ADVERTISEMENT

World Environment Day: ಇಂಡಿ ಹಸರೀಕರಣಕ್ಕೆ ಅರಣ್ಯ ಇಲಾಖೆ ಪಣ

ರಸ್ತೆ ಬದಿ, ಶಾಲೆ, ಕಾಲೇಜು ಆವರಣದಲ್ಲಿ ಸಸಿ ನೆಟ್ಟು ಪೋಷಣೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 6:21 IST
Last Updated 5 ಜೂನ್ 2025, 6:21 IST
ಎಸ್.ಜಿ.ಸಂಗಾಲಕ
ಎಸ್.ಜಿ.ಸಂಗಾಲಕ   

ಇಂಡಿ: ತಾಲ್ಲೂಕಿನ ವಿವಿಧ ಕಡೆ ಇರುವ ಸರ್ಕಾರಿ ಜಮೀನು ಸೇರಿದಂತೆ ರಸ್ತೆ ಬದಿಯಲ್ಲಿ, ಶಾಲಾ, ಕಾಲೇಜುಗಳ ಆವರಣದಲ್ಲಿ, ಸಸಿ ನೆಡುವ ಮೂಲಕ ಹಸರೀಕರಣಗೊಳಿಸಲು ಅರಣ್ಯ ಇಲಾಖೆ ಪಣ ತೊಟ್ಟಿದೆ.

ಈಗಾಗಲೇ ತಾಲ್ಲೂಕಿನ ಸಾವಳಸಂಗ ಗ್ರಾಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ವೃಕ್ಷೊಧ್ಯಾಮದಲ್ಲಿ ಸಾವಳಸಂಗ ಗ್ರಾಮದಲ್ಲಿ 270 ಎಕರೆ ಜಮೀನಿನ ಪೈಕಿ 30 ಎಕರೆ ಪ್ರದೇಶದಲ್ಲಿ ಅರಣ್ಯಿಕರಣ ಮಾಡಲು ಅರಣ್ಯ ಇಲಾಖೆ ಕಳೆದ 6 ವರ್ಷಗಳಲ್ಲಿ 37 ಸಾವಿರ ಸಸಿ ನೆಟ್ಟಿದೆ. ಅಲ್ಲದೇ, ಅವುಗಳನ್ನು ಪೋಷಣೆ ಮಾಡಿ ಬೆಳೆಸಿದ್ದಾರೆ.

ಇಂಡಿ ಪಟ್ಟಣದ ಮಿನಿ ವಿಧಾನಸೌಧದಲ್ಲಿ, ಪಟ್ಟಣದ ಬಸವೇಶ್ವರ ವೃತ್ತದಿಂದ ಸ್ಟೇಷನ್ ರಸ್ತೆ, ಸಿಂದಗಿ ರಸ್ತೆ, ವಿಜಯಪುರ ರಸ್ತೆ ಮತ್ತು ಅಗರಖೇಡ ರಸ್ತೆಗಳ ಎರಡೂ ಬದಿಗೆ 6 ವರ್ಷಗಳ ಹಿಂದೆಯೇ ಗಿಡಗಳನ್ನು ನೆಟ್ಟು ಪೋಷಣೆ ಮಾಡಿದ ಪರಿಣಾಮ ಇಂದು ಅವು ನೆರಳನ್ನು ನೀಡುತ್ತಿವೆ. ಇವುಗಳಿಂದ ಪಟ್ಟಣದ ಸೌಂದರ್ಯ ಹೆಚ್ಚಿದೆ.

ADVERTISEMENT

ಪಟ್ಟಣದ ವಿವಿಧ ಸರ್ಕಾರಿ ಕಚೇರಿಗಳು ಮತ್ತು ಖಾಸಗಿ ಪದವಿ ಮತ್ತು ಪದವಿಪೂರ್ವ ಮಹಾವಿದ್ಯಾಲಯಗಳು, ಪ್ರೌಢಶಾಲೆಗಳ ಮೈದಾನಗಳಲ್ಲಿ ಸಸಿ ನೆಟ್ಟಿದ್ದಲ್ಲದೇ ಅವುಗಳನ್ನು ಪೋಷಣೆ ಮಾಡಲಾಗುತ್ತಿದೆ.

ಪಸಕ್ತ ವರ್ಷ ಪಟ್ಟಣ ಹೋರ್ತಿ ವಲಯ, ದೇಗಿನಾಳ, ತಾಂಬಾ, ಬೆನಕನಹಳ್ಳಿ, ಬಾಲಗಾಂವ, ಕಾತ್ರಾಳ ರಸ್ತೆ ಸೇರಿದಂತೆ ಮತ್ತಿತರ ಕಡೆ 10 ಸಾವಿರ ಸಸಿ ನೆಡುವ ಗುರಿ ಹೊಂದಲಾಗಿದೆ. ಜೂನ್ 5 ರಂದು ಈ ಬಗ್ಗೆ ಸಾರ್ವಜನಿಕರಿಗೆ ಪರಿಸರದ ಬಗ್ಗೆ ಅರಿವು ಮೂಡಿಸಲು ಸಾವಳಸಂಗ ಗ್ರಾಮದಲ್ಲಿ ಪಡನೂರ ಯಶವಂತರಾಯಗೌಡ ಪಾಟೀಲ ಫೌಂಡೇಶನ್‌ನಿಂದ  ಕಾರ್ಯಕ್ರಮ ಆಯೋಜಿಸಲಾಗಿದೆ.

ಸಸಿಗಳಿಗೆ ರಿಯಾಯತಿ ದರ: ಜೂನ್ 1 ರಿಂದ ರೈತರಿಗೆ ಸಸಿಗಳನ್ನು ರಿಯಾಯತಿ ದರದಲ್ಲಿ ವಿತರಿಸಲಾಗುತ್ತಿದೆ. ಸಾಗವಾನಿ, ಮಹಾಗನಿ, ನಿಂಬೆ, ನೇರಳೆ, ಪೇರಲ, ಮಾವು, ಪೇರು, ಕರಿಬೇವು ಸೇರಿ ನಾನಾ ಸಸಿಗಳನ್ನು ರೈತರಿಗೆ ರಿಯಾಯತಿ ದರದಲ್ಲಿ ವಿತರಿಸಲಾಗುತ್ತಿದೆ.

ಸಾಮಾಜಿಕ ಅರಣ್ಯ ಸಸ್ಯ ಪಾಲನಾ ಕ್ಷೇತ್ರ ಬಬಲಾದ ಮತ್ತು ಪ್ರಾದೇಶಿಕ ಅರಣ್ಯ ಸಸ್ಯ ಪಾಲನಾ ಜೇವೂರ ಗ್ರಾಮಗಳಲ್ಲಿ ಸಸಿಗಳನ್ನು ವಿತರಿಸಲಾಗುತ್ತಿದೆ.

ಇಂಡಿ ಪಟ್ಟಣದ ಬಸವೇಶ್ವರ ವೃತ್ತದಿಂದ ಸ್ಟೇಷನ್ ರಸ್ತೆ ಎರಡೂ ಬದಿಗೆ 6 ವರ್ಷಗಳ ಹಿಂದೆಯೇ ಗಿಡಗಳನ್ನು ನೆಟ್ಟು ಪೋಷಣೆ ಮಾಡಲಾಗಿದೆ
ಸರ್ಕಾರಿ ಜಮೀನು ಸೇರಿ ನಾನಾ ಕಡೆ ಸಾವಿರಾರು ಸಸಿ ನೆಡಲಾಗುತ್ತಿದೆ. ಸಸಿ ನೆಡಲು ಈಗಾಗಲೇ ಎಲ್ಲ ಸಿದ್ದತೆ ಮಾಡಿಕೊಂಡಿದ್ದೇವೆ. ಇಂಡಿ ತಾಲ್ಲೂಕಿನಲ್ಲಿ ಅರಣ್ಯ ಬೆಳೆಸುವ ಗುರಿ ಹೊಂದಲಾಗಿದೆ.
-ಮಂಜುನಾಥ ಧೂಳೆ ಸಾಮಾಜಿಕ ವಲಯ ಅರಣ್ಯಾಧಿಕಾರಿ ಇಂಡಿ 
ಪರಿಸರ ರಕ್ಷಣೆ ನಮ್ಮೆಲ್ಲರ ಮಹತ್ತರ ಜವಾಬ್ದಾರಿಯಾಗಿದೆ. ಹಾಗಾಗಿ ಎಲ್ಲರೂ ಹೆಚ್ಚು ಗಿಡ ಮರಗಳನ್ನು ಬೆಳೆಸುವ ಮೂಲಕ ಪರಿಸರ ಉಳಿಸಬೇಕು.
-ಎಸ್.ಜಿ.ಸಂಗಾಲಕ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಇಂಡಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.