ವಿಜಯಪುರ: ಶೀತಗಾಳಿ, ಚಳಿಗೆ ಜಿಲ್ಲೆ ಗಡಗಡ ನಡುಗುತ್ತಿದೆ. ದಿನವಿಡೀ ಕಚಗುಳಿ ಇಡುತ್ತಿರುವ ಚಳಿ, ಮಂಜು ಮುಸುಕಿದ ವಾತಾವರಣ ವಿಜಯಪುರ ಜಿಲ್ಲೆಯ ಜನತೆಗೆ ಕಾಶ್ಮೀರವನ್ನು ನೆನಪಿಸುತ್ತಿದೆ.
ಒಂದು ವಾರದಿಂದ ಹವಾಮಾನದಲ್ಲಿ ತೀವ್ರ ಬದಲಾವಣೆಯಾಗಿದ್ದು, ದಿನದಿಂದ ದಿನಕ್ಕೆ ತಾಪಮಾನ ಕನಿಷ್ಠ ಮಟ್ಟಕ್ಕೆ ಕುಸಿಯುತ್ತಿದೆ. ಜಿಲ್ಲೆಯಲ್ಲಿ ಸದ್ಯ 8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದ್ದು, ಮುಂದಿನ ದಿನಗಳಲ್ಲಿ 6ರಿಂದ 7 ಡಿಗ್ರಿ ಸೆಲ್ಸಿಯಸ್‌ಗೆ ಕುಸಿಯಲಿದೆ. ಇದು ಸಾಮಾನ್ಯ ದಿನಗಳಿಗಿಂತ 6 ರಿಂದ 7 ಡಿಗ್ರಿ ಸೆಲ್ಸಿಯಸ್ ಕಡಿಮೆ ಇರಲಿದೆ. ಶೀತ ಅಲೆಗಳು ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಪರಿಹಾರ ಕೇಂದ್ರ ಮುನ್ನೆಚ್ಚರಿಕೆ ನೀಡಿದೆ.
ಚಳಿಯ ಪರಿಣಾಮ ಬೀದಿಗಳಲ್ಲಿ ಬೆಳಿಗ್ಗೆ ಮತ್ತು ಸಂಜೆ, ರಾತ್ರಿ ಜನ ಸಂಚಾರ ವಿರಳವಾಗುತ್ತಿದೆ. ಪತ್ರಿಕೆ, ಹಾಲು ಹಾಕುವವರು ಚಳಿಯಿಂದ ತೊಂದರೆಗೆ ಒಳಗಾಗಿದ್ದಾರೆ. ವಾಯು ವಿಹಾರಕ್ಕೆ ಹೋಗುವವರ ಸಂಖ್ಯೆಯು ಕಡಿಮೆಯಾಗಿದೆ. ಚಳಿಯ ಪರಿಣಾಮ ಜನರು ಹೆಚ್ಚು ಹೊತ್ತು ನಿದ್ರೆಗೆ ಜಾರುತ್ತಿದ್ದು, ದೈನಂದಿನ ಚಟುವಟಿಕೆಗಳಲ್ಲಿ ಏರುಪೇರಾಗುತ್ತಿದೆ.
ಚಹಾ, ಕಾಫಿ ಪ್ರಿಯರಿಗೆ ಚಳಿಯ ನೆಪದಲ್ಲಿ ದಿನಕ್ಕೆ ಹಲವು ಬಾರಿ ಹೀರಿ ದೇಹವನ್ನು ಬಿಸಿಯಾಗಿಸಿಕೊಳ್ಳುತ್ತಿದ್ದಾರೆ. ಸ್ವೇಟರ್, ಮಂಕಿ ಕ್ಯಾಪ್, ಜರ್ಕಿನ್, ಸ್ಕಾರ್ಪ್ ಸೇರಿದಂತೆ ಉಣ್ಣೆ ಭಟ್ಟೆಗಳನ್ನು ಧರಿಸುವ ಮೂಲಕ ಚಳಿಯಿಂದ ರಕ್ಷಣೆ ಪಡೆಯುತ್ತಿದ್ದಾರೆ. ಕೆಲವರು ಸಂಜೆ, ಬೆಳಿಗ್ಗೆ ಬೆಂಕಿ ಕಾಯಿಸಿ ಮೈ ಬಿಸಿ ಮಾಡಿಕೊಳ್ಳುವ ದೃಶ್ಯ ಕಂಡುಬರುತ್ತಿದೆ.
ಆರೋಗ್ಯ ಸಮಸ್ಯೆ ಉಲ್ಭಣ:
"ಶೀತಗಾಳಿ, ಚಳಿಯ ಪರಿಣಾಮ ದೈಹಿಕ ಆರೋಗ್ಯದಲ್ಲಿ ಸಾಕಷ್ಟು ಏರುಪೇರಾವಾಗುವ ಸಾಧ್ಯತೆ ಇದೆ. ವಿಶೇಷವಾಗಿ ಚಿಕ್ಕಮಕ್ಕಳು, ವಯೋವೃದ್ಧರಲ್ಲಿ ನೆಗಡಿ, ಜ್ವರ, ಮೂಗು ಕಟ್ಟುವುದು, ಗಂಟಲು ನೋವು, ಕಫ,ಕೆಮ್ಮು, ಉಸಿರಾಟ ತೊಂದರೆಯಂತಹ ಸಮಸ್ಯೆಯಾಗಲಿದೆ. ಶ್ವಾಸಕೋಶ ತೊಂದರೆ ಉಲ್ಭಣಗೊಳ್ಳುವ ಸಾಧ್ಯತೆ ಇರುತ್ತದೆ. ಹೆಚ್ಚು ಮುತುವರ್ಜಿ ವಹಿಸಬೇಕು’ ಎಂದು ವಿಜಯಪುರ ಜಿಲ್ಲಾಸ್ಪತ್ರೆ ಫಿಜಿಸಿಯನ್ (ತಜ್ಞ ವೈದ್ಯರು) ಡಾ. ಶ್ರೀಹರೀಶ ಪೂಜಾರಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಚಳಿಗಾಲದಲ್ಲಿ ಮುಂಜಾನೆ 3 ರಿಂದ 5ರ ಅವಧಿಯಲ್ಲಿ ಕೆಲವರಲ್ಲಿ ಹೃದಯಾಘಾತ, ಪಾರ್ಶ್ವವಾಯುವಾಗುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭ ಎದುರಾದರೆ ತಕ್ಷಣ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯರನ್ನು ಸಂಪರ್ಕಿಸಬೇಕು’ ಎಂದು ಅವರು ಸಲಹೆ ನೀಡಿದರು.
‘ಚಳಿಗಾಲದಲ್ಲಿ ಸಾಮಾನ್ಯವಾಗಿ ಮೈ,ಕೈ, ಮುಖ, ತುಟಿ ಹಾಗೂ ದೇಹದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಸೂಕ್ತವಾದ ಲೋಷನ್‌ಗಳನ್ನು ಬಳಸುವುದು ಉತ್ತಮ’ ಎಂದು ಹೇಳಿದರು.
‘ಚಳಿಗಾಲದಲ್ಲಿ ಐಸ್‌ಕ್ರಿಮ್, ತಂಪು ಪಾನೀಯಗಳನ್ನು ಸೇವಿಸಬಾರದು, ಮಕ್ಕಳಿಗೂ ಕೊಡಿಸಬಾರದು’ ಎಂದು ತಿಳಿಸಿದರು.
‘ಬೆಚ್ಚಗಿನ ಸ್ವೆಟರ್, ಉಣ್ಣೆ ಭಟ್ಟೆಗಳನ್ನು ಧರಿಸುವ ಮೂಲಕ ತಲೆ, ಕಾಲು, ಕೈ ಸೇರಿದಂತೆ ದೇಹವನ್ನು ಚಳಿಯಿಂದ ರಕ್ಷಣೆ ಮಾಡಿಕೊಳ್ಳಬೇಕು’ ಎಂದು ಹೇಳಿದರು.
‘ವಿಟಮಿನ್-ಸಿ ಸಮೃದ್ಧವಾಗಿರುವ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಬೇಕು ಮತ್ತು ಸಾಕಷ್ಟು ಪ್ರಮಾಣದಲ್ಲಿ ಬೆಚ್ಚಗಿನ ಆಹಾರ ಸೇವಿಸಬೇಕು’ ಎಂದು ತಿಳಿಸಿದರು.
‘ಶೀತ ವಾತಾವರಣದಿಂದ ಜಾನುವಾರುಗಳಿಗೆ ರಕ್ಷಿಸಲು ರಾತ್ರಿಯ ಸಮಯದಲ್ಲಿ ಶೆಡ್‌ಗಳ ಒಳಗೆ ಬೆಚ್ಚಗೆ ಇರಿಸಲು ಕ್ರಮಕೈಗೊಳ್ಳಬೇಕು’ ಎಂದು ಹೇಳಿದರು.
ಶೀತಗಾಳಿ ಬೀಸುವುದರಿಂದ ಬೆಳಿಗ್ಗೆ ಮತ್ತು ಸಂಜೆ ವೇಳೆ ಹಾಗೂ ರಾತ್ರಿ ಹೊತ್ತಿನಲ್ಲಿ ಹೊರಗಡೆ ತಿರುಗಾಡುವುದನ್ನು ಕಡಿಮೆ ಮಾಡಬೇಕುಡಾ. ಶ್ರೀಹರೀಶ ಪೂಜಾರಿಫಿಜಿಸಿಯನ್ ಜಿಲ್ಲಾಸ್ಪತ್ರೆವಿಜಯಪುರ
ನಿರ್ಗತಿಕರಿಗೆ ಹೊದಿಕೆ ವಿತರಣೆ
ವಿಜಯಪುರ: ನಗರದ ರಸ್ತೆ ಬಸ್ ನಿಲ್ದಾಣ ಮಾರುಕಟ್ಟೆ ಮಸೀದಿ ಮಂದಿರಗಳ ಎದುರು ಚಳಿಯಲ್ಲೇ ದಿನಕಳೆಯುತ್ತಿರುವ ಅನಾಥರಿಗೆ ನಿರ್ಗತಿಕರಿಗೆ ನಿರಾಶ್ರಿತರಿಗೆ ಕೇರಿಂಗ್ ಸೋಲ್ಸ್ ಇಂಡಿಯಾ ಚಾರಿಟೇಬಲ್ ಟ್ರಸ್ಟ್ ಹೊದಿಕೆ ಹಾಸಿಗೆಯನ್ನು ವಿತರಿಸಿ ಮಾನವೀಯತೆ ಮೆರೆದಿದೆ. ‘ನಗರದಲ್ಲಿ 300ಕ್ಕೂ ಅಧಿಕ ಅನಾಥರಿಗೆ ನಿರ್ಗತಿಕರಿಗೆ ಹೊದಿಕೆ ಹಾಸಿಗೆ ವಿತರಿಸಿದ್ದೇವೆ’ ಎಂದು ಕೇರಿಂಗ್ ಸೋಲ್ಸ್ ಇಂಡಿಯಾ ಚಾರಿಟೇಬಲ್ ಟ್ರಸ್ಟ್‌ನ ಪ್ರಮುಖ ಆಸೀಫ್ ಇಕ್ಬಾಲ್ ದೊಡಮನಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.