ADVERTISEMENT

ಜಲಾಶಯದಲ್ಲಿ ನೀರಿದೆ; ಆರ್‌.ಪಿ.ಕುಲಕರ್ಣಿ

ಎಂಎಲ್‌ಐ ಕೆರೆಗಳಿಗೆ ಮೇ 15ರಿಂದ ನೀರು ಹರಿಸುವಿಕೆ

ಚಂದ್ರಶೇಖರ ಕೊಳೇಕರ
Published 12 ಮೇ 2019, 6:16 IST
Last Updated 12 ಮೇ 2019, 6:16 IST
ಆರ್‌.ಪಿ.ಕುಲಕರ್ಣಿ
ಆರ್‌.ಪಿ.ಕುಲಕರ್ಣಿ   

ಆಲಮಟ್ಟಿ:ವಿಜಯಪುರ ಜಿಲ್ಲೆಯಾದ್ಯಂಥಹ ಇದೀಗ ಕುಡಿಯುವ ನೀರಿಗೆ ಹಾಹಾಕಾರ. ಜನ–ಜಾನುವಾರುಗಳಿಗೆ ಅನುಕೂಲವಾಗುವಂತೆ, ಆಲಮಟ್ಟಿಯ ಲಾಲ್‌ಬಹದ್ದೂರ್‌ ಶಾಸ್ತ್ರಿ ಸಾಗರ ಜಲಾಶಯದಿಂದ ಕಾಲುವೆಗೆ ನೀರು ಹರಿಸಬೇಕು ಎಂಬ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಇದರ ಜತೆಗೆ ಕೆರೆಗಳಿಗೆ, ಹಳ್ಳಗಳಿಗೆ ನೀರು ತುಂಬುವಂತೆ ಪ್ರಬಲ ಹಕ್ಕೊತ್ತಾಯವೂ ಮಂಡನೆಯಾಗುತ್ತಿದೆ. ಇಂಥಹ ಹೊತ್ತಲ್ಲಿ ಜನರ ನೀರಿನ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ‘ಪ್ರಜಾವಾಣಿ’, ಆಲಮಟ್ಟಿ ಅಣೆಕಟ್ಟು ವಲಯದ ಮುಖ್ಯ ಎಂಜಿನಿಯರ್ ಆರ್‌.ಪಿ.ಕುಲಕರ್ಣಿ ಜತೆ ಮಾತುಕತೆ ನಡೆಸಿದೆ.

* ಪ್ರಸ್ತುತ ನೀರಿನ ಸ್ಥಿತಿಗತಿ ಹೇಗಿದೆ?

ADVERTISEMENT

ಜಲಾಶಯದಲ್ಲಿ ಶನಿವಾರ 509.23 ಮೀ.ವರೆಗೆ ನೀರಿನ ಸಂಗ್ರಹವಿದ್ದು, 26.356 ಟಿಎಂಸಿ ಅಡಿ ನೀರಿದೆ. ಇದರಲ್ಲಿ ಬಳಕೆಗೆ 8.736 ಟಿಎಂಸಿ ಅಡಿ ನೀರು ಲಭ್ಯವಿದೆ. ಜಲಾಶಯದ ಅವಲಂಬಿತ ನಗರ, ಪಟ್ಟಣ ಹಾಗೂ ಬಹುಹಳ್ಳಿ ಕುಡಿಯುವ ನೀರು ಪೂರೈಸುವ ಯೋಜನೆಗಳಿಗೆ ಬೇಕಾದಷ್ಟು ಪ್ರಮಾಣದಲ್ಲಿ ನೀರಿದೆ. ಜೂನ್‌ವರೆಗೂ ಕುಡಿಯುವ ನೀರಿನಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ.

ವಿಜಯಪುರ ನಗರಕ್ಕೆ ಕುಡಿಯುವ ನೀರು ಪೂರೈಕೆಯಾಗುವ ಕೊಲ್ಹಾರ ಬಳಿ, ನೀರಿನ ಮಟ್ಟ ಕುಸಿಯಬಾರದು ಎನ್ನುವ ಉದ್ದೇಶದಿಂದ, ಆಲಮಟ್ಟಿ ಜಲಾಶಯದ ಮಟ್ಟವನ್ನು 507.2 ಮೀ.ವರೆಗೆ ಕಾಪಾಡಿಕೊಳ್ಳಬೇಕಿದೆ.

* ಕೆರೆಗಳಿಗೆ ನೀರು ಭರ್ತಿ ಬಗ್ಗೆ ತಿಳಿಸಿ?

ಜಲಾಶಯ ವ್ಯಾಪ್ತಿಯ ವಿಜಯಪುರ, ಬಾಗಲಕೋಟೆ ಜಿಲ್ಲೆಯ ವಿವಿಧ ಕಾಲುವೆಗಳಿಗೆ ಏಪ್ರಿಲ್‌ ತಿಂಗಳಲ್ಲಿಯೇ ನೀರು ಹರಿಸಿ, ಸನಿಹ ಇರುವ ಬಹುತೇಕ ಕೆರೆಗಳನ್ನು, ಕೆರೆಯ ಸಾಮರ್ಥ್ಯದ ಅರ್ಧದಷ್ಟು ಭರ್ತಿ ಮಾಡಲಾಗಿದೆ. ಆದರೆ ಮುಳವಾಡ ಏತ ನೀರಾವರಿ ಯೋಜನೆ (ಎಂಎಲ್‌ಐ)ಯ ಮೂರನೇ ಹಂತದ ವಿಜಯಪುರ ಕಾಲುವೆಯ ಮೂಲಕ ಸಂಪರ್ಕ ಹೊಂದಿರುವ ಕೆರೆಗಳಿಗೆ ಇನ್ನೂ ನೀರು ಹರಿಸಿಲ್ಲ.

ಕೂಡಗಿ ಬಳಿ ರೈಲು ಹಳಿ ದಾಟಿಸುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ, ಆದರೆ ರೈಲ್ವೆ ಇಲಾಖೆಯೊಂದಿಗೆ ಜಂಟಿಯಾಗಿ ಪರಿವೀಕ್ಷಣೆ ಮಾಡಿ, ಇದೇ 15ರಿಂದ ಕಾಲುವೆ ಜಾಲದ ಮೂಲಕ ಕೆರೆಗಳಿಗೆ ನೀರು ಹರಿಸಲಾಗುವುದು. ಅದಕ್ಕಾಗಿ 0.674 ಟಿಎಂಸಿ ಅಡಿ ನೀರು ಅಗತ್ಯವಿದೆ.

* ಆರ್‌.ಟಿ.ಪಿ.ಎಸ್‌.ಗಾಗಿ ಮೇ, ಜೂನ್‌ ತಿಂಗಳಲ್ಲಿ ಹರಿಸಬೇಕಾದ ನೀರಿನ ಪ್ರಮಾಣ ಎಷ್ಟು?

ಆರ್‌.ಟಿ.ಪಿ.ಎಸ್‌.ಗಾಗಿ ಮೇ, ಜೂನ್‌ ತಿಂಗಳಲ್ಲಿ ಒಟ್ಟು 1.517 ಟಿಎಂಸಿ ಅಡಿ ನೀರು ಹರಿಸಬೇಕಿದೆ. ಇದರಲ್ಲಿ 1 ಟಿಎಂಸಿ ಅಡಿ ನೀರನ್ನು ಈಗಾಗಲೇ ಹರಿಸಲಾಗಿದೆ. ಬಾಕಿ ಉಳಿದ ನೀರನ್ನು ಮುಂದೆ ಹರಿಸಲಾಗುತ್ತದೆ.

* ಎಂಎಲ್‌ಐ ಹೊರತುಪಡಿಸಿ ಉಳಿದ ಕಾಲುವೆಗಳಿಗೆ ನೀರು ಹರಿಸಬಹುದೆ?

ಜಲಾಶಯದಲ್ಲಿ ಭಾಷ್ಪೀಕರಣದಿಂದಾಗಿ ಎರಡು ತಿಂಗಳಲ್ಲಿ ಅಂದಾಜು 2.155 ಟಿಎಂಸಿ ಅಡಿ ನೀರು ಆವಿಯಾಗುತ್ತದೆ. ಎಂಎಲ್‌ಐ ಮೂರನೇ ಹಂತದ ಕಾಲುವೆ ವ್ಯಾಪ್ತಿಯ ಕೆರೆಗಳಿಗೆ ನೀರು ಹರಿಸಿದ ನಂತರ, ಉಳಿದ ನೀರನ್ನು ಗಮನಿಸಿ ಐಸಿಸಿ ಅನುಮತಿಯೊಂದಿಗೆ ಉಳಿದ ಕಾಲುವೆಗಳಿಗೆ ನೀರು ಹರಿಸಲು ತೀರ್ಮಾನಿಸಲಾಗುವುದು.

ಜೂನ್‌ನಲ್ಲಿ ಯಾವುದೇ ಕಾಲುವೆಗೂ ನೀರು ಹರಿಸುವುದಿಲ್ಲ. ಆಲಮಟ್ಟಿ ಎಡದಂಡೆ ಕಾಲುವೆಯಲ್ಲಿ ಜನರ ಬೇಡಿಕೆ ಹೆಚ್ಚಿದೆ. ಆದರೆ ಆ ಭಾಗಕ್ಕೆ ನವೆಂಬರ್, ಡಿಸೆಂಬರ್‌ನಲ್ಲಿಯೂ ಸಾಕಷ್ಟು ನೀರು ಹರಿಸಲಾಗಿದೆ. ಮೇ ತಿಂಗಳಲ್ಲಿಯೂ ಎಎಲ್‌ಬಿಸಿ 0 ಕಿ.ಮೀ.ದಿಂದ 12.5 ಕಿ.ಮೀ.ವರೆಗೂ ನೀರು ಹರಿಸಲಾಗಿದೆ.

* ಮರೋಳ ಹನಿ ನೀರಾವರಿಗೆ ನೀರಿನ ಅಗತ್ಯ ಎಷ್ಟಿದೆ?

ಬಾಗಲಕೋಟೆ ಜಿಲ್ಲೆಯ ಮರೋಳ ಹನಿ ನೀರಾವರಿ ಯೋಜನೆಗೆ 0.65 ಟಿಎಂಸಿ ಅಡಿ ನೀರನ್ನು ಜೂನ್‌ ಮೊದಲ ವಾರ ಹರಿಸಲಾಗುತ್ತದೆ. ಅಲ್ಲಿನ ಜನರಿಗೆ ಮುಂಗಾರಿಗಾಗಿ ನೀರು ಬಿಡುವ ಮುನ್ನವೇ, ಬೆಳೆ ಪದ್ಧತಿಯ ಬಗ್ಗೆ ಕೆಬಿಜೆಎನ್ಎಲ್‌ನಿಂದ ಇದೇ ಮೇ 15ರಂದು ಜಾಗೃತಿ ಸಭೆ ನಡೆಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.