ADVERTISEMENT

ವಿಜಯಪುರ | ಮಳೆಗಾಲದಲ್ಲಿ ಸಂಚಾರ ಬಂದ್: ಸೇತುವೆ ಸಮಸ್ಯೆ

ಕಿರಿದಾದ ಸೇತುವೆ ಎತ್ತರ ಹೆಚ್ಚಿಸದ ಸರ್ಕಾರ: ಅಪಘಾತಕ್ಕೆ ಆಹ್ವಾನ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 4:33 IST
Last Updated 24 ಸೆಪ್ಟೆಂಬರ್ 2025, 4:33 IST
   

ಸೋಲಾಪುರ: ಅಕ್ಕಲಕೋಟ ತಾಲ್ಲೂಕಿನಲ್ಲಿ ಪ್ರತಿ ವರ್ಷ ಮಳೆ ಪ್ರಾರಂಭವಾದಾಗ ಹಳ್ಳ-ಕೊಳ್ಳಗಳು, ನದಿಗಳು ಉಕ್ಕಿ ಹರಿಯುತ್ತವೆ. ಅನೇಕ ಸೇತುವೆಗಳು ನೀರಿನಲ್ಲಿ ಮುಳುಗುತ್ತವೆ. ಅಕ್ಕಲಕೋಟ- ಗಾಣಗಾಪುರ ರಸ್ತೆಯಲ್ಲಿರುವ ಬೋರಿ-ಉಮರಗೆ ಸೇತುವೆ, ಅಂದೆವಾಡಿ ಬಳಿಯ ಬೋರಿ ನದಿಯ ಸೇತುವೆ, ನೀಮಗಾವ್ ಸೇತುವೆ, ಕೂರನೂರ-ಮಟ್ಯಾಳ ರಸ್ತೆಯಲ್ಲಿರುವ ಸೇತುವೆಗಳು ಸೇರಿದಂತೆ ಹಲವು ಸೇತುವೆಗಳು ಪ್ರತಿ ವರ್ಷ ನೀರಿನಲ್ಲಿ ಮುಳುಗುತ್ತವೆ. 

ಇದರಿಂದ ಗ್ರಾಮಸ್ಥರು ಪ್ರತಿವರ್ಷ ಸಮಸ್ಯೆ ಅನುಭವಿಸುವಂತೆ ಆಗಿದೆ. ಹಲವಾರು ವರ್ಷಗಳಿಂದಲೂ ಇರುವ ಸೇತುವೆ ಎತ್ತರ ಹೆಚ್ಚಿಸುವ ಸಮಸ್ಯೆ ಎಂದು ಬಗೆಹರಿಯುತ್ತದೆಯೋ ಎಂಬ ಚಿಂತೆ ಗ್ರಾಮಸ್ಥರನ್ನು ಕಾಡುತ್ತಿದೆ. ಶಾಲಾ ಮಕ್ಕಳು, ರೈತರು, ವಾಹನ ಚಾಲಕರಿಗೆ ತೀವ್ರ ತೊಂದರೆಯಾಗುತ್ತಿದೆ. ಕೆಲವೊಮ್ಮೆ ಜನರು ಉಕ್ಕಿ ಹರಿಯುತ್ತಿರುವ ಪ್ರವಾಹ ದಾಟಲು ಪ್ರಯತ್ನಿಸಿ ಅಪಘಾತಕ್ಕೆ ಇಡಾಗುತ್ತಾರೆ.

ಕಳೆದ ತಿಂಗಳು ಅಂದೆವಾಡಿಯಲ್ಲಿ ಯುವಕನೊಬ್ಬ ಪ್ರವಾಹದಲ್ಲಿ ಕೊಚ್ಚಿ ಹೋದ ದುರಾದೃಷ್ಟಕರ ಘಟನೆ ಇನ್ನೂ ಗ್ರಾಮಸ್ಥರ ಮನಸ್ಸಿನಲ್ಲಿದೆ. ಈ ಸಮಸ್ಯೆ ಮಳೆಗಾಲಕ್ಕೆ ಮಾತ್ರ ಸೀಮಿತವಾಗಿಲ್ಲ. ಪ್ರತಿ ವರ್ಷ ಈ ಪರಿಸ್ಥಿತಿ ಉದ್ಭವಿಸುತ್ತದೆ. ಆಡಳಿತ ಎಚ್ಚರಗೊಳ್ಳುತ್ತದೆ. ಪೊಲೀಸ್, ಕಂದಾಯ ಇಲಾಖೆ, ಗ್ರಾಮ ಪಂಚಾಯಿತಿ ರಸ್ತೆ ಸಂಚಾರವನ್ನು ನಿಷೇಧಿಸಿ ಬ್ಯಾರಿಕೇಡಗಳನ್ನು ಹಾಕುವುದು, ಸಾರ್ವಜನಿಕರಿಗೆ ಜಾಗರೂಕರಾಗಿರಲು ಮನವಿಗಳನ್ನು ಮಾಡುವುದು ಕಾಯಂ ಆಗಿದೆ.

ADVERTISEMENT

ಮಳೆಗಾಲ ಮುಗಿದ ನಂತರ ಇವೆಲ್ಲವೂ ಮರೆತು ಹೋಗುತ್ತದೆ. ಮತ್ತೆ ಮುಂದಿನ ವರ್ಷ ಈ ಪರಿಸ್ಥಿತಿ ಸಂಭವಿಸುತ್ತದೆ. ಈ ಸಮಸ್ಯೆಗಳ ಮೂಲ ಸೇತುವೆಗಳ ಎತ್ತರ ಹಾಗೂ ಅವುಗಳು ಹಳೆಯ ವಿನ್ಯಾಸದಲ್ಲಿವೆ. ಇಂದಿನ ಬದಲಾದ ಹವಾಮಾನದ ಸಂದರ್ಭದಲ್ಲಿ ನಿರ್ಮಾಣದ ಸಮಯದಲ್ಲಿ ಮಾಡಲಾದ ಮಳೆ ಮತ್ತು ನದಿಯ ಹರಿವಿನ ಅಂದಾಜು ಅಸಮರ್ಪಕವಾಗಿದೆ.

ಕಡಿಮೆ ಅವಧಿಯಲ್ಲಿ ಭಾರಿ ಮಳೆ ಆಗುತ್ತದೆ. ನೀರಿನ ಹರಿವು ತೀವ್ರಗೊಳ್ಳುತ್ತದೆ ಮತ್ತು ಅಸ್ತಿತ್ವದಲ್ಲಿರುವ ಸೇತುವೆಗಳ ಎತ್ತರ ಅದಕ್ಕೆ ಅನುಗುಣವಾಗಿ ಕಡಿಮೆಯಾಗುತ್ತದೆ. ಪರಿಣಾಮವಾಗಿ ಸೇತುವೆಗಳ ಮೇಲೆ ನೀರು ಹರಿಯುತ್ತದೆ ಮತ್ತು ಸಂಚಾರಕ್ಕೆ ಅಡ್ಡಿಯಾಗುತ್ತದೆ. ಇದರ ಪರಿಣಾಮಗಳು ಗಂಭೀರವಾಗಿರುತ್ತವೆ. ಈ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಹಿಡಿಯಲು ಸಂಪೂರ್ಣ ಯೋಜನೆಯ ಅಗತ್ಯವಿದೆ.

ನೀರಿನ ಮಟ್ಟ ಹೆಚ್ಚಾದಾಗ ಮೊಬೈಲ್ ಫೋನ್‌ಗಳಲ್ಲಿ ಎಚ್ಚರಿಕೆಯನ್ನು ಕಳಿಸುವ ವ್ಯವಸ್ಥೆ, ಎಚ್ಚರಿಕೆ ಫಲಕಗಳು ಮತ್ತು ಬ್ಯಾರಿಕೇಡ್ ಸಕಾಲಿಕವಾಗಿ ಅಳವಡಿಸುವುದು ಮತ್ತು ಸಾರಿಗೆ ಆಯ್ಕೆಗಳ ಬಗ್ಗೆ ಮಾಹಿತಿಯನ್ನು ನೀಡುವುದರಿಂದ ಜೀವ ಹಾನಿಯನ್ನು ತಡೆಯಬಹುದು. ಇದು ಆಡಳಿತಕ್ಕೆ ಮಾತ್ರ ಅಲ್ಲ ಸಮಾಜಕ್ಕೂ ಸಂಬಂಧಿಸಿದ ಸಮಸ್ಯೆಯಾಗಿದೆ. ನೀರಿನ ಮಟ್ಟ ಹೆಚ್ಚಾದಾಗ ಜನರು ಸೇತುವೆ ದಾಟಲು ಪ್ರಯತ್ನಿಸಬಾರದು. ಗ್ರಾಮ ಪಂಚಾಯತಿಯವರು ಜನರಲ್ಲಿ ಜಾಗೃತಿ ಉಂಟು ಮಾಡಬೇಕು. ಸೇತುವೆಗಳ ಮೇಲೆ ನೀರಿನ ಮಟ್ಟ ಹೆಚ್ಚಾದಾಗ ಸೇತುವೆ ದಾಟಬೇಡಿ ಎಂದು ನಿರಂತರವಾಗಿ ಜನರಿಗೆ ಸಂದೇಶ ನೀಡಬೇಕು.

ಅಕ್ಕಲಕೋಟ ತಾಲೂಕಿನಲ್ಲಿ ಸೇತುವೆಗಳ ಸಮಸ್ಯೆ ಮಳೆಗಾಲದಲ್ಲಿ ಮಾತ್ರ ಅನಾನುಕೂಲವಲ್ಲ. ಬದಲಾಗಿ ಜೀವನ-ಮರಣಗಳ ಪ್ರಶ್ನೆಯಾಗಿದೆ. ಪ್ರತಿ ವರ್ಷ ಅಪಘಾತ ಸಂಭವಿಸಿದಾಗ ಕ್ರಮಗಳನ್ನು ಕೈಗೊಳ್ಳುವ ಬದಲು ಮುಂಚಿತವಾಗಿ ಯೋಜನೆ, ನೀರಿನ ಮಟ್ಟದ ಅಂದಾಜು, ಸೂಕ್ತ ಎತ್ತರದ ಸೇತುವೆಗಳ ನಿರ್ಮಾಣದ ಮೂಲಕ ಈ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹರಿಸ ಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.