ADVERTISEMENT

ವಿಜಯಪುರ: ವಿದೇಶಿ ಉದ್ಯೋಗಾಕಾಂಕ್ಷಿಗಳಿಗಾಗಿ ಅಂತರರಾಷ್ಟ್ರೀಯ ಉದ್ಯೋಗ ಮೇಳ ಏ.4ಕ್ಕೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 15:54 IST
Last Updated 2 ಫೆಬ್ರುವರಿ 2026, 15:54 IST
<div class="paragraphs"><p>ವಿಜಯಪುರ: ವಿದೇಶಿ ಉದ್ಯೋಗಾಕಾಂಕ್ಷಿಗಳಿಗಾಗಿ ಅಂತರರಾಷ್ಟ್ರೀಯ ಉದ್ಯೋಗ ಮೇಳ ಏ.4ಕ್ಕೆ</p></div>

ವಿಜಯಪುರ: ವಿದೇಶಿ ಉದ್ಯೋಗಾಕಾಂಕ್ಷಿಗಳಿಗಾಗಿ ಅಂತರರಾಷ್ಟ್ರೀಯ ಉದ್ಯೋಗ ಮೇಳ ಏ.4ಕ್ಕೆ

   

ವಿಜಯಪುರ: ವಿದೇಶಗಳಲ್ಲಿ ಉದ್ಯೋಗ ಬಯಸುವವರಿಗಾಗಿ ಏಪ್ರಿಲ್ 4ರಂದು ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಉದ್ಯೋಗ ಮೇಳ ಆಯೋಜಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಖಾತೆ ಸಚಿವ ಶರಣ ಪ್ರಕಾಶ ಪಾಟೀಲ ಹೇಳಿದರು.

ಕರ್ನಾಟಕ ರಾಜ್ಯ ಕೌಶಲಾಭಿವೃದ್ಧಿ ನಿಗಮದಿಂದ ನಗರದ ದರ್ಬಾರ್‌ ಹೈಸ್ಕೂಲ್‌ ಮೈದಾನದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಬೃಹತ್‌ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

‘ಸ್ಕಿಲ್‌ ಕನೆಕ್ಟ್‌’ ಪೋರ್ಟಲ್‌:

ದೇಶದಲ್ಲಿ ನಿರುದ್ಯೋಗ ಸಮಸ್ಯೆ ಗಂಭೀರವಾಗಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಉದ್ಯೋಗ ಮೇಳ ಆಯೋಜನೆ ಜೊತೆಯಲ್ಲಿ ನಿರಂತರವಾಗಿ ಉದ್ಯೋಗ ಒದಗಿಸುವ ಉದ್ದೇಶದಿಂದ ‘ಸ್ಕಿಲ್‌ ಕನೆಕ್ಟ್‌’ ಎಂಬ ಆನ್‌ಲೈನ್ ಪೋರ್ಟಲ್ ಮೂಲಕವೇ ಉದ್ಯೋಗಕ್ಕೆ ನೋಂದಣಿ, ಆಯ್ಕೆ ಪ್ರಕ್ರಿಯೆ ನಡೆಸಲು ಯೋಜಿಸಲಾಗಿದೆ ಎಂದರು.

ರಾಜ್ಯದಲ್ಲಿ ಪ್ರತಿ ವರ್ಷ 1.5 ಲಕ್ಷ ಜನ ಎಂಜಿನಿಯರಿಂಗ್‌ ಪದವಿ ಪಡೆದುಕೊಳ್ಳುತ್ತಿದ್ದಾರೆ. ಆದರೆ, ಸರಿಯಾದ ಕೌಶಲ ಇಲ್ಲದ ಕಾರಣ ಶೇ 20ರಷ್ಟು ಜನರಿಗೆ ಪ್ಲೇಸ್‌ಮೆಂಟ್ ಆಗುತ್ತಿಲ್ಲ ಎಂದು ಹೇಳಿದರು.

ಯುವ ಜನತೆ ಭಾರತದ ಶಕ್ತಿ

ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಮಾತನಾಡಿ, ಪ್ರಪಂಚದಲ್ಲಿ ಅತಿ ಹೆಚ್ಚು ಯುವ ಜನರು ಇರುವ ದೇಶ ಭಾರತ, 40 ಕೋಟಿಗೂ ಅಧಿಕ ಯುವ ಜನರಿದ್ದಾರೆ, ಯುವ ಜನತೆ ಭಾರತದ ಶಕ್ತಿಯಾಗಿದೆ ಎಂದರು.

ಎಐ ತಂತ್ರಜ್ಞಾನದಿಂದ ಇಡೀ ಜಗತ್ತು ಬದಲಾವಣೆ ಆಗುತ್ತಿದೆ. ಇದಕ್ಕೆ ತಕ್ಕಂತೆ ನಾವು ಬದಲಾವಣೆ ಆಗಬೇಕಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಪ್ರತಿಭೆಗಳಿವೆ, ಅವರಿಗೆ ಸೂಕ್ತ ವೇದಿಕೆ ಸಿಗಬೇಕಿದೆ ಎಂದರು.

ಎಐ ತಂತ್ರಜ್ಞಾನದಿಂದಾಗಿ ಭವಿಷ್ಯದಲ್ಲಿ ಎಂಜಿನಿಯರ್‌, ವೈದ್ಯರು ಸಹ ಸಂಕಷ್ಟ ಎದುರಿಸಬೇಕಾಗುತ್ತದೆ. ಇದಕ್ಕಾಗಿ ನಾವು ಎಐ ತಂತ್ರಜ್ಞಾನ ಸೇರಿದಂತೆ ಹೊಸ ಶಿಕ್ಷಣ ವ್ಯವಸ್ಥೆಗೆ ಮಾರ್ಪಾಡಾಗಬೇಕಿದೆ ಎಂದರು.

2,074 ಹುದ್ದೆಗಳಿಗೆ ಆಯ್ಕೆ

ಉದ್ಯೋಗ ಮೇಳದಲ್ಲಿ ಒಟ್ಟು 25,356 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದು, ಈ ಪೈಕಿ 11,713 ಅಭ್ಯರ್ಥಿಗಳು ಹಾಜರಾಗಿದ್ದರು. 2,074 ಅಭ್ಯರ್ಥಿಗಳು ವಿವಿಧ ಕಂಪನಿಗಳ ವಿವಿಧ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ ಎಂದು ಕೌಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ ತಿಳಿಸಿದ್ದಾರೆ.

4,313 ಅಭ್ಯರ್ಥಿಗಳು ಶಾರ್ಟ್ ಲಿಸ್ಟ್ ಆಗಿದ್ದಾರೆ. ಈ ಮೇಳದಲ್ಲಿ 160 ವಿವಿಧ ಕಂಪನಿಗಳು ನೋಂದಾಯಿಸಿಕೊಂಡು, 141 ಕಂಪನಿಗಳು ಭಾಗವಹಿಸಿದ್ದವು ಎಂದರು.

ಕೌಶಲಾಭಿವೃದ್ದಿ ನಿಗಮದದಿಂದ ‘ನನ್ನ ವೃತ್ತಿ, ನನ್ನ ಆಯ್ಕೆ’ ಸೇರಿದಂತೆ ವಿವಿಧ ತರಬೇತಿಗಳನ್ನು ನೀಡಲಾಗುತ್ತಿದೆ. ಸ್ವಾವಲಂಬಿ ಬದುಕಿಗೆ ಕೌಶಲ್ಯಾಭಿವೃದ್ದಿ ಅವಶ್ಯಕವಿದ್ದು, ಈ ನಿಟ್ಟಿನಲ್ಲಿ  ಮಹಿಳೆಯರು ಸ್ವಾವಲಂಬಿಯಾಗಲು ನಲ್-ಜಲ್ ಯೋಜನೆಯಡಿ ಅಸಾಧಾರಣ ಕೌಶಲ್ಯ ರೂಪಿಸಿಕೊಳ್ಳಲು ತರಬೇತಿ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಚಿತ್ರನಟಿ ಸಪ್ತಮಿಗೌಡ ಮಾತನಾಡಿ, ಉದ್ಯೋಗ ಪ್ರತಿಯೊಬ್ಬರಿಗೂ ಮುಖ್ಯ. ಜೊತೆಗೆ ಕೌಶಲ ಅಗತ್ಯ. ಮಹಿಳೆಯರಾಗಲಿ, ಪುರುಷರಾಗಲಿ ಉದ್ಯೋಗ ಮಾಡಬೇಕು, ಸ್ವಾವಲಂಬಿಯಾಗಬೇಕು ಎಂದರು.

ಕರ್ನಾಟಕ ಕೌಶಲಾಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಸ್ನೇಹಲ್‌ ಆರ್., ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಕನ್ನಾನ್ ಮುಶ್ರೀಫ್, ಜಿಲ್ಲಾಧಿಕಾರಿ ಡಾ.ಆನಂದ ಕೆ., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.