ADVERTISEMENT

ವಿಜಯಪುರ| ಗುಂಡು ಹಾರಿಸಿ ದೇವರನಿಂಬರಗಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷನ ಕೊಲೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 13:02 IST
Last Updated 3 ಸೆಪ್ಟೆಂಬರ್ 2025, 13:02 IST
<div class="paragraphs"><p>ಭೀಮನಗೌಡ ಬಿರಾದಾರ</p></div>

ಭೀಮನಗೌಡ ಬಿರಾದಾರ

   

ವಿಜಯಪುರ: ಜಿಲ್ಲೆಯ ಚಡಚಣ ತಾಲ್ಲೂಕಿನ ದೇವರನಿಂಬರಗಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಭೀಮನಗೌಡ ಬಿರಾದಾರ(40) ಅವರನ್ನು ಬುಧವಾರ ಗುಂಪೊಂದು ನಾಡ ಪಿಸ್ತೂಲ್‌ನಿಂದ ಗುಂಡು ಹಾರಿಸಿ, ಕೊಲೆ ಮಾಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಗ್ರಾಮದ ವಾಸಿಂ ಮಣಿಯಾರ, ರಝಿವುಲ್ಲಾ ಮಕಾಂದರ್, ಮೌಲಸಾಬ ಬೋರಗಿ, ಫಿರೋಜ ಶೇಖ್ ಅವರಾದನನ್ನು ಬಂಧಿಸಿರುವುದಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ADVERTISEMENT

ಭೀಮನಗೌಡ ಬಿರಾದಾರ ಗ್ರಾಮದ ಕಟಿಂಗ್‌ ಶಾಪ್‌ವೊಂದರಲ್ಲಿ ಇದ್ದ ವೇಳೆ ಆರೋಪಿಗಳು ಅಂಗಡಿಗೆ ನುಗ್ಗಿ, ಕಣ್ಣಿಗೆ ಕಾರದ ಪುಡಿ ಎರಚಿ, ಬಳಿಕ ಮೂರ್ನಾಲ್ಕು ಸುತ್ತು ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ ಎಂದು ಹೇಳಿದರು.

‘ಕೊಲೆಗೆ ಹಣಕಾಸು ವ್ಯವಹಾರ, ರಾಜಕೀಯ ಮತ್ತು ವೈಯಕ್ತಿಕ ಸೇರಿದಂತೆ ಹಲವು ಕಾರಣಗಳು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಭೀಮಾತೀರದ ಅಪರಾಧ ಪ್ರಕರಣಗಳಿಗೂ ಇದಕ್ಕೂ ಸಂಬಂಧ ಇರುವ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಲಭಿಸಿಲ್ಲ. ಕೊಲೆಗೆ ಸಂಬಂಧಿಸಿದಂತೆ ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುವುದು’ ಎಂದರು.

‘ಬಿರಾದಾರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದಾಗ ಆಶ್ರಯ ಯೋಜನೆ ಮನೆ ಕೊಡಿಸುವುದಾಗಿ ಹೇಳಿ ಆರೋಪಿಯೊಬ್ಬನಿಂದ ₹1 ಲಕ್ಷ ಹಣ ತೆಗೆದುಕೊಂಡಿದ್ದರು. ಆದರೆ, ಮನೆಯನ್ನು ಕೊಡಿಸಲಿಲ್ಲ, ಹಣವನ್ನು ವಾಪಸ್‌ ಕೊಟ್ಟಿರಲಿಲ್ಲ ಎಂಬ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂದು ಆರೋಪಿಯೊಬ್ಬ ವಿಚಾರಣೆ ವೇಳೆ ತಿಳಿಸಿದ್ದಾನೆ’ ಎಂದರು.

‘2023ರಲ್ಲಿ ಗ್ರಾಮದ ಪಿಡಿಒ ಠಾರೋಡ ಎಂಬುವವರೊಂದಿಗೆ ಆರೋಪಿಗಳು ಕೆಲಸದ ವಿಷಯವಾಗಿ ಜಗಳವಾಡಿಕೊಂಡಿದ್ದರು. ಈ ವೇಳೆ ಆರೋಪಿಗಳ ವಿರುದ್ಧ ಜಾತಿ ನಿಂದನೆ ದೂರು ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಕೀರ್‌ ಮಣಿಯಾರ ಎಂಬಾತ ಜೈಲಿಗೆ ಹೋಗಿ ಬಂದಿದ್ದನು. ಈ ಪ್ರಕರಣದಲ್ಲೂ ಭೀಮನಗೌಡ ಬಿರಾದಾರನ ಪಾತ್ರ ಇದೆ ಎಂದು ಆರೋಪಿಸಿ ಈ ಹಿಂದೆ ಗಲಾಟೆ ಮಾಡಿ, ಜೀವ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿ ಕೊಲೆಯಾದ ಬಿರಾದಾರ ಅವರ ಪತ್ನಿ ರಾಜಶ್ರೀ ಬಿರಾದಾರ ದೂರು ನೀಡಿದ್ದಾರೆ’ ಎಂದರು.

‘ದೇವರ ನಿಂಬರಗಿ ಗ್ರಾಮ ಪಂಚಾಯಿತಿ ಆಡಳಿತ ಸುಮಾರು 10 ವರ್ಷಗಳಿಂದ ಕೊಲೆಯಾದ ಬಿರಾದಾರ ಅವರ ಹಿಡಿತದಲ್ಲಿ ಇತ್ತು. ಅಲ್ಲದೇ, ತೆರವಾಗಿರುವ ಅಧ್ಯಕ್ಷ ಸ್ಥಾನಕ್ಕೆ ಶೀಘ್ರದಲ್ಲೇ ನಡೆಯಲಿರುವ ಚುನಾವಣೆಯಲ್ಲೂ  ಬಿರಾದಾರ ಬೆಂಬಲಿತರು ಅಧ್ಯಕ್ಷರಾಗುವ ಸಾಧ್ಯತೆ ಇತ್ತು. ರಾಜಕೀಯ ವೈಷಮ್ಯಕ್ಕೆ ಬಿರಾದಾರ ಕೊಲೆಯಾಗಿದೆ’ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.