಟ್ಟಡಗಳಿಗೂ ಯಾವುದೇ ರೀತಿಯ ಹಾನಿಯೂ ಆಗುವದಿಲ್ಲ ಎಂದು ಮನವಿ ಮಾಡಿಕೊಂಡರು.
ಮಳೆಗಾಲದಲ್ಲಿ ಈ ಭಾಗದಲ್ಲಿ ಅತ್ಯಧಿಕ ಮಳೆ, ಪ್ರವಾಹ ಬಂದರೆ ಜೂನ್ ದಿಂದ ಅಕ್ಟೋಬರ್ ಅವಧಿಯಲ್ಲಿ ಹೀಗೆ ಸಪ್ಪಳ ಆಗುವ ಸಂಭವವಿದೆ. ಆದರೆ ಯಾವುದೇ ತೊಂದರೆ ಇಲ್ಲ. ಬಸವನಬಾಗೇವಾಡಿ ತಾಲ್ಲೂಕು ಉಕ್ಕಲಿ ಗ್ರಾಮದಲ್ಲಿ ಈ ಹಿಂದೆ ಅಳವಡಿಸಲಾಗಿದ್ದ ಭೂಕಂಪ ಮಾಪನ ಕೇಂದ್ರವನ್ನು ಸಿಂದಗಿ ತಾಲ್ಲೂಕು ರಾಂಪೂರ ಪಿ.ಎ ಗ್ರಾಮಕ್ಕೆ ಸ್ಥಳಾಂತರಿಸಿದೆ. ಈ ಕೇಂದ್ರದಲ್ಲಿ ಕೂಲಂಕುಷವಾಗಿ ಪರಿಶೀಲಿಸಿದೆ. ಆದರೆ ಭೂಕಂಪದ ದಾಖಲೆ ನಮೂದಾಗಿಲ್ಲ ಎಂದು ತಿಳಿಸಿದರು.
2010 ರಿಂದ 2025, ಸೆ.20 ರವರೆಗೆ ರಾಜ್ಯದಲ್ಲಿ 146 ಬಾರಿ ಈ ರೀತಿ ಭೂಮಿಯಿಂದ ಸಪ್ಪಳ ಕೇಳಿ ಬಂದ ಅನುಭವವಾಗಿದ್ದರೆ ಅದರಲ್ಲಿ ವಿಜಯಪುರ, ಕಲ್ಬುರ್ಗಿ, ಬೀದರ ಜಿಲ್ಲೆಗಳೇ ಅತ್ಯಧಿಕ ಶೇ.50 ರಷ್ಟು ಹೆಚ್ಚಿನ ಪಾಲು ಹೊಂದಿದೆ. ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ-47 ಬಾರಿ, ವಿಜಯಪುರ-22 ಬಾರಿ, ತಿಕೋಟ-4 ಬಾರಿ, ಮುದ್ದೇಬಿಹಾಳ-1 ಬಾರಿ ಹೀಗೆ ಜಿಲ್ಲೆಯಲ್ಲಿ 74 ಬಾರಿ ಭೂಮಿಯಲ್ಲಿ ಸಪ್ಪಳ ಕೇಳಿ ಬಂದ ವರದಿಯಾಗಿದೆ ಎಂದು ವಿವರಿಸಿದರು.
ತಹಶೀಲ್ದಾರ ಕರೆಪ್ಪ ಬೆಳ್ಳಿ ಮಾತನಾಡಿ, ಈ ಬಾರಿ ವಾಡಿಕೆ ಮಳೆಗಿಂದ ಅತ್ಯಧಿಕ ಪ್ರಮಾಣದಲ್ಲಿ ಮಳೆಯಾಗಿದ್ದು ಈ ರೀತಿ ಭೂಮಿಯಲ್ಲಿ ಸಪ್ಪಳ ಆಗಲು ಕಾರಣವಾಗಿದೆ ಎಂದು ನೈಸರ್ಗಿಕ ವಿಕೋಪ ನಿರ್ವಹಣೆ ಕೇಂದ್ರದ ವಿಜ್ಞಾನಿಗಳ ಅಭಿಪ್ರಾಯವಾಗಿದೆ. ಹೀಗಾಗಿ ಯಾವುದೇ ರೀತಿಯ ಹಾನಿ, ತೊಂದರೆ ಆಗುವದಿಲ್ಲ ಜನತೆ ಭಯ, ಆತಂಕಪಡುವ ಅಗತ್ಯ ಇಲ್ಲ ಎಂದು ಮನವಿ ಅವರು ಮಾಡಿಕೊಂಡರು.
ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಮತ್ತು ನಿರ್ವಹಣೆ ಕೇಂದ್ರದ ಸಹಾಯಕ ವಿಜ್ಞಾನಿಗಳಾದ ಸಂತೋಷಕುಮಾರ, ಅಣವೀರಪ್ಪ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.