ವಿಜಯಪುರ: ಕೇಂದ್ರ ಸರ್ಕಾರದ ಅನೇಕ ಯೋಜನೆಗಳಿಂದ ಜನರು ಫಲಾನುಭವಿಗಳಾಗುತ್ತಿದ್ದಾರೆ. ಡಿಜಿಟಲೀಕರಣದಿಂದ ಯೋಜನೆಗಳ ಲಾಭ ಸುಲಭವಾಗಿ ಎಲ್ಲರಿಗೂ ದೊರೆಯುವಂತಾಗಿದೆ. ಆನ್ ಲೈನ್ ಹಣಕಾಸು ವಹಿವಾಟು ನಡೆಸುವ ಅಪ್ಲಿಕೇಶನ್‌ಗಳನ್ನು ಜನರು ವ್ಯಾಪಕವಾಗಿ ಬಳಸುತ್ತಿರುವುದು ಅಭಿವೃದ್ಧಿಯ ಸಂಕೇತ ಎಂದು ರಮೇಶ ಜಿಗಜಿಣಗಿ ಹೇಳಿದರು.
ಕೇಂದ್ರ ಸರ್ಕಾರದ ವಾರ್ತಾ ಶಾಖೆ (ಪಿಐಬಿ), ಕೇಂದ್ರ ಸಂವಹನ ಇಲಾಖೆ, ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ(ಎನ್‍ಟಿಪಿಸಿ), ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಶುಕ್ರವಾರ ಆಯೋಜಿಸಲಾಗಿದ್ದ ‘ವಾರ್ತಾಲಾಪ’ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಯಾರೂ ಸಹ ಹಸಿವಿನಿಂದ ಬಳಲಬಾರದು ಎನ್ನುವ ದೂರದೃಷ್ಟಿಯನ್ನು ಹೊಂದಲಾಗಿದ್ದು, ಇದುವರೆಗೂ ಸುಮಾರು 81 ಕೋಟಿಗೂ ಅಧಿಕ ಮಂದಿಗೆ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಉಚಿತವಾಗಿ ಪಡಿತರ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಕೇಂದ್ರ ವಾರ್ತಾ ಶಾಖೆಯ ಹೆಚ್ಚುವರಿ ಮಹಾನಿರ್ದೇಶಕ ಎಸ್.ಜಿ. ರವೀಂದ್ರ ಮಾತನಾಡಿ, ಪತ್ರಕರ್ತರಿಗೆ ಕೇಂದ್ರ ಸರ್ಕಾರದ ಯೋಜನೆಗಳ ಅರಿವು ಮೂಡಿಸುವುದು ‘ವಾರ್ತಾಲಾಪ’ ಕಾರ್ಯಾಗಾರದ ಮುಖ್ಯ ಉದ್ದೇಶ ಎಂದರು.
ಜಿಲ್ಲಾಧಿಕಾರಿ ಡಾ. ಆನಂದ್ ಕೆ, ಉತ್ತಮ ಸಮಾಜ ನಿರ್ಮಾಣದಲ್ಲಿ ಆಡಳಿತ ಹಾಗೂ ಮಾಧ್ಯಮಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿದಾಗ ಸರ್ಕಾರದ ಯೋಜನೆಗಳನ್ನು ಮತ್ತಷ್ಟು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಮಾಧ್ಯಮಗಳು ಸುದ್ದಿ ಬಿತ್ತರಿಸುವ ಮುನ್ನ ಸಾಮಾಜಿಕ ಜವಾಬ್ದಾರಿ ಪಾಲಿಸಬೇಕು. ಸೂಕ್ಷ್ಮ ಘಟನೆಗಳ ವರದಿಗಾರಿಕೆಯ ವೇಳೆ ಕಾನೂನಿನ ಅರಿವಿನೊಂದಿಗೆ ವರದಿ ಮಾಡಿದಾಗ ಸಂಭವಿಸಬಹುದಾದ ಅನಾಹುತಗಳನ್ನು ತಡೆಗಟ್ಟಲು ಸಾಧ್ಯ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ್, ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳುವಲ್ಲಿ ಪ್ರತಿಯೊಬ್ಬರ ಜವಾಬ್ದಾರಿ ಗಣನೀಯವಾಗಿದೆ. ಸಮಾಜದಲ್ಲಿ ಸ್ವಚ್ಛತೆಯ ಕುರಿತು ಅರಿವು ಮೂಡಿದಾಗ ಮಾತ್ರ ನಾವು ಬದಲಾವಣೆ ಕಾಣಲು ಸಾಧ್ಯ ಎಂದು ತಿಳಿಸಿದರು.
ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ, ಕೂಡಗಿಯ ಪ್ರಧಾನ ವ್ಯವಸ್ಥಾಪಕ ಸಂತೋಷ ತಿವಾರಿ, ಎನ್.ಟಿ.ಪಿ.ಸಿ. ನಿಗಮ ತನ್ನ ಸಾಮಾಜಿಕ ಹೊಣೆಗಾರಿಕೆ ನೀತಿಯಡಿ ಶೈಕ್ಷಣಿಕ, ಸಾಮಾಜಿಕ ಚಟುವಟಿಕೆಗಳನ್ನು ಕೈಗೊಂಡಿದೆ. ವಿದ್ಯಾರ್ಥಿಗಳಿಗೆ ಶಿಷ್ಯವೇತನ, ಸೈಕಲ್, ಶೈಕ್ಷಣಿಕ ಸಾಮಗ್ರಿಗಳು, ಮಹಿಳೆಯರಿಗೆ ಹೊಲಿಗೆ ಯಂತ್ರ, ಶೌಚಾಲಯಗಳು ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಹೇಳಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಪ್ರಕಾಶ್ ಜಿ. ಬೆಣ್ಣೂರ, ಕರ್ನಾಟಕ ಕಾರ್ಯನಿರತ ಸಂಪಾದಕರ ಸಂಘದ ಅಧ್ಯಕ್ಷ ಇರ್ಫಾನ್ ಶೇಖ್, ಪತ್ರಕರ್ತರ ಧ್ವನಿ ಸಂಘದ ಕರ್ನಾಟಕ ಕಾರ್ಯನಿರತ ಅಧ್ಯಕ್ಷ ಗುರುರಾಜ್ ಹೂಗಾರ್, ಕರ್ನಾಟಕ ರಾಜ್ಯ ಮಹಿಳಾ ಸಂಪಾದಕಿಯರ ಸಂಘದ ಅಧ್ಯಕ್ಷೆ ರಶ್ಮಿ ಪಾಟೀಲ್ ಉಪಸ್ಥಿತರಿದ್ದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನಪರ ಯೋಜನೆಗಳು ಜಿಲ್ಲೆ ತಾಲ್ಲೂಕು ಗ್ರಾಮಮಟ್ಟದಲ್ಲಿ ಅನುಷ್ಠಾನ ಮಾಡುವಲ್ಲಿ ಮಾಧ್ಯಮದ ಪಾತ್ರ ಬಹಳ ಮುಖ್ಯವಾಗಿದೆ
- ಎಸ್.ಜಿ. ರವೀಂದ್ರ ಹೆಚ್ಚುವರಿ ಮಹಾನಿರ್ದೇಶಕ ಕೇಂದ್ರ ವಾರ್ತಾ ಶಾಖೆ ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.