ADVERTISEMENT

ಹದಗೆಟ್ಟ ಮರಾಠ ವಿದ್ಯಾಮಂದಿರ ಎದುರು ರಸ್ತೆ

ವರ್ಷಕ್ಕೆ ಎರಡು ಬಾರಿ ಡಾಂಬರ್‌ ತೇಪೆ ಬಳಿಯುವ ಮಹಾನಗರ ಪಾಲಿಕೆ

ಬಸವರಾಜ ಸಂಪಳ್ಳಿ
Published 6 ಫೆಬ್ರುವರಿ 2026, 5:09 IST
Last Updated 6 ಫೆಬ್ರುವರಿ 2026, 5:09 IST
ವಿಜಯಪುರ ನಗರ ಅತಾವುಲ್ಲಾ ಸರ್ಕಲ್‌ನಿಂದ ಮನಗೂಳಿ ಅಗಸಿ ಕಡೆ ಸಾಗುವ ಮಾರ್ಗದಲ್ಲಿ ಮರಾಠ ವಿದ್ಯಾ ಮಂದಿರ ಎದುರಿಗೆ ಹದಗೆಟ್ಟಿರುವ ರಸ್ತೆ– ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ
ವಿಜಯಪುರ ನಗರ ಅತಾವುಲ್ಲಾ ಸರ್ಕಲ್‌ನಿಂದ ಮನಗೂಳಿ ಅಗಸಿ ಕಡೆ ಸಾಗುವ ಮಾರ್ಗದಲ್ಲಿ ಮರಾಠ ವಿದ್ಯಾ ಮಂದಿರ ಎದುರಿಗೆ ಹದಗೆಟ್ಟಿರುವ ರಸ್ತೆ– ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ   

ವಿಜಯಪುರ: ನಗರ ‘ಅತಾವುಲ್ಲಾ’ ಸರ್ಕಲ್‌ನಿಂದ ಮನಗೂಳಿ ಅಗಸಿ ಕಡೆ ಸಾಗುವ ಮಾರ್ಗದಲ್ಲಿ ಮರಾಠ ವಿದ್ಯಾ ಮಂದಿರ ವರೆಗೆ ಸುಮಾರು 200 ಮೀಟರ್‌ನಷ್ಟು ಹದಗೆಟ್ಟಿರುವ ರಸ್ತೆ ಆರು ತಿಂಗಳಿಂದ ದುರಸ್ತಿಗಾಗಿ ಕಾದಿದೆ. ಆದರೆ, ದುರಸ್ತಿ ಮಾಡಲಾಗದ ಪರಿಸ್ಥಿತಿ ಮಹಾನಗರ ಪಾಲಿಕೆಗೆ ಬಂದಿರುವುದು ಇಲ್ಲಿಯ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಮರಾಠ ವಿದ್ಯಾ ಮಂದಿರ, ಅಂಜುಮನ್‌ ಕಾಲೇಜು ಸೇರಿದಂತೆ ಪ್ರಮುಖ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ವಿಆರ್‌ಎಲ್‌ ಸೇರಿದಂತೆ ವಿವಿಧ ಖಾಸಗಿ ಕಂಪನಿಗಳ ಕಚೇರಿಗಳು, ಸಾವಿರಾರು ಮನೆಗಳು ಈ ರಸ್ತೆಯಲ್ಲಿವೆ. ದಿನವಿಡೀ ಈ ರಸ್ತೆಯಲ್ಲಿ ಬಸ್, ಕಾರು, ಬೈಕ್ ಸೇರಿದಂತೆ ಸಾವಿರಾರು ವಾಹನಗಳು ಚಲಿಸುತ್ತವೆ. ಪ್ರತಿ ದಿನ ಈ ಮಾರ್ಗವಾಗಿಯೇ ಅಧಿಕಾರಿಗಳು ಸಂಚರಿಸುತ್ತಾರೆ.

ಮರಾಠ ವಿದ್ಯಾ ಮಂದಿರದಿಂದ ಅತಾವುಲ್ಲಾ ಸರ್ಕಲ್‌ ವರೆಗೆ ಜಲ್ಲಿ, ಡಾಂಬರ್‌ ಎದ್ದು, ಗುಂಡಿಬಿದ್ದು, ದೂಳುಮಯವಾದ ರಸ್ತೆ ಎಲ್ಲಿದೆ ಎಂದು ಹುಡುಕಬೇಕಿದೆ. ಇಲ್ಲೊಂದು ರಸ್ತೆ ಈ ಹಿಂದೆ ಇತ್ತು ಎಂದು ಅಂದಾಜಿಸಿಯೇ ವಾಹನಗಳನ್ನು ಓಡಿಸಬೇಕಾಗುತ್ತದೆ.

ADVERTISEMENT

ಅತಾವುಲ್ಲಾ ಸರ್ಕಲ್‌ನಿಂದ ಮರಾಠ ವಿದ್ಯಾ ಮಂದಿರದ ವರೆಗೆ ರಸ್ತೆಯು ನೇರವಾಗಿರದೇ ತಿರುವು–ಮುರುವಿನಿಂದ ಕೂಡಿದೆ. ಹೀಗಾಗಿ ಲಾರಿ, ಬಸ್ ಸೇರಿದಂತೆ ಭಾರೀ ವಾಹನಗಳು ನಿತ್ಯ ಇಲ್ಲಿ ಸಂಚರಿಸುವುದರಿಂದ ಭಾರಕ್ಕೆ ರಸ್ತೆ ಬೇಗ ಗುಂಡಿಬಿದ್ದು, ಹದಗೆಡುತ್ತಿವೆ. ಅಲ್ಲದೇ, ರಸ್ತೆ ನಿರ್ಮಾಣ ಮಾಡಿ ಸ್ವಲ್ಪ ದಿನಗಳಲ್ಲೇ ಕುಡಿಯುವ ನೀರು ಪೂರೈಕೆ ಪೈಪ್‌, ಒಳಚರಂಡಿ ಪೈಪ್‌ಗಳ ಅಳವಡಿಕೆ, ದುರಸ್ತಿಗಾಗಿ ಸುಸಜ್ಜಿತ ರಸ್ತೆಯನ್ನು ಅಗೆದು ಹಾಕಿ, ಹಾಗೆಯೇ ಬಿಡಲಾಗುತ್ತಿದೆ. ಇದರಿಂದ ರಸ್ತೆ ಹಾಳಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಎರಡು ವರ್ಷದಲ್ಲಿ ನಾಲ್ಕು ಬಾರಿ ದುರಸ್ತಿ ಮಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಆದ ಕಾರಣ ಈ ರಸ್ತೆಗೆ ಡಾಂಬರ್‌ ತೇಪೆ ಹಚ್ಚುವ ಬದಲಿಗೆ ಕಾಂಕ್ರೀಟ್‌ ರಸ್ತೆಯನ್ನಾಗಿ ಮಾಡಿದರೆ ಮಾತ್ರ ಬಹುಕಾಲ ಉಳಿಯಲಿದೆ. ಇಲ್ಲವಾದರೆ ವರ್ಷಕ್ಕೆ ಎರಡು ಬಾರಿ ರಸ್ತೆ ಮಾಡಬೇಕಾಗುತ್ತದೆ.

ಭಾರೀ ಮತ್ತು ಅಧಿಕ ವಾಹನಗಳ ಸಂಚಾರದಿಂದ ಜಲ್ಲಿ ಕಲ್ಲುಗಳು ಎದ್ದು ಬಿದ್ದಿದ್ದು, ದೊಡ್ಡ ವಾಹನಗಳ ಟೈರಿಗೆ ಸಿಲುಕಿ ಏಕಾಏಕಿ ಗುಂಡಿನಂತೆ ಸಿಡಿಯುತ್ತವೆ. ರಸ್ತೆಯ ಅಕ್ಕಪಕ್ಕದಲ್ಲಿ ತೆರಳುವ ಪಾದಾಚಾರಿಗಳು, ಬೈಕ್‌ ಸವಾರರಿಗೆ ಜಲ್ಲಿ ಕಲ್ಲುಗಳು ಬಡಿಯುತ್ತವೆ. ಅಲ್ಲದೇ, ರಸ್ತೆ ಪಕ್ಕದಲ್ಲಿರುವ ಮನೆಗಳ ಒಳಗೂ ಏಕಾಏಕಿ ಜಲ್ಲಿ ಕಲ್ಲುಗಳು ತೂರಿ ಬರುತ್ತವೆ. ಪ್ರತಿದಿನ ಇಲ್ಲಿಯ ನಿವಾಸಿಗಳೇ ದೂಳು ಮನೆಯೊಳಗೆ ಬಾರದಿರಲಿ ಎಂದು ಪ್ರತಿದಿನ ಬೆಳಿಗ್ಗೆ, ಸಂಜೆ ತಾವೇ ನೀರನ್ನು ರಸ್ತೆಗೆ ಸಿಂಪಡಿಸುತ್ತಿದ್ದಾರೆ.

ವಿಜಯಪುರ ಮರಳಿ ‘ದೂಳಾಪುರ’ವಾಗುತ್ತಿರುವುದಕ್ಕೆ ಈ ರಸ್ತೆಗಿಂತ ಮತ್ತೊಂದು ಕೆಟ್ಟ ಉದಾಹರಣೆ ಬೇಕಿಲ್ಲ ಎನ್ನುತ್ತಾರೆ ಸಾಮಾಜಿಕ ಹೋರಾಟಗಾರ್ತಿ ಲಲಿತಾ ಬಿಜ್ಜರಗಿ.

ಅತಾವುಲ್ಲಾ ಸರ್ಕಲ್‌ನಿಂದ ಮನಗೂಳಿ ಅಗಸಿ ಕಡೆಗೆ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟು ಜನ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಆದಷ್ಟು ಶೀಘ್ರ ಇದನ್ನು ದುರಸ್ತಿ ಮಾಡಬೇಕು.
ಲಲಿತಾ ಬಿಜ್ಜರಗಿ ಸಾಮಾಜಿಕ ಕಾರ್ಯಕರ್ತೆ ವಿಜಯಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.