ನಾಲತವಾಡ: ಇಲ್ಲಿಗೆ ಸಮೀಪದ ನಾಗಬೇನಾಳ-ವೀರೇಶನಗರ ಗ್ರಾಮದ ಹತ್ತಿರ ಹೊಲವೊಂದರಲ್ಲಿ ಗೂಡು ಕಟ್ಟಿ ಕುರಿಗಳನ್ನು ವಾಸ್ತವ್ಯಕ್ಕಾಗಿ ಬಿಟ್ಟಿದ್ದ ಕುರಿ ಮಂದೆಯ ಮೇಲೆ ಬುಧವಾರ ರಾತ್ರಿ ತೋಳಗಳು ದಾಳಿ ನಡೆಸಿದ್ದರಿಂದ 10 ಕುರಿಗಳು ಬಲಿಯಾಗಿ, 10 ಕುರಿಗಳು ಗಾಯಗೊಂಡು, 5 ಕುರಿಗಳು ನಾಪತ್ತೆಯಾಗಿವೆ.
ನಾಗಬೇನಾಳದ ಬಸವರಾಜ ಸಿದ್ದಪ್ಪ ಸುಲ್ತಾನಪುರ ಎಂಬುವರು ಕುರಿಮಂದೆಯನ್ನು ಒಂದೆಡೆ ಕಟ್ಟಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದರು. ದಾಳಿ ನಡೆದಾಗ ಅಂದಾಜು 40-50 ಸಂಖ್ಯೆಯಷ್ಟಿದ್ದ ಕುರಿಗಳು ದೊಡ್ಡಿ ಹಾರಿ ಓಡಿ ಹೋಗಲು ಹವಣಿಸಿವೆ. 9 ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದವು. ಗಾಯಗೊಂಡಿರುವ 10 ಕುರಿಗಳಿಗೆ ಪಶು ಇಲಾಖೆಯ ವೈದ್ಯರು ತಾತ್ಕಾಲಿಕ ಆರೈಕೆ ಮಾಡಿದ್ದು ಅವು ಪ್ರಾಣಾಪಾಯದಿಂದ ಪಾರಾಗಿವೆ.
ಬಸವರಾಜ ಅವರಿಗೆ ಅವರಿವರು ತಮ್ಮ ಕುರಿಗಳನ್ನು ಸಾಕಲು ಕೊಟ್ಟಿದ್ದರು. ಘಟನಾ ಸ್ಥಳಕ್ಕೆ ಶಾಸಕ ಸಿ.ಎಸ್.ನಾಡಗೌಡ, ತಹಶೀಲ್ದಾರ್ ಕೀರ್ತಿ ಚಾಲಕ್, ತಾಪಂ ಇಓ ವೆಂಕಟೇಶ ವಂದಾಲ ಇನ್ನಿತರರು ಭೇಟಿ ನೀಡಿ ಘಟನೆಗೆ ವಿಷಾದ ವ್ಯಕ್ತಪಡಿಸಿ ಸೂಕ್ತ ಪರಿಹಾರ ವ್ಯವಸ್ಥೆಯ ಭರವಸೆ ನೀಡಿದರು.
ಸ್ಥಳಕ್ಕೆ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳದ ಬಗ್ಗೆ ವ್ಯವಸ್ಥೆ ವಿರುದ್ಧ ಹರಿಹಾಯ್ದರು. ನೊಂದ ಕುರಿಗಾಹಿಗೆ ತಾತ್ಕಾಲಿಕ ಪರಿಹಾರ ವಿತರಿಸಬೇಕು, ಕುರಿಗಾಹಿಗೆ ಸರ್ಕಾರ ನಿಗದಿಪಡಿಸಿದ ಪರಿಹಾರ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು. ಸೂಕ್ತ ಪರಿಹಾರ ಸಿಗದಿದ್ದರೆ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಜಿಪಂ ಮಾಜಿ ಉಪಾಧ್ಯಕ್ಷರಾದ ಎಂ.ಎಸ್.ಪಾಟೀಲ, ಕೆ.ಆರ್.ಬಿರಾದಾರ, ಮುಖಂಡರಾದ ಗಿರೀಶಗೌಡ ಪಾಟೀಲ, ರವೀಂದ್ರ ಬಿರಾದಾರ, ಮುದಕಪ್ಪ ಗಂಗನಗೌಡರ, ಜಿ.ಮಹಾಂತಗೌಡ ಗಂಗನಗೌಡರ, ಈರಣ್ಣ ಮುದ್ನೂರ, ಸಂಗಣ್ಣ ಹಾವರಗಿ, ಭುಮಣ್ಣ ಗುರಿಕಾರ, ಸಂಗಣ್ಣ ಸುಲ್ತಾನಪೂರ, ಭೀಮಣ್ಣ ರಕ್ಕಸಗಿ, ಮಣಿಕಂಠ ಆರೇಶಂಕರ ಇನ್ನಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.