ವಿಜಯಪುರ : ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಬೆಳೆಗಾರರಿಗೆ ಅನ್ಯಾಯವಾಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಸಕ್ಕರೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕಬ್ಬು ಬೆಳೆಗಾರರ ಸಮ್ಮುಖದಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಭೆ ನಡೆಸಿ ರೈತಪರ ನಿರ್ಣಯ ಸ್ವೀಕರಿಸಬೇಕು. ಇಲ್ಲದಿದ್ದರೆ ಸಚಿವರ ಮನೆಯ ಎದುರು ಬೃಹತ್ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ- ಹಸಿರು ಸೇನೆ ಅಧ್ಯಕ್ಷ ಸಂಗಮೇಶ ಸಗರ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, 2025-26 ನೇ ಸಾಲಿನ ಕಬ್ಬಿನ ದರ ನಿಗದಿ, ರೈತರಿಗೆ ಆಗುತ್ತಿರುವ ಮೋಸದ ಕುರಿತು ಹಾಗೂ ಇನ್ನು ಅನೇಕ ವಿಷಯಗಳ ಕುರಿತು ವಾಡಿಕೆಯಂತೆ ಪ್ರತಿವರ್ಷದಂತೆ ಚರ್ಚೆ ಮಾಡಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ವಿಜಯಪುರ, ಬೆಳಗಾವಿ, ಬಾಗಲಕೋಟೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 2 ಸುತ್ತಿನ ಸಭೆ ಮಾಡಿ 74 ಕಾರ್ಖಾನೆ ಮಾಲಿಕರಿಗೆ ಕಾಲಾವಕಾಶ ನೀಡಿ ನವೆಂಬರ್ 1ರ ಒಳಗಾಗಿ ಎಫ್.ಆರ್.ಪಿ ಹೊರತುಪಡಿಸಿ ಹೆಚ್ಚಿಗೆ ಸಾಧ್ಯವಾಗುವಷ್ಟು ದರ ಘೋಷಿಸುವಂತೆ ನಿರ್ಣಯಿಸಲಾಗಿತ್ತು.
ಆದರೆ ಇದು ಕಾರ್ಯರೂಪಕ್ಕೆ ಬರುವ ಮಾತೇ ಇಲ್ಲದಂತಾಗಿದೆ, ಬೆಂಬಲಬೆಲೆ, ತೂಕದಲ್ಲಿ ಮೋಸ, ಇಳುವರಿಯಲ್ಲಿ ಮೋಸ, ಸಮಯಕ್ಕೆ ಸರಿಯಾಗಿ ಬಾಕಿ ಬಿಲ್ ಹಾಕದಿರುವುದು ಸೇರಿದಂತೆ ಹಲವಾರು ಗಂಭಿರ ವಿಷಯಗಳ ಚರ್ಚೆ ನಂತರವೇ ಕಾರ್ಖಾನೆ ಪ್ರಾರಂಭಿಸಿಬೇಕು. ಕನಿಷ್ಟ ಒಂದು ಟನ್ ಕಬ್ಬಿಗೆ ಕಟಾವು ಮತ್ತು ಸಾಗಾಣೆಯನ್ನು ಹೊರತುಪಡೆಸಿ ₹ 3500 ಆದರೂ ಕೊಡಲೇ ಬೇಕು. ಮೊದಲು ಕಬ್ಬಿನಿಂದ ಸಕ್ಕರೆ ಮಾತ್ರ ತಾಯಾರಾಗುತ್ತಿತ್ತು ಈಗ 7-8 ಉಪಉತ್ಪನ್ನಗಳು ಸಿದ್ದವಾಗಿ ಸಕ್ಕರೆ ಕಾರ್ಖಾನೆ ಮಾಲೀಕರು ಒಳ್ಳೆಯ ಲಾಭದಲ್ಲಿದ್ದು, ಇಂದಿನ ಸಾಗುವಳಿ ವೆಚ್ಚದ ಪ್ರಕಾರ ಒಂದು ಎಕರೆ ಕಬ್ಬು ಬೆಳೆದ ರೈತ 30 ಸಾವಿರ ನಷ್ಟದಲ್ಲಿದ್ದಾನೆ. ಆದರೆ ಸರಿಯಾದ ಬೆಲೆ ಸಿಗದೇ ಕಬ್ಬು ಬೆಳೆಗಾರರು ಮಾತ್ರ ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ ಎಂದು ಸಂಗಮೇಶ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕಬ್ಬು ಬೆಳೆಗಾರರಿಗೆ ಸ್ಪಂದನೆ ದೊರಕದೇ ಹೋದರೆ ಜಿಲ್ಲೆಯ ಸಮಸ್ತ ಕಬ್ಬು ಬೆಳೆಗಾರರು ಹಾಗೂ ರೈತರು ಸೇರಿ ಜಿಲ್ಲಾಧಿಕಾರಿಗಳ ಕಚೇರಿ, ಸಚಿವರಾದ ಶಿವಾನಂದ ಪಾಟೀಲ ಹಾಗೂ ಡಾ.ಎಂ.ಬಿ. ಪಾಟೀಲ ನಿವಾಸದ ಎದುರು ಪ್ರತಿಭಟನೆ ನಡೆಸಲಾಗುವುದು, ಕೂಡಲೇ ಜಿಲ್ಲಾಧಿಕಾರಿ, ಸಕ್ಕರೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಎಲ್ಲ ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ರೈತ ಮುಖಂಡರೊಡನೆ ಸಭೆ ಕರೆದು ದರ ನಿಗದಿ ಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.