ADVERTISEMENT

ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜು: ಜನರ ಹೋರಾಟಕ್ಕೆ ಸ್ಪಂದಿಸದ ರಾಜ್ಯ ಸರ್ಕಾರ

ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ 50 ದಿನ

ಬಸವರಾಜ ಸಂಪಳ್ಳಿ
Published 7 ನವೆಂಬರ್ 2025, 6:01 IST
Last Updated 7 ನವೆಂಬರ್ 2025, 6:01 IST
ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕು ಎಂದು ಆಗ್ರಹಿಸಿ ನಗರದ ಗಾಂಧಿಚೌಕಿಯಲ್ಲಿ ಗುರುವಾರ ಮಾನವ ಸರಪಳಿ ರಚಿಸಿ ಪ್ರತಿಭಟಿಸಲಾಯಿತು
ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕು ಎಂದು ಆಗ್ರಹಿಸಿ ನಗರದ ಗಾಂಧಿಚೌಕಿಯಲ್ಲಿ ಗುರುವಾರ ಮಾನವ ಸರಪಳಿ ರಚಿಸಿ ಪ್ರತಿಭಟಿಸಲಾಯಿತು   

ವಿಜಯಪುರ: ಖಾಸಗಿ–ಸಾರ್ವಜನಿಕ ಸಹಭಾಗಿತ್ವ(ಪಿಪಿಪಿ) ಕೈಬಿಟ್ಟು ಪೂರ್ಣ ಪ್ರಮಾಣದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕು ಎಂದು ಆಗ್ರಹಿಸಿ ಬಿಸಿಲು, ಮಳೆಯನ್ನು ಲೆಕ್ಕಿಸದೇ ವಿಜಯಪುರದಲ್ಲಿ ನಡೆಯುತ್ತಿರುವ ಧರಣಿ 50 ದಿನ ಪೂರೈಸಿದೆ. ಆದರೆ, ಇದುವರೆಗೂ ಜಿಲ್ಲೆಯ ಸಚಿವರು, ಶಾಸಕರಿಂದ ಕೇವಲ ಬಾಯಿ ಮಾತಿನ ಭರವಸೆಗಳು ಸಿಕ್ಕಿವೆಯೇ ಹೊರತು, ಸರ್ಕಾರದಿಂದ ಅಧಿಕೃತ ಘೋಷಣೆಯಾಗಿಲ್ಲ.

ಜಿಲ್ಲೆಗೆ ಸಂಬಂಧಿಸಿದಂತೆ ಈ ಹಿಂದೆ ಯಾವುದೇ ಜನಪರ ವಿಷಯವಾಗಿ ಎಡ, ಬಲ, ದಲಿತ, ರೈತ, ಮಹಿಳಾ, ಕನ್ನಡಪರ ಸಂಘಟನೆಗಳು, ರಾಜಕೀಯ ಪಕ್ಷಗಳು ಒಂದಾಗಿ ಪ್ರತಿಭಟನೆ ನಡೆಸಿರಲಿಲ್ಲ. ಇದೇ ಮೊದಲ ಬಾರಿಗೆ ತಮ್ಮ ವಿಚಾರಬೇಧವನ್ನು ಮರೆತು ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಹೋರಾಟ ಸಮಿತಿ ರಚಿಸಿಕೊಂಡು ರಾಜಿ ರಹಿತ ಹೋರಾಟ ನಡೆಸುತ್ತಿದ್ದಾರೆ.

ವಿದ್ಯಾರ್ಥಿ, ಯುವ ಸಂಘಟನೆಗಳು, ರೈತರು, ಅಂಗವಿಕಲರು, ಮಹಿಳಾ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ರಾಜಕೀಯ ಪಕ್ಷಗಳು, ಕನ್ನಡ ಪರ ಸಂಘಟನೆಗಳು, ದಲಿತ ಸಂಘಟನೆಗಳು, ಟ್ರೇಡ್‌ ಯೂನಿಯನ್‌, ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು  ಧರಣಿಯಲ್ಲಿ ಪಾಲ್ಗೊಂಡು ಬೆಂಬಲಿಸಿದರೂ ಸರ್ಕಾರ ಕಿವಿಗೊಡುತ್ತಿಲ್ಲ.

ADVERTISEMENT

ಪಂಜಿನ ಮೆರವಣಿಗೆ, ರಕ್ತ ಸಹಿ ಸಂಗ್ರಹ, ಪತ್ರ ಚಳವಳಿ, ಮಾನವ ಸರಪಳಿ ನಿರ್ಮಿಸಿ ಪರಿಪರಿಯಾಗಿ ಬೇಡಿಕೊಂಡರೂ ರಾಜ್ಯ ಸರ್ಕಾರ ಇದುವರೆಗೂ ಹೋರಾಟಕ್ಕೆ ಸ್ಪಂದಿಸಿಲ್ಲ.

ಜಿಲ್ಲೆಯ ಕವಿಗಳು ಹೋರಾಟ ಸ್ಥಳದಲ್ಲೇ ಕವಿಗೋಷ್ಠಿ ನಡೆಸಿದರು, ಸಂಗೀತ ಕಲಾವಿದರು ಕ್ರಾಂತಿ ಗೀತೆ ಹಾಡಿದರು, ಬುಡಕಟ್ಟು ಸಮುದಾಯದವರು ವೇಷಭೂಷಣ ತೊಟ್ಟು ಬೆಂಬಲಿಸಿದರು. ಜಿಲ್ಲೆಯ ಎಲ್ಲ ತಾಲ್ಲೂಕು, ಹೋಬಳಿ ಮಟ್ಟದಲ್ಲಿ ಪ್ರತಿಭಟನೆ ನಡೆಯಿತು. ಜಿಲ್ಲಾ ಕೇಂದ್ರದಲ್ಲೂ ಬೃಹತ್‌ ಪ್ರತಿಭಟನಾ ಜಾಥಾ ನಡೆದರೂ ಸರ್ಕಾರ ಮೈಮರೆತು ಕುಳಿತಿದೆ.

ಆಲಮಟ್ಟಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಲಬುರ್ಗಿಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ, ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಜಿಲ್ಲೆಯವರೇ ಆದ ಸಚಿವ ಶಿವಾನಂದ ಪಾಟೀಲರನ್ನು ಭೇಟಿಯಾಗಿ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಹಕ್ಕೊತ್ತಾಯ ಮಾಡಿದ್ದಾರೆ.

ಜಿಲ್ಲೆಯ ಸಚಿವರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ, ಶಾಸಕರಾದ ಯಶವಂತರಾಯಗೌಡ ಪಾಟೀಲ, ವಿಠಲ ಕಟಕಧೋಂಡ, ರಾಜುಗೌಡ ಪಾಟೀಲ, ಸಂಸದ ರಮೇಶ ಜಿಗಜಿಣಗಿ ಸೇರಿದಂತೆ ಮಾಜಿ ಶಾಸಕರು ಧರಣಿ ಸ್ಥಳಕ್ಕೆ ಭೇಟಿ ನೀಡಿ, ಭಾಷಣ ಮಾಡಿ, ಭರವಸೆ ನೀಡಿ ಹೋಗಿದ್ದಾರೆ. ಆದರೂ ಸರ್ಕಾರದ ಮೇಲೆ ಒತ್ತಡ ಹೇರುವಲ್ಲಿ ವಿಫಲರಾಗಿದ್ದಾರೆ.

ಸರ್ಕಾರಿ ವೈದ್ಯಕೀಯ ಕಾಲೇಜಿಗಾಗಿ ನಡೆಯುತ್ತಿರುವ ಜನಪರ ಹೋರಾಟವನ್ನು ಜಿಲ್ಲೆಯ ಸಚಿವರು, ಶಾಸಕರು ಲಘುವಾಗಿ ಪರಿಗಣಿಸಿರುವುದು ಅವರ ಇಚ್ಛಾಶಕ್ತಿ ಕೊರತೆ, ಜನಹಿತ ಮರೆತ ಸ್ವಾರ್ಥ ರಾಜಕಾರಣವನ್ನು ಅನಾವರಣ ಮಾಡಿದೆ. ಇನ್ನಾದರೂ ಜಿಲ್ಲೆಯ ಜನಪ್ರತಿನಿಧಿಗಳು ಕಣ್ತೆರೆಯಬೇಕು, ಹೋರಾಟದ ಆಶಯಕ್ಕೆ ಸ್ಪಂದಿಸಬೇಕು. ಇಲ್ಲವಾದರೆ ಜನರು ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವುದು ಖಚಿತ.

----

ಸಚಿವ ಎಂ.ಬಿ.ಪಾಟೀಲರು ಹೋರಾಟ ಸಮಿತಿಯ ಮುಖಂಡರ ನಿಯೋಗವನ್ನು ಮುಖ್ಯಮಂತ್ರಿ ವೈದ್ಯಕೀಯ ಶಿಕ್ಷಣ ಸಚಿವರ ಬಳಿಕೆ ಕರೆದೊಯ್ದು ಭೇಟಿ ಮಾಡಿಸುವುದಾಗಿ ಹೇಳಿ ಒಂದು ವಾರವಾದರೂ ಯಾವುದೇ ಬೆಳವಣಿಗೆಯಾಗಿಲ್ಲ.ಆದಷ್ಟು ಬೇಗ ಸ್ಪಂದಿಸಬೇಕು

-ಎಚ್‌.ಟಿ.ಭರತ್‌ ಕುಮಾರ್‌ ಸದಸ್ಯ ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿ ವಿಜಯಪುರ

ಹೋರಾಟಕ್ಕೆ 50 ದಿನಗಳಾದರೂ ಸರ್ಕಾರ ಸ್ಪಂದಿಸದೇ ಇರುವುದು ಜನ ವಿರೋಧಿ ನೀತಿಯನ್ನು ಎತ್ತಿ ತೋರಿಸುತ್ತಿದೆ. ಜನ ಪ್ರತಿನಿಧಿಗಳು ಕೂಡ ಜನರ ಬಗ್ಗೆ ಕಿಂಚಿತು ಕಾಳಜಿ ಹೊಂದಿಲ್ಲ. ಬೇಡಿಕೆ ಈಡೇರುವವರೆಗೂ ಧರಣಿ ಮುಕ್ತಾಯಗೊಳಿಸುವ ಪ್ರಶ್ನೆಯೇ ಇಲ್ಲ

-ದೇವಾನಂದ ಚಹ್ವಾಣ ಮಾಜಿ ಶಾಸಕ 

ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಬೇಕು. ಖಾಸಗಿಯವರಿಗೆ ಕಾಲೇಜು ನಿರ್ಮಾಣ ಮಾಡಲು ಯಾವುದೇ ಕಾರಣಕ್ಕೂ ಅವಕಾಶ ಕೊಡಬಾರದು

-ಮಹಮ್ಮದ್ ರಫೀಕ್ ಟಪಾಲ್ ಎಂಜಿನಿಯರ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆಪಿಸಿಸಿ

ಬೆಂಬಲಿಸಿದ ಶಾಸಕರಿವರು

ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಹೋರಾಟಕ್ಕೆ ಇಡೀ ಜಿಲ್ಲೆಯ ಜನ  ಧ್ವನಿಯಾದರೂ ಇದುವರೆಗೂ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮುದ್ದೇಬಿಹಾಳ ಶಾಸಕ ಸಿ.ಎಸ್‌.ನಾಡಗೌಡ ಸಿಂದಗಿ ಶಾಸಕ ಅಶೋಕ ಮನಗೂಳಿ ಧರಣಿ ಸ್ಥಳಕ್ಕೆ ಬಂದು ಆಹವಾಲು ಆಲಿಸದೇ ಸರ್ಕಾರದ ಮೇಲೆ ಒತ್ತಡ ಹೇರದೇ ಇರುವುದು ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯ ರಾಷ್ಟ್ರ ಅಂತರರಾಷ್ಟ್ರೀಯ ಸಮಸ್ಯೆಗಳಿಗೆ ಧ್ವನಿ ಎತ್ತುವ ಶಾಸಕ ಯತ್ನಾಳ ಅವರು ತಮ್ಮ ಕ್ಷೇತ್ರದಲ್ಲೇ ಸರ್ಕಾರಿ ವೈದ್ಯಕೀಯ ಕಾಲೇಜಿಗಾಗಿ ಹೋರಾಟ ನಡೆಯುತ್ತಿದ್ದರೂ ಇದುವರೆಗೂ ಸ್ಪಂದಿಸಿಲ್ಲ. ‘ಸರ್ಕಾರಿ ವೈದ್ಯಕೀಯ ಕಾಲೇಜು ಆದರೆ ಬಡವರ ಮಕ್ಕಳಿಗೆ ಉಚಿತವಾಗಿ ವೈದ್ಯಕೀಯ ಸೀಟು ಸಿಗುವುದಿಲ್ಲ’ ಎಂದು ಪ್ರತಿಪಾದಿಸಿರುವ ಯತ್ನಾಳ ಅವರು ‘ಪಿಪಿಪಿ ಮಾದರಿಯಲ್ಲಿ ಕಾಲೇಜು ಸ್ಥಾಪಿಸುವುದಾದರೇ ನಾನೇ ₹500 ಕೋಟಿ ಬಂಡವಾಳ ಹೂಡುತ್ತೇನೆ’ ಎಂದು ವಿಧಾನಸಭಾ ಅಧಿವೇಶನದಲ್ಲಿ ಹರಾಜು ಕೂಗಿದ್ದಾರೆ. ಹೀಗಾಗಿ ಇವರಿಂದ ಜನ ನಿರೀಕ್ಷೆ ಮಾಡುವುದೇ ಅಪರಾಧ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.