ADVERTISEMENT

ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ ಬೆಂಗಳೂರಿಗೆ ವಿಸ್ತರಣೆ: ಸಿದ್ದನಗೌಡ ಪಾಟೀಲ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 22:40 IST
Last Updated 28 ಅಕ್ಟೋಬರ್ 2025, 22:40 IST
ಸಿದ್ದನಗೌಡ ಪಾಟೀಲ
ಸಿದ್ದನಗೌಡ ಪಾಟೀಲ   

ವಿಜಯಪುರ: ‘ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ 40 ದಿನಗಳಿಂದ ನಡೆದಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ರಾಜ್ಯ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಶೀಘ್ರವೇ ಬೆಂಗಳೂರಿಗೆ ಹೋರಾಟ ವಿಸ್ತರಿಸಲಾಗುವುದು. ನಿರ್ಲಕ್ಷ್ಯ ತೋರಿದ್ದಲ್ಲಿ, ತೀವ್ರ ಸ್ವರೂಪದ ಹೋರಾಟ ಕೈಗೊಳ್ಳಲಾಗುವುದು’ ಎಂದು ಚಿಂತಕ ಸಿದ್ದನಗೌಡ ಪಾಟೀಲ ತಿಳಿಸಿದರು.

‘ಕನಕಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಸಾಧ್ಯವಾಗುವುದಾದರೆ, ವಿಜಯಪುರದಲ್ಲಿ ಯಾಕೆ ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕು? ಜಿಲ್ಲೆಯ ಶಾಸಕರೊಬ್ಬರಿಗೆ ರಾಜಕೀಯ ಲಾಭಕ್ಕಾಗಿ ಮಾತು ಕೊಟ್ಟಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ’ ಎಂದು ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಜನರೇ ಹೋರಾಟ ನಡೆಸಿದ್ದು, ಇದರಲ್ಲಿ ಯಾವುದೇ ರಾಜಕೀಯ ಹಿತಾಸಕ್ತಿ ಇಲ್ಲ. ಎಲ್ಲ ಪಕ್ಷದವರು ಜೊತೆಗೂಡಿ ಸರ್ಕಾರದ ಮೇಲೆ ಒತ್ತಡ ಹೇರಿ, ಸರ್ಕಾರಿ ಕಾಲೇಜು ಸ್ಥಾಪನೆಗೆ ಆಗ್ರಹಿಸಬೇಕು’ ಎಂದರು.

ADVERTISEMENT

‘ವಿಜಯಪುರ ಜಿಲ್ಲೆಯಲ್ಲಿ ನವಜಾತ ಶಿಶು, ತಾಯಿ ಮರಣ, ಅಪೌಷ್ಟಿಕತೆ, ಬಡತನ ಹೆಚ್ಚಿದೆ. ಶೈಕ್ಷಣಿಕವಾಗಿ ಜಿಲ್ಲೆ ಹಿಂದುಳಿದಿದೆ. ಕಾರಣ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಿದರೆ, ಈ ಭಾಗದ ಜನರಿಗೆ ಅನುಕೂಲವಾಗಲಿದೆ’ ಎಂದರು. 

ಪ್ರಮುಖರಾದ ಅರವಿಂದ ಮಾಲಗತ್ತಿ, ಬಸವರಾಜ ಸೂಳಿಬಾವಿ, ಜಿ.ಬಿ.ಪಾಟೀಲ, ವಿದ್ಯಾವತಿ ಅಂಕಲಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.