
ವಿಜಯಪುರ: ಜಿಲ್ಲೆಯ ವಿಜಯಪುರ, ಬಸವನ ಬಾಗೇವಾಡಿ, ತಿಕೋಟಾ, ಮುದ್ದೇಬಿಹಾಳ ತಾಲ್ಲೂಕು ವ್ಯಾಪ್ತಿಗಳಲ್ಲಿ ಸರಣಿ ಲಘು ಭೂಕಂಪನ ಸಂಭವಿಸುತ್ತಿರುವುದರಿಂದ ಜನ ಬೆಚ್ಚಿ ಬಿದ್ದಿದ್ದಾರೆ. 2021ರಿಂದ 2025 ನವೆಂಬರ್ 4ರ ವರೆಗೆ 54 ಸಲ ಲಘು ಭೂಕಂಪನ ಸಂಭವಿಸಿದೆ.
2010ರಿಂದ ಇಲ್ಲಿಯ ವರೆಗೆ 79 ಭಾರಿ ಲಘು ಭೂಕಂಪನ ದಾಖಲಾಗಿದೆ. ಇದೇ ಸಮಯದಲ್ಲಿ ಅತಿ ಕಡಿಮೆ ಪ್ರಮಾಣದ 145 ಸೂಕ್ಷ್ಮ ಕಂಪನಗಳು ದಾಖಲಾಗಿವೆ.
2010ರಲ್ಲಿ 24 ಬಾರಿ, 2011ರಲ್ಲಿ 1, 2021ರಲ್ಲಿ 16, 2022ರಲ್ಲಿ 22, 2023ರಲ್ಲಿ 7, 2024ರಲ್ಲಿ 3 ಹಾಗೂ 2025ರಲ್ಲಿ 6 ಭಾರಿ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಕನಿಷ್ಠ 1.2 ರಿಂದ ಗರಿಷ್ಠ 4.4 ವರೆಗೂ ತೀವ್ರತೆ ದಾಖಲಾಗಿದೆ.
ಸರಣಿ ಭೂಕಂಪನದಿಂದ ಜಿಲ್ಲೆಯ ಜನ ಆತಂಕದಿಂದ ದಿನ ಕಳೆಯುತ್ತಿದ್ದಾರೆ. ಅದೆಷ್ಟೋ ಭಾರಿ ಆತಂಕದಿಂದ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ರಾತ್ರಿಯಿಡೀ ಬೀದಿ, ಬಯಲಲ್ಲಿ ನಿದ್ರೆಯಿಲ್ಲದೇ ಕಾಲ ಕಳೆದಿದ್ದಾರೆ.
ಭೂಕಂಪನದ ವೇಳೆ ಮನೆಯ ವಸ್ತುಗಳು ಅಲುಗಾಡಿದ ಹಾಗೂ ಭೂಮಿಯೊಳಗಿಂದ ಹೊಮ್ಮಿದ ಭಾರೀ ಶಬ್ದಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿವೆ. ಆದರೆ, ಇದುವರೆಗೂ ಯಾವುದೇ ಗುರುತರವಾದ ಹಾನಿ ಸಂಭವಿಸಿಲ್ಲದಿರುವುದು ಜನರು ನಿಟ್ಟುಸಿರು ಬಿಡುವಂತಾಗಿದೆ.
ವಿಜಯಪುರದಲ್ಲಿ ಭೂಕಂಪನವು ಹೆಚ್ಚಾಗಿ ಮಳೆಗಾಲದ ಅವಧಿಯಲ್ಲಿ ಹಾಗೂ ನಂತರ ಸಂಭವಿಸಿವೆ. ಕೆಲವು ಸಲ ಭೂಮಿ ಅಲುಗಾಡಿರುವ ಅನುಭವವಾಗಿದ್ದರೇ, ಇನ್ನು ಕೆಲವೊಮ್ಮ ಅಲುಗಾಡದೇಯೂ ದೊಡ್ಡ ಪ್ರಮಾಣದ ಶಬ್ದ ಹೊರಹೊಮ್ಮಿದೆ.
ಭಾರತೀಯ ಭೂವೈಜ್ಞಾನಿಕ ಸಮೀಕ್ಷಾ (ಜಿಎಸ್‌ಐ) ಕೇಂದ್ರವು ವಿಜಯಪುರ ಜಿಲ್ಲೆಯಲ್ಲಿ ನಿರಂತರವಾಗಿ ಸಂಭವಿಸುತ್ತಿರುವ ಭೂಕಂಪನ ಅಧ್ಯಯನಕ್ಕಾಗಿ ಸಿಂದಗಿ, ಝಳಕಿ ಮತ್ತು ವಿಜಯಪುರದಲ್ಲಿ 9 ಪೋರ್ಟಬಲ್ ಭೂಕಂಪನ ಮಾಪಕಗಳನ್ನು ಅಳವಡಿಸಿ, ಈಗಾಗಲೇ ಅಧ್ಯಯನ ಮಾಡಿದೆ.
ಕರ್ನಾಟಕ ನೈಸರ್ಗಿಕ ವಿಕೋಪ ನಿರ್ವಹಣ ಕೇಂದ್ರವು ಆಲಮಟ್ಟಿ, ಸಿಂದಗಿ, ಕಲಬುರ್ಗಿಯಲ್ಲಿ ಅಳವಡಿಸಿರುವ ರಿಕ್ಟರ್ ಮಾಪಕದಿಂದಲೂ ಭೂಕಂಪನದ ತೀವ್ರತೆ ವಿವರ ದಾಖಲಾಗಿದೆ.
ಭೂಕಂಪನಕ್ಕೆ ಕಾರಣ: ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಅಂತರ್ಜಲ ಮರುಪೂರಣ ವೇಳೆ ಅಂತರ್ಜಲವು ಭೂಮಿಯಲ್ಲಿರುವ ಸುಣ್ಣದ ಅಂಶವಿರುವ ಭಾಗಗಳನ್ನು ಪ್ರವೇಶಿಸಿದಾಗ ಕ್ಯಾಲ್ಸಿಯಂ ಆಕ್ಸೈಡ್ ಉತ್ಪಾದನೆಯಾಗಿ ಕಂಪನಕ್ಕೆ ಕಾರಣ ಆಗುತ್ತಿರಬಹುದು, ಶಿಲಾ ಭಾಗಗಳು ಕುಸಿತದಿಂದ ತರಂಗಗಳು ಉಂಟಾಗಿ ಭೂಗತ ಶಬ್ದಗಳ ಜೊತೆಗೆ ನಡುಕ ಉಂಟಾಗುತ್ತಿರಬಹುದು, ಸುಣ್ಣದ ಕಲ್ಲು ಮತ್ತು ಶಿಲೆಗಳ ನಡುವಿನ ಸಂಘರ್ಷದಲ್ಲಿ ಸೂಕ್ಷ್ಮ-ಭೂಕಂಪನಗಳು ಸಂಭವಿಸುತ್ತಿರಬಹುದು ಎಂದು ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (ಜಿಎಸ್‌ಐ) ಹಾಗೂ ಕೇಂದ್ರ ಸರ್ಕಾರದ ಭೂ ವಿಜ್ಞಾನ ಸಚಿವಾಲಯದ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ(ಎನ್‌ಸಿಎಸ್) ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ.
ಭೂಮಿಯ ಮೇಲ್ಬಾಗದ ಚಲನೆ ಮತ್ತು ಮರು ಜೋಡಣೆ ಸಮಯದಲ್ಲೂ ಸೂಕ್ಷ್ಮ ಭೂಕಂಪನ ಸಂಭವಿಸುತ್ತಿರಬಹುದು. ಆದರೆ, ಈ ಯಾವ ಕಾರಣಗಳು ಇನ್ನೂ ದೃಢೀಕರಿಸಲಾಗಿಲ್ಲ ಎಂದು ಹೇಳಿದೆ.
ಈ ಪ್ರದೇಶದಲ್ಲಿ ಈ ಹಿಂದೆ ಯಾವುದೇ ಗಮನಾರ್ಹ ಪ್ರಮಾಣದ ಭೂಕಂಪನಗಳಾಗಿರುವ ಉದಾಹರಣೆ ಇಲ್ಲ. ದೊಡ್ಡ ಪ್ರಮಾಣದ ಭೂಕಂಪನ ಸಾಧ್ಯತೆಯು ಅತ್ಯಲ್ಪ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಭೂಕಂಪನ: ಸರ್ಕಾರಕ್ಕೆ ಶಿಫಾರಸು ವಿಜಯಪುರ ಜಿಲ್ಲೆಯಲ್ಲಿ ಆಗಾಗ ಲಘು ಭೂಕಂಪನ ಆಗುತ್ತಿರುವುದರಿಂದ ಸ್ಥಳೀಯವಾಗಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿ ಸಮುದಾಯ ಜಾಗೃತಿ ಮೂಡಿಸಬೇಕು ಹಾಗೂ ಕಟ್ಟಡ ನಿರ್ಮಾಣ ಸಂಹಿತೆಗಳನ್ನು ಜಾರಿಗೊಳಿಸಬೇಕು ಎಂದು ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (ಜಿಎಸ್‌ಐ) ಹಾಗೂ ಕೇಂದ್ರ ಸರ್ಕಾರದ ಭೂ ವಿಜ್ಞಾನ ಸಚಿವಾಲಯದ ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರವು ಶಿಫಾರಸು ಮಾಡಿದೆ. ವಿಜಯಪುರ ಜಿಲ್ಲೆಗೆ ಸಂಬಂಧಿಸಿದಂತೆ ಭೂ ರಚನಾತ್ಮಕ ಅಧ್ಯಯನ ಜಲವಿಜ್ಞಾನ ಅಧ್ಯಯನ ಶಿಲೆಗಳ ವಿರೂಪ ಅಧ್ಯಯನ ಭೂಕಂಪನದ ನಿಕಟ ಮೇಲ್ವಿಚಾರಣೆ ಮಾಡಬೇಕು ಎಂದೂ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.