ವಿಜಯಪುರ: ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಆರಂಭಿಸುವಲ್ಲಿ ಖಾಸಗಿ ಸಹಭಾಗಿತ್ವವವನ್ನು ಸಂಪೂರ್ಣವಾಗಿ ವಿರೋಧಿಸುತ್ತೇನೆ. ಯಾರ ಹಿತಕ್ಕಾಗಿ ಪಿಪಿಪಿ ಮಾದರಿ ಎಂಬುದನ್ನು ಜನರಿಗೆ ತಿಳಿಸಬೇಕು ಹಾಗೂ ಖಾಸಗಿಯರಿಗೆ ಲಾಭ ಮಾಡುವ ಉದ್ದೇಶ ಪಿಪಿಪಿ ಮಾದರಿ ಹೊಂದಿದೆ ಎಂದು ಧಾರವಾಡದ ವಾಲ್ಮಿಯ ಮಾಜಿ ನಿರ್ದೇಶಕ ರಾಜೇಂದ್ರ ಪೋದ್ದಾರ ಹೇಳಿದರು.
ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿಯಲ್ಲಿ ಬುಧವಾರ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿ ಅವರು ಮಾತನಾಡಿದರು.
ಖಾಸಗಿ ಸಹಭಾಗಿತ್ವ ಬಡವರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಜನರು ಮನಗಾಣಬೇಕು. ಇದಕ್ಕೆ ಜನಪ್ರತಿನಿಧಿಗಳು ಸ್ಪಂದಿಸಬೇಕು, ಎಲ್ಲಾ ವರ್ಗದವರು ಒಂದುಗೂಡಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಲು ಹೋರಾಟ ಬೆಳೆಸಬೇಕು ಎಂದು ಹೇಳಿದರು.
ಸಮ ಸಮಾಜದ ನಿರ್ಮಾಣದ ಕನಸು ಈಡೇರಿಸಿಬೇಕಿದೆ, ಪ್ರತಿರೋಧವೆ ಸಮಾಜವನ್ನು ಉಳಿಸುವ ಪ್ರಬಲವಾದ ಅಸ್ತ್ರ ಅದಕ್ಕಾಗಿ ಎಲ್ಲರು ಒಗ್ಗಟ್ಟಿನಿಂದ ಹೋರಾಟ ಬೆಳೆಸಬೇಕಿದೆ ಎಂದು ಕರೆ ನೀಡಿದರು.
ಕರ್ನಾಟಕ ರಾಜ್ಯ ಐಟಿಐ ಅಸೋಸಿಯೇಷನ್ ಅಧ್ಯಕ್ಷ ಎಸ್. ಎಂ. ನೆರಿಬೆಂಚಿ ಮಾತನಾಡಿ, ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವವರೆಗೆ ನಾವು ಹೋರಾಟದ ಜೊತೆ ಇರುತ್ತೇವೆ, ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ಬಿಟ್ಟುಕೊಡಲು ಬಿಡುವುದಿಲ್ಲ, ನಮ್ಮ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಮೊದಲೇ ಸ್ಥಾಪನೆಯಾಗಬೇಕಿತ್ತು. ಬಡವರ ಮಕ್ಕಳು ವೈದ್ಯಕೀಯ ಶುಲ್ಕ ಕಡಿಮೆ ಕೊಟ್ಟು ಓದಲು ಸರ್ಕಾರಿ ವೈದ್ಯಕೀಯ ಕಾಲೇಜು ನಮ್ಮ ಜಿಲ್ಲೆಗೆ ಅವಶ್ಯಕತೆ ಇದೆ. ಇದನ್ನು ಸರ್ಕಾರ ಜವಾಬ್ದಾರಿಯಿಂದ ನಿರ್ಮಾಣ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಹೋರಾಟ ಸಮಿತಿಯ ಸದಸ್ಯರಾದ ಅರವಿಂದ ಕುಲಕರ್ಣಿ, ಬಿ. ಭಗವಾನ್ ರೆಡ್ಡಿ, ಲಲಿತಾ ಬಿಜ್ಜರಗಿ, ವಿದ್ಯಾವತಿ ಅಂಕಲಗಿ, ಅಕ್ರಂ ಮಾಶ್ಯಾಳಕರ, ಮಲ್ಲಿಕಾರ್ಜುನ ಎಚ್. ಟಿ, ಸುರೇಶ ಬಿಜಾಪುರ, ಜಗದೇವ ಸೂರ್ಯವಂಶಿ, ಲಕ್ಷ್ಮಣ ಕಂಬಾಗಿ, ಗಿರೀಶ ಕಲಘಟಗಿ, ಭರತ್ ಕುಮಾರ ಎಚ್. ಟಿ, ಶ್ರೀನಾಥ್ ಪೂಜಾರಿ, ಸುರೇಶ್ ಜೀಬಿ, ದಸ್ತಗಿರಿ ಉಕ್ಕಲಿ, ಸಿದ್ರಾಮ ಹಳ್ಳೂರ, ಮಲ್ಲಿಕಾರ್ಜುನ ಬಟಗಿ, ಡಾ ಎಂ.ಎಸ್. ಗುರಿಕಾರ, ನೀಲಾಂಬಿಕಾ ಬಿರಾದಾರ, ಗೀತಾ ಪಾಟೀಲ, ಗೀತಾ ಕಟ್ಟಿ, ಶಿವಬಾಳಮ್ಮ ಕೊಂಡಗೂಳಿ, ಗೀತಾ. ಎಚ್, ಮೀನಾಕ್ಷ ಸಿಂಗೆ, ಕಾಮಿನಿ ಧರಣಿಯಲ್ಲಿ ಪಾಲ್ಗೊಂಡಿದ್ದರು.
ಪ್ರತಿಯೊಬ್ಬರು ಕಟ್ಟುವ ತೆರಿಗೆಯಿಂದ ಸರ್ಕಾರ ನಡೆಸುತ್ತಿರುವವರು ಜನಸಾಮಾನ್ಯರ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಗಮನಹರಿಸಬೇಕಾಗಿದೆ. ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವುದು ಜಿಲ್ಲೆಯ ಜನರ ಬೇಡಿಕೆಯಾಗಬೇಕಿದೆ-ರಾಜೇಂದ್ರ ಪೋದ್ದಾರಮಾಜಿ ನಿರ್ದೇಶಕ ವಾಲ್ಮಿಧಾರವಾಡ