ADVERTISEMENT

ವಿಜಯಪುರದಲ್ಲಿ ಸಚಿವ ಎಂ.ಬಿ.ಪಾಟೀಲ ಧ್ವಜಾರೋಹಣ

​ಪ್ರಜಾವಾಣಿ ವಾರ್ತೆ
Published 26 ಜನವರಿ 2025, 4:32 IST
Last Updated 26 ಜನವರಿ 2025, 4:32 IST
   

ವಿಜಯಪುರ: ಜಿಲ್ಲಾಡಳಿತದಿಂದ ನಗರದ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಗಣರಾಜ್ಯೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಧ್ವಜಾರೋಹಣ ನೆರವೇರಿಸಿದರು.

ಪ್ರಜಾಪ್ರಭುತ್ವ ಎನ್ನುವುದು ಒಂದು ವಿಧದ ಸರ್ಕಾರವಲ್ಲ, ಅದೊಂದು ರೀತಿಯ ಸಾಮಾಜಿಕ ಸಂಸ್ಥೆ. ಅದು ಜಾತಿ, ಧರ್ಮ, ಭಾಷೆ, ಲಿಂಗ, ಅಂತಸ್ತು ಹಾಗೂ ಪ್ರಾದೇಶಿಕ ಅಸ್ಮಿತೆಗಳನ್ನು ಮೀರಿದ, ವಿವಿಧತೆಯಲ್ಲಿ ಏಕತೆಯನ್ನು ಸಾರುವ ವಿಶಾಲತೆಯನ್ನು ತನ್ನೊಳಗೆ ಅಡಗಿಸಿಕೊಂಡು, ವಿಶ್ವ ಭ್ರಾತೃತ್ವ, ಸಹೋದರತೆ, ಸಮಾನ ಅವಕಾಶಗಳ ಸರ್ವ ಸಮತೆ ಹಾಗೂ ಸಕಲ ಜೀವ ಸಂಕುಲಕ್ಕೂ ಸದಾ ಒಳಿತನ್ನೇ ಬಯಸುವ ಒಂದು ವಿಶಿಷ್ಠವಾದ ಕಾನೂನು ಮತ್ತು ಆಡಳಿತ ವ್ಯವಸ್ಥೆಯಾಗಿದೆ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು.

ಆತ್ಮ ಸಾಕ್ಷಿ ಪ್ರಜ್ಞೆಯುಳ್ಳ ನಾಗರಿಕ ಸಮುದಾಯ, ಬಲಿಷ್ಠವಾದ ವಿರೋಧ ಪಕ್ಷ, ಪಾರದರ್ಶಕತೆಯಿಂದ ಕೂಡಿದ ಸಾರ್ವಜನಿಕ ಆಡಳಿತ, ವರ್ಗ ರಹಿತ, ವರ್ಣ ರಹಿತ, ಜಾತಿ ರಹಿತ, ನೀತಿಯುಕ್ತ ಸಮಾಜ ಹಾಗೂ ಬಲಿಷ್ಠವಾದ ಕಾನೂನು ವ್ಯವಸ್ಥೆಗಳು ಆದರ್ಶ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಧನಾತ್ಮಕ ಸಂಕೇತವಾಗಿದೆ ಎಂದರು.

ADVERTISEMENT

ವಿವಿಧ ಕ್ಷೇತ್ರಗಳ‌ ಸಾಧಕರನ್ನು ಸಚಿವರು ಸನ್ಮಾನಿಸಿದರು.

ಪೊಲೀಸ್, ಗೃಹ ರಕ್ಷಕದಳ, ಎನ್ ಸಿಸಿ, ಎನ್ ಎಸ್‌ಎಸ್, ಸ್ಕೌಟ್ ಮತ್ತು ಗೈಡ್ಸ್, ಶಾಲಾ, ಕಾಲೇಜು ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.

ಶಾಲಾ ವಿದ್ಯಾರ್ಥಿಗಳು ದೇಶ ಭಕ್ತಿ ಗೀತೆಗಳಿಗೆ ಆಕರ್ಷಕ ನೃತ್ಯ ಪ್ರದರ್ಶಿಸಿದರು.

ಸಂಸದ ರಮೇಶ ಜಿಗಜಿಣಗಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ಪಾಲಿಕೆ ಮೇಯರ್ ಮೆಹಜಬಿನ್ ಹೊರ್ತಿ, ಉಪ ಮೇಯರ್ ದಿನೇಶ್ ಹಳ್ಳಿ, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕನ್ನಾನ್ ಮುಶ್ರೀಫ್, ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪಂಚಾಯ್ತಿ ಸಿಇಒ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.