ADVERTISEMENT

ವಿಜಯಪುರ | ದುಬಾರಿ ಅರ್ಜಿ ಶುಲ್ಕ ಕೈಬಿಡಲು ಆಗ್ರಹ: ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 5:05 IST
Last Updated 14 ಅಕ್ಟೋಬರ್ 2025, 5:05 IST
ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಎದುರು ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು
ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಎದುರು ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು   

ವಿಜಯಪುರ: ವಿವಿಧ ಹುದ್ದೆಗಳಿಗೆ ನೇಮಕ ಸಂಬಂಧ ಕೆ.ಇ ಎ. ಅಧಿಸೂಚನೆ ಹೊರಡಿಸಿ, ನಿಗದಿಪಡಿಸಿರುವ ದುಬಾರಿ ಅರ್ಜಿ ಶುಲ್ಕವನ್ನು ಕೈಬಿಡಬೇಕು ಹಾಗೂ ಖಾಲಿ ಹುದ್ದೆಗಳ ಭರ್ತಿ ಮಾಡಬೇಕು ಎಂದು ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯಿಂದ ಸೋಮವಾರ ಪ್ರತಿಭಟಿಸಲಾಯಿತು.

ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ 2.86 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಆದರೆ, ಈಗ ಕೇವಲ 708 ಹುದ್ದೆಗಳನ್ನು ಮಾತ್ರ ನೇಮಕಾತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. 5 ರಿಂದ 8 ಇಲಾಖೆ/ನಿಗಮ/ಮಂಡಳಿಗಳಲ್ಲಿ ಕರೆಯಲಾಗಿರುವ ಈ ಸೀಮಿತ ಹುದ್ದೆಗಳಿಗೆ ಒಬ್ಬ ಅಬ್ಯರ್ಥಿಯು ಅರ್ಜಿ ಸಲ್ಲಿಸಲು ಕನಿಷ್ಠ ₹750 ಹಾಗೂ ಗರಿಷ್ಠ ₹ 2ಸಾವಿರಗಳಷ್ಟು ಅರ್ಜಿ ಶುಲ್ಕ ಪಾವತಿಸಬೇಕಿದೆ.ಈ ದುಬಾರಿ ಶುಲ್ಕವನ್ನು ಕೂಡಲೇ ಕೈ ಬಿಡಬೇಕು ಎಂದು ಆಗ್ರಹಿಸಿದರು. 

ಕಳೆದ ಹಲವಾರು ವರ್ಷಗಳಿಂದಲೂ ನೇಮಕಾತಿ ಇಲ್ಲದಿದ್ದರೂ ಚಾತಕ ಪಕ್ಷಿಯಂತೆ ನೇಮಕಾತಿಗಾಗಿ ಕಾಯುತ್ತಾ, ಸಾವಿರಾರು ರೂಪಾಯಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಉದ್ಯೋಗಾಕಾಂಕ್ಷಿಗಳು ಖರ್ಚು ಮಾಡಿಕೊಂಡಿದ್ದಾರೆ. ಹಗಲಿರುಳು ಕೂಲಿ ಮಾಡಿ, ಸಾಲ ಮಾಡಿ ಅವರ ಪೋಷಕರು ಅವರಿಗೆ ಓದಲು ಸಹಕಾರ ನೀಡಿದ್ದಾರೆ. ಆದರೆ, ಈಗ ಲಕ್ಷಾಂತರ ಹುದ್ದೆಗಳು ಖಾಲಿ ಇದ್ದರೂ ಅಲ್ಪ-ಸ್ವಲ್ಪ ಹುದ್ದೆಗಳಿಗೆ ಅರ್ಜಿ ಕರೆದು, ಬಡ ಉದ್ಯೋಗಾಕಾಂಕ್ಷಿಗಳಿಂದಲೇ ಅರ್ಜಿ ಶುಲ್ಕದ ಹೆಸರಲ್ಲಿ ಕೋಟ್ಯಾಂತರ ಹಣ ದೋಚಲು ಸರ್ಕಾರ ಮುಂದಾಗಿರುವುದು  ವಿದ್ಯಾರ್ಥಿ-ಯುವಜನ ವಿರೋಧಿ ಕ್ರಮವಾಗಿದೆ ಎಂದು ಆರೋಪಿಸಿದರು.

ADVERTISEMENT

ಕೂಡಲೇ ಈ ದುಬಾರಿ ಅರ್ಜಿ ಶುಲ್ಕವನ್ನು ಕೈಬಿಡಬೇಕು ಹಾಗೂ ಖಾಲಿ ಇರುವ ಲಕ್ಷಾಂತರ ಹುದ್ದೆಗಳನ್ನು ಒಮ್ಮೇಲೆ ಭರ್ತಿ ಮಾಡಿಕೊಳ್ಳಬೇಕು ಹಾಗೂ ನೇಮಕಾತಿಗಾಗಿ ನಡೆಯುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಭ್ರಷ್ಟಾಚಾರ ಮುಕ್ತವಾಗಿ, ಪಾರದರ್ಶಕವಾಗಿ ನಡೆಸಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.