ADVERTISEMENT

ಆಲಮಟ್ಟಿಯಿಂದ ಬಾಗಲಕೋಟೆಗೆ ಜಲ ಸಂಪರ್ಕ

ಜಲಸಾರಿಗೆ ಕಾಮಗಾರಿಗೆ ₹12.2 ಕೋಟಿ

ಚಂದ್ರಶೇಖರ ಕೊಳೇಕರ
Published 4 ಜನವರಿ 2023, 14:10 IST
Last Updated 4 ಜನವರಿ 2023, 14:10 IST
ಆಲಮಟ್ಟಿಯಿಂದ ಬಾಗಲಕೋಟೆ ನಡುವಿನ ಜಲಸಾರಿಗೆಯ ಅಧ್ಯಯನ ಹಾಗೂ ಸ್ಥಳ ಪರಿಶೀಲಯನ್ನು ಕರ್ನಾಟಕ ಮೆರಿಟೈನ್ ಬೋರ್ಡ್‌ನ ನಿರ್ದೇಶಕ ಕ್ಯಾಪ್ಟನ್ ಸಿ. ಸ್ವಾಮಿ ನೇತೃತ್ವದ ತಂಡ ನಡೆಸಿತು
ಆಲಮಟ್ಟಿಯಿಂದ ಬಾಗಲಕೋಟೆ ನಡುವಿನ ಜಲಸಾರಿಗೆಯ ಅಧ್ಯಯನ ಹಾಗೂ ಸ್ಥಳ ಪರಿಶೀಲಯನ್ನು ಕರ್ನಾಟಕ ಮೆರಿಟೈನ್ ಬೋರ್ಡ್‌ನ ನಿರ್ದೇಶಕ ಕ್ಯಾಪ್ಟನ್ ಸಿ. ಸ್ವಾಮಿ ನೇತೃತ್ವದ ತಂಡ ನಡೆಸಿತು   

ಆಲಮಟ್ಟಿ: ಇಲ್ಲಿನ ಲಾಲ್ ಬಹದ್ದೂರ್‌ ಶಾಸ್ತ್ರಿ ಜಲಾಶಯದ ಬಳಿಯಿಂದ ಬಾಗಲಕೋಟೆ ವರೆಗೆ ಕೃಷ್ಣಾ ನದಿಯಲ್ಲಿ ಜಲಸಾರಿಗೆ ಆರಂಭಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಮೂಲಸೌಕರ್ಯ ಕಲ್ಪಿಸಲು ₹12 ಕೋಟಿ ಮೊತ್ತದ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ.

ಮೊದಲ ಹಂತದಲ್ಲಿ ಆಲಮಟ್ಟಿಯಿಂದ ಬೀಳಗಿ ತಾಲ್ಲೂಕಿನ ಹೆರಕಲ್‌ ವರೆಗೆ ಕೃಷ್ಣಾ ನದಿಯಲ್ಲಿ 25 ಕಿ.ಮೀ ಹಾಗೂ ಎರಡನೇ ಹಂತದಲ್ಲಿ ಹೆರಕಲ್ ಮತ್ತು ಬಾಗಲಕೋಟೆಯ ಘಟಪ್ರಭಾ ನದಿಯಲ್ಲಿ 6 ಕಿ.ಮೀ ದೂರದ ವರೆಗೆ ಜಲ ಸಾರಿಗೆ ಆರಂಭಿಸಲು ಉದ್ದೇಶಿಸಲಾಗಿದೆ. ಈಗ ಮೊದಲ ಹಂತದ ಯೋಜನೆಯ ಕಾಮಗಾರಿ ಆರಂಭಗೊಂಡಿವೆ.

‘2020ರಲ್ಲಿ ದೇಶವ್ಯಾಪಿ ಜಲ ಸಾರಿಗೆಯ ಮಾರ್ಗ ಸಮೀಕ್ಷೆಗೆ ಬ್ಲಾಕ್ ಬ್ರಿಕ್ಸ್ ಕಂಪನಿಯವರು ಬಂದಿದ್ದಾಗ, ಇಲ್ಲಿ ಜಲಸಾರಿಗೆ ಆರಂಭಿಸುವುದರಿಂದ ಆಗುವ ಪ್ರಯೋಜನ, ಪ್ರವಾಸಿ ಚಟುವಟಿಕೆಗಳ ಅಭಿವೃದ್ಧಿ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೆವು. ಇದರಿಂದಾಗಿ ಜಲಮಾರ್ಗದ ಸರ್ವೆ ನಡೆಸಿ, ಭಾರತ ಸಾಗರಮಾಲಾ ಯೋಜನೆಯಡಿ ಯೋಜನೆ ರೂಪಿಸಲಾಯಿತು’ ಎಂದು ಆಲಮಟ್ಟಿ ಆರ್‌ಎಫ್‌ಒ ಮಹೇಶ ಪಾಟೀಲ ಹೇಳಿದರು.

ADVERTISEMENT

ಎಲ್ಲೆಲ್ಲಿ ನಿಲ್ದಾಣ?:

ಮೊದಲ ಹಂತದಲ್ಲಿ ಆಲಮಟ್ಟಿಯ ಜವಾಹರ್‌ ನವೋದಯ ಶಾಲೆಯ ಹಿಂಭಾಗ ಹಾಗೂ ಬೀಳಗಿ ತಾಲ್ಲೂಕಿನ ಹೆರಕಲ್ ಬಳಿ ಕೃಷ್ಣಾ ನದಿ ತೀರದಲ್ಲಿ ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ. ಫೆರ್ರೀ ಬೋಟ್‌ಗಳ ನಿಲ್ದಾಣ ನಿರ್ಮಾಣ, ಫ್ಲೋಟಿಂಗ್ ಜೆಟ್ಟಿ ನಿರ್ಮಾಣ, ಕಾಂಕ್ರೀಟ್ ಜೆಟ್ಟಿ ನಿರ್ಮಾಣ, ನಿಲ್ದಾಣಗಳಲ್ಲಿ ಪಾರ್ಕಿಂಗ್, ಬೆಳಕಿನ ವ್ಯವಸ್ಥೆ, ಸರಕು ಬೋಟ್‌ಗೆ ನಾನಾ ಯಂತ್ರಗಳು ಸೇರಿದಂತೆ ಮೂಲಸೌಕರ್ಯ ಕಲ್ಪಿಸಲು ₹12.20 ಕೋಟಿ ಟೆಂಡರ್ ಕರೆಯಲಾಗಿದೆ. ಕೇಂದ್ರ ಸರ್ಕಾರದ ಅನುದಾನವನ್ನು ಕಾರವಾರದ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯು ಅನುಷ್ಠಾನಗೊಳಿಸುತ್ತಿದೆ’ ಎಂದು ಮಾಹಿತಿ ನೀಡಿದರು.

ಪಿಪಿಪಿ ಮಾದರಿಯಲ್ಲಿ ಜಲಸಾರಿಗೆ:

‘ಕರ್ನಾಟಕ ಮರಿಟೈಮ್ ಬೋರ್ಡ್ ವತಿಯಿಂದ ಆಲಮಟ್ಟಿ-ಬಾಗಲಕೋಟೆ ನಡುವೆ ಜಲ ಸಾರಿಗೆ ಆರಂಭಿಸಲು ನಿರ್ಧರಿಸಲಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ ಆಸಕ್ತ ಬೋಟಿಂಗ್ ಕಂಪನಿಗಳಿಂದ ಈಗಾಗಲೇ ಟೆಂಡರ್ ಕರೆಯಲಾಗಿದೆ. ಜ.6ರ ವರೆಗೂ ಟೆಂಡರ್‌ಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ’ ಎಂದು ಬೋರ್ಡ್‌ನ ನಿರ್ದೇಶಕ ಕ್ಯಾಪ್ಟನ್ ಸಿ. ಸ್ವಾಮಿ ಮಾಹಿತಿ ನೀಡಿದರು.

****

ಜಲಸಾರಿಗೆಯ ಉಪಯೋಗ

ಆಲಮಟ್ಟಿಯ ಹಿನ್ನೀರು, ಸುಂದರ ಪರಿಸರ ಹಾಗೂ ದೇಶ–ವಿದೇಶಿ ಪಕ್ಷಿ ಸಂಕುಲದ ತಾಣವಾಗಿದೆ. ಇಲ್ಲಿನ ಸುಂದರ ದೃಶ್ಯ, ಪಕ್ಷಿ ಸಂಕುಲ ವೀಕ್ಷಣೆಗೆ ಜಲಸಾರಿಗೆ ಅನುಕೂಲವಾಗಿದೆ. ಹಿನ್ನೀರಿನಲ್ಲಿ ಅನೇಕ ದ್ವೀಪ ಪ್ರದೇಶಗಳಿದ್ದು, ಅಲ್ಲಿ ಪ್ರವಾಸಿ ಚಟುವಟಿಕೆ ವಿಸ್ತರಿಸಲು, ಜಲಕ್ರೀಡೆಗಳ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂಬುದು ಅಧಿಕಾರಿಗಳ ಮಾಹಿತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.