ವಿಜಯಪುರ: ವೈದ್ಯಕೀಯ ಕಾಲೇಜು ಸ್ಥಾಪನೆ ನೆಪದಲ್ಲಿ ಸರ್ಕಾರಿ ಜಿಲ್ಲಾಸ್ಪತ್ರೆಯನ್ನು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಬಾರದು ಎಂದು ಆಗ್ರಹಿಸಿ ದಲಿತ ವಿದ್ಯಾರ್ಥಿ ಪರಿಷತ್ತಿನ ನೇತೃತ್ವದಲ್ಲಿ ಸಾವಿರಾರು ವಿದ್ಯಾರ್ಥಿ, ಯುವಜನರು ನಗರದ ಶಿವಾಜಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಗುರುವಾರ ಬೃಹತ್ ಜನಾಂದೋಲನ ರ‍್ಯಾಲಿ ನಡೆಸಿದರು.
ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ದಲಿತ ವಿದ್ಯಾರ್ಥಿ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಶ್ರೀನಾಥ್ ಪೂಜಾರಿ, ‘ಡಿವಿಪಿ ನೇತೃತ್ವದಲ್ಲಿ ಕಳೆದ 20 ವರ್ಷಗಳಿಂದ ಜಿಲ್ಲೆಯಲ್ಲಿ ಒಂದು ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗಬೇಕೆಂದು ಹೋರಾಟ ಮಾಡುತ್ತಾ ಬಂದಿದ್ದೇವೆ, ನಮ್ಮ ಮತ್ತು ಜನರ ಹೋರಾಟದ ಫಲವಾಗಿ ಇಂದು ಜಿಲ್ಲೆಗೆ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಲು ಸರ್ಕಾರ ನಿರ್ಧರಿಸಿದ್ದು, ಇಡೀ ಜಿಲ್ಲೆ ಖುಷಿ ಪಡುವ ವಿಚಾರ. ಆದರೆ, ಇದರಲ್ಲಿ ಖಾಸಗಿ ಸಹಭಾಗಿತ್ವ ಅಂದರೆ ಖಾಸಗಿ ವ್ಯಕ್ತಿಗಳಿಗೆ ಜಿಲ್ಲಾಸ್ಪತ್ರೆ ಮಾರಾಟ ಮಾಡಲು ಮುಂದಾಗಿರುವ ಸರ್ಕಾರದ ಕ್ರಮವನ್ನು ಒಪ್ಪುವುದಿಲ್ಲ’ ಎಂದರು.
ಡಿವಿಪಿ ಜಿಲ್ಲಾ ಸಂಚಾಲಕ ಅಕ್ಷಯ್ ಕುಮಾರ ಅಜಮನಿ ಮಾತನಾಡಿ, ‘ಆರೋಗ್ಯ ಹಾಗೂ ಶಿಕ್ಷಣ ಸೇವಾವಲಯದಲ್ಲಿ ಕಾರ್ಯನಿರ್ವಹಿಸಬೇಕು, ಬಡವರ ಪರವಾಗಿರಬೇಕು. ಆದರೆ, ಈ ಎರಡು ಕ್ಷೇತ್ರಗಳಲ್ಲಿ ರಾಜಕಾರಣಿಗಳ ವ್ಯಾಪಾರ ಆರಂಭವಾಗಿದೆ. ಈಗಾಗಲೇ, ಉನ್ನತ ಶಿಕ್ಷಣ ಮತ್ತು ಆರೋಗ್ಯ ಸೇವೆಗಳು ಬಡವರಿಂದ ದೂರವಾಗಿವೆ. ಆರೋಗ್ಯ ಮತ್ತು ಶಿಕ್ಷಣ ಮಾರಾಟವಾಗುತ್ತಿರುವುದು ಈ ದೇಶದ ದುರಂತ’ ಎಂದರು.
‘ಬಿಜೆಪಿ ಆಗಲಿ, ಕಾಂಗ್ರೆಸ್ ಆಗಲಿ ಎರಡು ಪಕ್ಷಗಳು ಖಾಸಗಿಯವರಿಗೆ ಲಾಭ ತಂದುಕೊಡುವ ಪಕ್ಷಗಳಾಗಿವೆ. ಶಿಕ್ಷಣ ಎನ್ನುವುದು ಕೆಲವೇ ಜನರ ಸ್ವತ್ತಾಗದೆ. ಎಲ್ಲರ ಸ್ವತ್ತಾಗಬೇಕು. ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣ ಸಿಗಬೇಕಾದರೆ, ಸರ್ಕಾರವೇ ಸಂಪೂರ್ಣ ಆರ್ಥಿಕ ಜವಾಬ್ದಾರಿ ತೆಗೆದುಕೊಳ್ಳಬೇಕು. ಆಗ ಮಾತ್ರ ಬಡವರು, ಕಾರ್ಮಿಕರು ಮತ್ತು ರೈತರ ಮಕ್ಕಳಿಗೆ ಶಿಕ್ಷಣ ಸಿಗುತ್ತದೆ’ ಎಂದು ಹೇಳಿದರು.
‘ವಿಜಯಪುರ ಜಿಲ್ಲೆಯು ನಿರಂತರವಾಗಿ ಬರಗಾಲಕ್ಕೆ ತುತ್ತಾಗುತ್ತ ಬಂದಿದ್ದು, ಬಹುತೇಕ ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳು ಕಷ್ಟಪಟ್ಟು ಅಭ್ಯಾಸ ಮಾಡಿ ಮುಂದೆ ಬರಬೇಕೆಂದರೆ ಉನ್ನತ ಶಿಕ್ಷಣ ಪಡೆಯಲು ಇಡೀ ಜಿಲ್ಲೆಯಲ್ಲಿ ಒಂದೇ ಒಂದು ಸರ್ಕಾರಿ ವೈದ್ಯಕೀಯ ಕಾಲೇಜು ಇಲ್ಲ’ ಎಂದರು.
‘ಖಾಸಗಿ ಕಾಲೇಜುಗಳಲ್ಲಿ ಡೊನೇಷನ್ ಕೊಟ್ಟು ಕಲಿಯುವುದಂತೂ ನಮ್ಮ ಜಿಲ್ಲೆಯ ಬಡ, ಶೋಷಿತ ಜನಗಳಿಗೆ, ರೈತ ಮತ್ತು ಕೂಲಿಕಾರ್ಮಿಕರ ಮಕ್ಕಳಿಗೆ ಖಂಡಿತ ಸಾಧ್ಯವಿಲ್ಲ. ಆದ್ದರಿಂದ ಸರ್ಕಾರವು ವಿಶೇಷ ಮುತುವರ್ಜಿ ವಹಿಸಿ ವಿಜಯಪುರ ಜಿಲ್ಲೆಗೆ ಒಂದು ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಬೇಕು’ ಎಂದು ಒತ್ತಾಯಿಸಿದರು.
ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸದೇ ಇದ್ದರೇ ಮುಂದೆ ಇಡೀ ಜಿಲ್ಲೆಯನ್ನೇ ಬಂದ್ ಮಾಡಿ ಹೋರಾಟ ರೂಪಿಸಿ ಪ್ರತಿಭಟಿಸುತ್ತೇವೆ. ಯಾವುದೇ ಕಾರಣಕ್ಕೂ ಸರ್ಕಾರಿ ಕಾಲೇಜು ಭ್ರಷ್ಟರ ಕೈಗೆ ಹೋಗಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಜಿಲ್ಲೆಯ ಹಿರಿಯ ಚಿಂತಕ ಅನಿಲ ಹೊಸಮನಿ, ವಿದ್ಯಾವತಿ ಅಂಕಲಗಿ, ವೆಂಕಟೇಶ ಒಗ್ಗೆಣ್ಣವರ, ದಲಿತ ವಿದ್ಯಾರ್ಥಿ ಪರಿಷತ್ ಮುಖಂಡರಾದ ಮಾದೇಶ ಚಲವಾದಿ, ಸಂದೇಶ ಕುಮಟಗಿ, ಯಾಶಿನ್ ಇನಾಮದಾರ, ಯುವರಾಜ ಓಲೇಕಾರ, ಪ್ರತಾಪ್, ಭೀಮು, ಶಂಕರ ಬಸರಗಿ, ದಾವೂದ್ ನಾಯ್ಕೊಡಿ, ಆದಿತ್ಯ, ಯಮನೂರಿ ಮಾದರ, ಯಮನೂರಿ ಸಿಂದಗಿರಿ, ರೂಪಾ, ಪ್ರೇಮಾ, ದೀಪಾ, ಪೂಜಾ, ರಂಜಾನಾ, ಕಾಲೇಜು ವಿದ್ಯಾರ್ಥಿಗಳು ಮತ್ತು ಸಾವಿರಾರು ಜನ ಯುವಜನರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಕೋಟ್ಯಂತರ ಶುಲ್ಕ ಕಟ್ಟಲು ಸಾಧ್ಯವಾಗದೇ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಆಗದೆ ತಮ್ಮ ಆಸೆಯನ್ನೇ ಬಲಿಕೊಟ್ಟಿದ್ದಾರೆಶ್ರೀನಾಥ್ ಪೂಜಾರಿ ಅಧ್ಯಕ್ಷ ದಲಿತ ವಿದ್ಯಾರ್ಥಿ ಪರಿಷತ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.