ADVERTISEMENT

ವಿಜಯಪುರ | ತುಟ್ಟಿಯಾದ ಮೊಟ್ಟೆ; ಶಿಕ್ಷಕರ ಪರದಾಟ

ಮೊಟ್ಟೆ ಖರೀದಿಸಲು ಕಾಲಕಾಲಕ್ಕೆ ಬಿಡುಗಡೆಯಾಗದ ಹಣ

ಮಹಾಂತೇಶ ವೀ.ನೂಲಿನವರ
Published 17 ಡಿಸೆಂಬರ್ 2024, 4:54 IST
Last Updated 17 ಡಿಸೆಂಬರ್ 2024, 4:54 IST
 ಮೊಟ್ಟೆ
 ಮೊಟ್ಟೆ   

ನಾಲತವಾಡ: ಈ ಹಿಂದೆ ವಾರದಲ್ಲಿ ಎರಡು ದಿನ ಮೊಟ್ಟೆಗಳನ್ನು ವಿತರಿಸುವುದಕ್ಕೆ ಹೇಗೋ ಹಣವನ್ನು ಹೊಂದಿಸಿಕೊಂಡು ಮುಖ್ಯ ಶಿಕ್ಷಕರು ವಿದ್ಯಾರ್ಥಿಗಳಿಗೆ ಮೊಟ್ಟೆ, ಬಾಳೆ ಹಣ್ಣು, ಶೇಂಗಾ ಚಿಕ್ಕಿ ನೀಡುತ್ತಿದ್ದರು. ಆದರೆ, ಇದೀಗ ವಾರದಲ್ಲಿ ಆರು ದಿನ ಮೊಟ್ಟೆ ಖರೀದಿಸಲು ಕಷ್ಟವಾಗುತ್ತಿದೆ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.

ಸೆಪ್ಟೆಂಬರ್‌ 25 ರಂದು ಅಜೀಂ ಪ್ರೇಮ್‌ಜಿ ಫೌಂಡೇಷನ್‌ ಸಹಭಾಗಿತ್ವದಲ್ಲಿ 2024-25 ನೇ ಸಾಲಿನಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢ ಹಾಗೂ ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ವಾರದಲ್ಲಿ 6 ದಿನ ಪೂರಕ ಪೌಷ್ಟಿಕ ಆಹಾರವನ್ನು ವಿತರಿಸುವ ಯೋಜನೆಯನ್ನು ಮುದ್ದೇಬಿಹಾಳ ತಾಲ್ಲೂಕಿನ ವ್ಯಾಪ್ತಿಯಲ್ಲಿ ಜಾರಿಗೆ ತರಲಾಗಿದೆ. ಆದರೆ, ಮೊಟ್ಟೆಗಳನ್ನು ಖರೀದಿಸಲು ಹಣವನ್ನೂ ಸಹ ಬಿಡುಗಡೆ ಮಾಡಲಾಗಿದೆ. 

‘ಅನುದಾನದ ಷರತ್ತಿನ ಪ್ರಕಾರ ಒಂದು ಮೊಟ್ಟೆಗೆ ₹6 ಅನುದಾನ ನೀಡಲಾಗಿದೆ. ಈ ₹6ರಲ್ಲಿ 50ಪೈಸೆ ಮೊಟ್ಟೆ ಬೇಯಿಸಿಲು ಗ್ಯಾಸ್ ಖರೀದಿಗೆ, 30 ಪೈಸೆ ಮೊಟ್ಟೆ ಸುಲಿಯಲು ಅಡುಗೆ ಸಿಬ್ಬಂದಿಗೆ ಕೊಡಬೇಕು. 20 ಪೈಸೆ ಸಾಗಾಣಿಕೆ ವೆಚ್ಚ, ಉಳಿದ ₹ 5ಕ್ಕೆ ಮೊಟ್ಟೆ ಖರೀದಿಸಬೇಕು. ಈ ₹5ಕ್ಕೆ ಮೊಟ್ಟೆ ಮಾರುವ ಮಾಲೀಕನನ್ನು ಶಿಕ್ಷಕರು ಹುಡುಕುವುದೆಲ್ಲಿ ಹೇಳಿ? ಸದ್ಯ ಚಳಿಗಾಲ ಸಹಜವಾಗಿ ಮಾರುಕಟ್ಟೆಯಲ್ಲಿ ಮೊಟ್ಟೆ ಒಂದರ ಬೆಲೆ ₹ 7 ರಿಂದ ₹ 7.50  ಆಗಿದೆ. ವಿದ್ಯಾರ್ಥಿಗಳಿಗೆ ಮೊಟ್ಟೆಗಳನ್ನು ವಿತರಿಸಲು ಸಮಸ್ಯೆಯಾಗುತ್ತಿದೆ’ ಎಂದು ಬಹುತೇಕ ಮುಖ್ಯಶಿಕ್ಷಕರು ಅಳಲು ತೋಡಿಕೊಳ್ಳುತ್ತಿದ್ದಾರೆ.

ADVERTISEMENT

ಹೆಚ್ಚಿನ ಅನುದಾನವಿಲ್ಲ:

ಯೋಜನೆ ಪ್ರಾರಂಭದ ಹಂತದಲ್ಲಿ ಮೂರು ತಿಂಗಳವರೆಗೆ ಮೊಟ್ಟೆಗಾಗಿ ಯಾವುದೇ ಅನುದಾನ ಕೊಡಲಿಲ್ಲ. ಮುಖ್ಯಶಿಕ್ಷಕರೇ ಹಣವನ್ನು ಪಾವತಿಸಿ ಮೊಟ್ಟೆಗಳನ್ನು ತಂದು ಮಕ್ಕಳಿಗೆ ವಿತರಿಸುತ್ತಿದ್ದರು. ಮೂರು ತಿಂಗಳ ನಂತರ ಅನುದಾನ ಬಂದು. ಆಗ ಬಿಲ್‌ ಸಂಬಂಧ ಪಟ್ಟ ಇಲಾಖೆಯವರ ಮೂಲಕ ಹಣ ಪಾವತಿಯಾಯಿತು.

ದಿನಕ್ಕೆ ಸುಮಾರು ಸಾವಿರ ಖರ್ಚು:

ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸರಾಸರಿ ಮಕ್ಕಳ ಹಾಜರಾತಿ 300 ಇದೆ ಎಂದಾದರೆ. ಒಂದು ಮೊಟ್ಟೆಗೆ ₹6 ರಿಂದ ₹ 7.50 ರಂತೆ ಖರೀದಿಸಿದರೆ ಒಬ್ಬ ಮುಖ್ಯಗುರು ಮೊಟ್ಟೆಗಳಿಗೆ ₹450 ಹೆಚ್ಚುವರಿ ಖರ್ಚು ಮಾಡಿದರೆ, ವಾರದಲ್ಲಿ 1800 ಮೊಟ್ಟೆಗಳಿಗೆ ₹2700 ಹಣ ಬೇಕು. ತಿಂಗಳಿಗೆ ಸುಮಾರು ₹10,800 ಖರ್ಚಾಗುತ್ತದೆ ಈ ಹೆಚ್ಚುವರಿ ಹಣ ಕೊಡುವವರಾರು, ತರುವುದೆಲ್ಲಿಂದ. ಕೆಲವು ಮಕ್ಕಳಿಗೆ ಅವರ ಅಪೇಕ್ಷೆಯಂತೆ ಶೇಂಗಾ ಚಿಕ್ಕಿ, ಬಾಳೆಹಣ್ಣು ಕೊಟ್ಟರೆ, ಮೊಟ್ಟೆ ಖರ್ಚನ್ನು ಸರಿದೂಗಿಸಬಹುದು ಎನ್ನಲಾಗುತ್ತದೆ.

ಸಾಲ ಮಾಡಿ ಮೊಟ್ಟೆಗಳ ವಿತರಣೆ:

ಮುದ್ದೇಬಿಹಾಳ ತಾಲ್ಲೂಕಿನ ವ್ಯಾಪ್ತಿಯಲ್ಲಿನ ಅನೇಕ ಶಾಲಾ ಮುಖ್ಯಶಿಕ್ಷಕರು ವಿದ್ಯಾರ್ಥಿಗಳಿಗೆ ಮೊಟ್ಟೆಗಳನ್ನು ವಿತರಿಸಲು ಸಾಲವನ್ನು ಮಾಡುತ್ತಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬರುವ ಸಂಬಳದಲ್ಲಿ ವೈಯಕ್ತಿಕ ಖರ್ಚು, ಕುಟುಂಬ ನಿರ್ವಹಣೆ, ವೈದ್ಯಕೀಯ ಖರ್ಚು, ಮಕ್ಕಳ ಶುಲ್ಕ ಕಟ್ಟಲು ಸಾಕಾಗುತ್ತದೆ. ಮೊಟ್ಟೆ ಬೇಯಿಸುವ ಪರಿಕರಗಳು ಸೇರಿದಂತೆ, ಮೊಟ್ಟೆಗಾಗಿ ಹೆಚ್ಚುವರಿ ಖರ್ಚು ಮಾಡುವುದರಿಂದ ಮುಖ್ಯ ಶಿಕ್ಷಕರಲ್ಲಿ ಹಣವಿಲ್ಲದೆ ಸಾಲವನ್ನು ಮಾಡಿ ಮೊಟ್ಟೆಗಳನ್ನು ಖರೀದಿಸುವುದು ಅನಿರ್ವಾಯವಾಗಿದೆ ಎಂದು ಶಾಲಾ ಮುಖ್ಯಶಿಕ್ಷಕರೊಬ್ಬರು ತಮ್ಮ ನೋವನ್ನು ಹೇಳಿದರು.

ಮೊಟ್ಟೆ ಹೊರುವ ಮುಖ್ಯಶಿಕ್ಷಕರು:

ಮೊಟ್ಟೆಗಳನ್ನು ಮಾರಾಟ ಮಾಡುವ ಅಂಗಡಿಯ ಮಾಲೀಕರಿಗೆ ಶಾಲೆಗಳಿಗೆ ನೇರವಾಗಿ ತಂದು ಮೊಟ್ಟೆಗಳನ್ನು ಸರಬರಾಜು ಮಾಡಿ ಎಂದು ಮುಖ್ಯಶಿಕ್ಷಕರು ಅಂಗಲಾಚಿ ಬೇಡಿಕೊಂಡರೆ ಚಳಿಗಾಲದ ಹಿನ್ನೆಲೆಯಲ್ಲಿ ಮೊಟ್ಟೆ ಧಾರಣೆ ಹೆಚ್ಚಾಗಿದೆ ಒಂದು ಮೊಟ್ಟೆಗೆ ₹7.50 ಕೊಟ್ಟರೆ ಮಾತ್ರ ಮೊಟ್ಟೆಗಳನ್ನು ಶಾಲೆಗೆ ಸರಬರಾಜು ಮಾಡಲಾಗುವುದು ಎಂದು ಹೇಳುತ್ತಾರೆ.

ಆದರೆ, ಸರ್ಕಾರ 1 ಮೊಟ್ಟೆಗೆ ₹6 ನಿಗದಿ ಮಾಡಿದೆ. ಇದರಲ್ಲಿ ₹6 ಗೇ ಮೊಟ್ಟೆಯನ್ನು ಖರೀದಿಸಬೇಕು.ಮೊಟ್ಟೆ ಬೇಯಿಸಲು ಗ್ಯಾಸ್ ಗೆ,ಸುಲಿಯುವ ಬಿಸಿ ಊಟದ ಸಿಬ್ಬಂದಿಗೆ, ಕೊಡಬೇಕಿರುವುದೇ ಹೊರೆಯಾಗಿದೆ. ಹೀಗಾಗಿ ನಾವೇ ಮೊಟ್ಟೆಗಳನ್ನು ಶಾಲೆಗೆ ತೆಗೆದುಕೊಂಡು ಹೋಗುತ್ತಿದ್ದೇವೆ ಎಂದು ಮುಖ್ಯಶಿಕ್ಷಕರೊಬ್ಬರು ತಿಳಿಸಿದರು.

ತುಟ್ಟಿಯಾದ ಮೊಟ್ಟೆ
ಶನಿವಾರ ಅಮಾವಾಸ್ಯೆ ಹುಣ್ಣಿಮೆ ಊರ ಜಾತ್ರೆಯಂದು ಮೊಟ್ಟೆ ತಿಂದರೆ ನಮ್ಮ ಮನೆಯಲ್ಲಿ ಬೈಯ್ಯುತ್ತಾರೆ. ಈ ದಿನಗಳಲ್ಲಿ ಮೊಳಕೆ ಕಾಳು ಬಾದಾಮಿ ಗೋಡಂಬಿ ದ್ರಾಕ್ಷಿ ಕೊಟ್ಟರೆ ಚನ್ನ
ಖಾನಾಪೂರ ಶಾಲೆಯ ವಿದ್ಯಾರ್ಥಿ.
ಸಕಾಲಕ್ಕೆ ಮೊಟ್ಟೆ ಅನುದಾನವನ್ನು ವಿತರಿಸಬೇಕು ಮಾರುಕಟ್ಟೆ ಬೆಲೆಯನ್ನು ಗಮನಿಸಿ ಕಾಲಕಾಲಕ್ಕೆ ಮೊಟ್ಟೆ ಬೆಲೆಯನ್ನು ನಿಗದಿಪಡಿಸಬೇಕು
ಬಸನಗೌಡ ಮುದ್ನೂರ ಅಧ್ಯಕ್ಷ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮುದ್ದೇಬಿಹಾಳ.
ಬಸನಗೌಡ ಮುನ್ನೂರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.