ವಿಜಯಪುರ: ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ ದಿನದಿಂದ ದಿನಕ್ಕೆ ವ್ಯಾಪಕ ಜನ ಬೆಂಬಲ ಪಡೆದುಕೊಳ್ಳುತ್ತಿದ್ದು, ಈ ನಡುವೆ ಧರಣಿ ಸ್ಥಳಕ್ಕೆ ಸಂಸದ ರಮೇಶ ಜಿಗಜಿಣಗಿ ನೇತೃತ್ವದಲ್ಲಿ ಬಿಜೆಪಿ ಜಿಲ್ಲಾ ಘಟಕದ ನಿಯೋಗ ಬುಧವಾರ ಭೇಟಿ ನೀಡಿ, ಬೆಂಬಲ ವ್ಯಕ್ತಪಡಿಸಿದೆ.
ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಜಿಲ್ಲೆಯ ಎಲ್ಲಾ ಜನತೆ ಒಂದಾಗಿ ಖಾಸಗಿ ಸಹಭಾಗಿತ್ವ (ಪಿಪಿಪಿ) ಯೋಜನೆಯನ್ನು ವಿರೋಧಿಸಿ ಹೋರಾಟ ಕೈಗೊಂಡಿದ್ದಿರಿ, ಅದು ಬೇಡವೆಂಬುದು ಎಲ್ಲರ ಮನಸ್ಸಿನಲ್ಲಿದೆ. ನಾನು ಈಗಾಗಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಗಮನಕ್ಕೆ ತರುವ ಕೆಲಸ ಮಾಡಿರುವೆ ಎಂದರು.
ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾಗೆ ಈ ಸಂಬಂಧ ಮನವಿ ಸಲ್ಲಿಸಿದ್ದೇನೆ. ಯಾವುದೇ ಕಾರಣಕ್ಕೂ ವಿಜಯಪುರದ ಜನತೆ ಪಿಪಿಪಿ ಮಾದರಿಯನ್ನು ಒಪ್ಪುವುದಿಲ್ಲ, ಯಾವ ಕಾರಣಕ್ಕೂ ವಿಜಯಪುರದಲ್ಲಿ ಪಿಪಿಪಿ ಯೋಜನೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಬಾರದು ಎಂದು ಮನವಿ ಮಾಡಲಾಗಿದೆ ಎಂದು ಹೇಳಿದರು.
ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಒತ್ತಾಯಿಸಿ ನಡೆಯುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹಕ್ಕೆ ನಾನು ಸಂಪೂರ್ಣವಾಗಿ ಬೆಂಬಲವನ್ನು ನೀಡುತ್ತೇನೆ. ಇದರಲ್ಲಿ ಯಾರ ಒಬ್ಬರ ವೈಯಕ್ತಿಕ ಹಿತಾಸಕ್ತಿ ಇಲ್ಲದೆ, ಎಲ್ಲರೂ ಸೇರಿ ವೈದ್ಯಕೀಯ ಕಾಲೇಜು ತರಬೇಕಾಗಿದೆ, ಬಡವರಿಗೆ, ಸಾಮಾನ್ಯ ಜನರಿಗೆ ಎಲ್ಲರಿಗೂ ಇದು ಉಪಯೋಗವಾಗವಂತಹದ್ದಾಗಿದೆ ಎಂದರು.
ಶ್ರೀಮಂತರು ಖಾಸಗಿ ಆಸ್ಪತ್ರೆಗಳಲ್ಲಿ ದುಡ್ಡು ಕೊಟ್ಟು ಆರೋಗ್ಯ ಸರಿಪಡಿಸಿಕೊಳ್ಳುತ್ತಾರೆ. ಆದರೆ, ಜಿಲ್ಲೆಯಲ್ಲಿರುವ ಕಡುಬಡವರು ದುಡಿಯುವ ಜನರು ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಕಷ್ಟ ಪಡುತ್ತಿರಬೇಕಾದರೆ ಅವರಿಗೆ ಆರೋಗ್ಯ ಸಮಸ್ಯೆ ಬಂದಾಗ ಸ್ಪಂದಿಸುವರು ಯಾರು? ಅಂತವರಿಗೆ ಸರ್ಕಾರಿ ಆಸ್ಪತ್ರೆಗಳು, ಸರ್ಕಾರಿ ವೈದ್ಯಕೀಯ ಕಾಲೇಜು ಅವರಿಗೆ ಸೇವೆ ನೀಡುವಂತಾದರೆ ಬಡವರ ಜೀವಗಳು ಉಳಿಯುತ್ತವೆ ಎಂದು ಹೇಳಿದರು.
ಜಿಲ್ಲೆಗೆ ಏಮ್ಸ್ ತರುವುದೇ ನನ್ನ ಉದ್ದೇಶವಾಗಿದೆ. ಜಿಲ್ಲೆಯ 15 ಲಕ್ಷ ಜನರ ಹಿತಾಸಕ್ತಿ ಈಡೇರಿಸಲು ನಾನು ಮಾತನಾಡುವೆ ಎಂದು ಹೋರಾಟಗಾರರ ತಿಳಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ, ಚಂದ್ರಶೇಖರ ಕವಟಗಿ, ಗುರಲಿಂಗಪ್ಪ ಅಂಗಡಿ, ಸುರೇಶ ಬಿರಾದಾರ, ಉಮೇಶ ಕಾರಜೋಳ, ಭೋಗೇಶ ಸೋಲಾಪುರ, ಉಮೇಶ ಕೋಳಕೂರ, ನವಸ್ಫೂರ್ತಿ ಸಂಘದ ಅಧ್ಯಕ್ಷ ಶಬ್ಬೀರ ಕಾಗಜಕೋಟ, ಮಲ್ಲಿಕಾರ್ಜುನ ಎಚ್. ಟಿ, ಮಲ್ಲಿಕಾರ್ಜುನ ಹಿರೇಮಠ, ಕಾಶಿಬಾಯಿ ಜನಗೊಂಡ, ಪ್ರವೀಣ ಚಿಕ್ಕಲಕಿ, ಗಿರೀಶ ಕಲಘಟಗಿ, ಲಕ್ಷ್ಮಣ ಕಂಬಾಗಿ, ಉಮೇಶ ವಾಲಿಕಾರ, ಲಂಕೇಶ ತಳವಾರ, ಅರವಿಂದ ಕುಲಕರ್ಣಿ, ಅನಿಲ ಹೊಸಮನಿ, ಫಯಾಜ್ ಕಲಾದಗಿ, ಶ್ರೀನಾಥ ಪೂಜಾರಿ, ಸಿದ್ದರಾಮ ಹಳ್ಳೂರ, ಪ್ರಭುಗೌಡ ಪಾಟೀಲ, ಮಲ್ಲಿಕಾರ್ಜುನ ಕೆಂಗಿನಾಳ, ಮಲ್ಲಿಕಾರ್ಜುನ ಬಟಗಿ, ದಸ್ತಗೀರ್ ಉಕ್ಕಲಿ, ಸಿದ್ದನಗೌಡ ಪಾಟೀಲ, ಶಿವಬಾಳಮ್ಮ ಕೊಂಡಗೂಳಿ, ಮಹಾದೇವಿ ಧರ್ಮಶೆಟ್ಟಿ, ಶರಣಬಸಪ್ಪ ಗಂಗಶೆಟ್ಟಿ, ಗುಲಾಬ್, ರೇಣುಕಾ ಶಾಂತಗೌಡ, ಯಮನವ್ವ ಭಾಗವಹಿಸಿದ್ದರು.
Quote - ಜಿಲ್ಲೆಯಲ್ಲಿ ಸಂಪೂರ್ಣವಾಗಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಪಕ್ಷದ ನಾಯಕದೊಂದಿಗೆ ಚರ್ಚಿಸಿ ಪ್ರಾಮಾಣಿಕವಾಗಿ ನಾನು ಪ್ರಯತ್ನ ಮಾಡುತ್ತೇನೆ -ರಮೇಶ ಜಿಗಜಿಣಗಿಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.