ADVERTISEMENT

ವಿಜಯಪುರ: ಭೀಮಾ ನದಿ ಪ್ರವಾಹಕ್ಕೆ ಸಿಲುಕಿದ್ದ 10 ಜನರ ರಕ್ಷಣೆ, 47 ಮನೆಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 11:50 IST
Last Updated 27 ಸೆಪ್ಟೆಂಬರ್ 2025, 11:50 IST
   

ವಿಜಯಪುರ: ಜಿಲ್ಲೆಯಾದ್ಯಂತ ಎರಡು ದಿನಗಳಿಂದ ಎಡಬಿಡದೆ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. 

ಆಲಮೇಲ ತಾಲ್ಲೂಕಿನ ಶಂಬೇವಾಡ ಗ್ರಾಮದಲ್ಲಿ ಭೀಮಾ ನದಿಯ ಪ್ರವಾಹದಲ್ಲಿ ಸಿಲುಕಿದ್ದ ಮೂವರು ಗರ್ಭಿಣಿಯರು,  ಇಬ್ಬರು ಬಾಲಕರು, ಒಂದು ಮಗು ಸೇರಿದಂತೆ 10ಕ್ಕೂ ಹೆಚ್ಚು ಜನರನ್ನು ಅಗ್ನಿ ಶಾಮಕ ಸಿಬ್ಬಂದಿ ಬೋಟ್‌ ಮೂಲಕ ತೆರಳಿ ರಕ್ಷಣೆ ಮಾಡಿದ್ದಾರೆ. 

654 ಜನರಿಗೆ ಆಶ್ರಯ:

ಭೀಮಾ ನದಿ ಪ್ರವಾಹ ಮತ್ತು ಅತಿವೃಷ್ಟಿಯಿಂದ ಮನೆಗಳಿಗೆ ನೀರು ನುಗ್ಗಿ ಸಂತ್ರಸ್ತರಾಗಿರುವ ಇಂಡಿ ತಾಲ್ಲೂಕಿನ ಅರ್ಜುಣಗಿ ಬಿ.ಕೆ., ಬರಗುಡಿ, ಚಿಕ್ಕ ಮಣೂರ, ಹಿಂಗಣಿ, ಖೇಡಗಿ,ಪಡನೂರ ಆರ್‌.ಎಸ್‌., ಮಿರಗಿ, ಆಲಮೇಲ ತಾಲ್ಲೂಕಿನ ತಾವರಖೇಡ, ಕುಮಸಗಿ, ತಾರಾಪುರ ಹಾಗೂ ಶಂಭೆವಾಡ ಸೇರಿದಂತೆ ಒಟ್ಟು  14 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. 140 ಕುಟುಂಬಗಳ 152 ಮಕ್ಕಳು ಸೇರಿದಂತೆ 654 ಜನರಿಗೆ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ.

ADVERTISEMENT

47 ಮನೆಗಳಿಗೆ ಹಾನಿ:

ಧಾರಾಕಾರ ಮಳೆಯ ಪರಿಣಾಮ ಬಸವನಬಾಗೇವಾಡಿ ತಾಲ್ಲೂಕಿನಲ್ಲಿ 4, ಬಬಲೇಶ್ವರ 1, ನಿಡಗುಂದಿ 1, ತಿಕೋಟಾ 3, ತಾಳಿಕೋಟೆ 2, ವಿಜಯಪುರ 6, ಚಡಚಣ 4, ಸಿಂದಗಿ 4, ಮುದ್ದೇಬಿಹಾಳ 5, ಕೊಲ್ಹಾರ 13,  ದೇವರ ಹಿಪ್ಪರಗಿ 4 ಸೇರಿದಂತೆ 47ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ.

ಇಂಡಿ ಪಟ್ಟಣದ ಅಗರಖೇಡ ರಸ್ತೆಯಲ್ಲಿರುವ ಶಾಂತು ಧನಶೆಟ್ಟಿ ಅವರ ನೆಲ ಮಹಡಿಯ ಗೋದಾಮಿಗೆ ಮಳೆ ನೀರು ನುಗ್ಗಿ, ಅಂದಾಜು ₹1 ಕೋಟಿ ಮೊತ್ತದ ರಸಾಯನಿಕ ಗೊಬ್ಬರ ಮತ್ತು ಔಷಧ ಹಾನಿಯಾಗಿದೆ.

ಇಂಡಿಯಿಂದ ಅಗರಖೇಡಕ್ಕೆ ಹೋಗುವ ಮಾರ್ಗ ಮಳೆ ನೀರಿನಿಂದ ಜಲಾವೃತಗೊಂಡಿದ್ದು, ವಾಹನ ಸಂಚಾರಕ್ಕೆ ತಡೆಯಾಗಿದೆ.

431 ಶಾಲೆಗಳು ಜಲಾವೃತ:

ವಿಜಯಪುರ ಜಿಲ್ಲೆಗೆ ಹೊಂದಿಕೊಂಡಿರುವ ನೆರೆಯ ಸೋಲಾಪುರ ಜಿಲ್ಲೆಯಲ್ಲಿ ಸೀನಾ, ಕೊಳೆಗಾವ್, ಭೀಮಾ ಬೋರಿ, ನದಿಗಳು ಉಕ್ಕಿ ಹರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಜಿಲ್ಲೆಯ 431 ಶಾಲೆಗಳು ಜಲಾವೃತಗೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.