ADVERTISEMENT

ವಿಜಯಪುರ: ಗ್ರಾಮ ವಾಸ್ತವ್ಯಕ್ಕೆ ಯಲಗೂರಿಗೆ ಬಂದ ಡಿಸಿ, ಸಿಇಒಗೆ ಭವ್ಯ ಸ್ವಾಗತ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2021, 7:56 IST
Last Updated 20 ಮಾರ್ಚ್ 2021, 7:56 IST
   

ವಿಜಯಪುರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಯಲಗೂರಿನಲ್ಲಿ ಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್, ಜಿಲ್ಲಾ ಪಂಚಾಯ್ತಿ ಸಿಇಒ ಗೋವಿಂದ ರೆಡ್ಡಿ, ತಹಶೀಲ್ದಾರ್ ಶಿವಲಿಙಗ ಪ್ರಭು ವಾಲಿ ಹಾಗೂ ಇತರೆ ಅಧಿಕಾರಿಗಳನ್ನು ಗ್ರಾಮಸ್ಥರು ಅದ್ದೂರಿ ಮೆರವಣಿಗೆಯ ಮೂಲಕ ಸ್ವಾಗತಿಸಿದರು.

ಗ್ರಾಮ ವಾಸ್ತವ್ಯದ ಹಿನ್ನೆಲೆಯಲ್ಲಿ ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣವಿದ್ದು, ಅಧಿಕಾರಿಗಳಿಗೆ ಪೇಟಾ ತೊಡಿಸಿ, ವಾದ್ಯ ಮೇಳದೊಂದಿಗೆ ಎತ್ತಿನ ಬಂಡಿಯಲ್ಲಿ ಕೂರಿಸಿಕೊಂಡು ಸ್ವಾಗತಿಸಲಾಯಿತು.

ಆರಂಭದಲ್ಲಿ ಪ್ರಮುಖ ಬಡಾವಣೆಗಳಲ್ಲಿ ಅಧಿಕಾರಿಗಳು ಕಾಲ್ನಡಿಗೆಯಲ್ಲಿ ಸುತ್ತಾಡಿ ಗ್ರಾಮದ ಸಮಸ್ಯೆಗಳನ್ನು ಪರಿಶೀಲಿಸಿದರು. ಜನರಿಂದ ಅಹವಾಲು ಆಲಿಸಿದರು.

ADVERTISEMENT

80ವರ್ಷ ವಯಸ್ಸಿನ ಗಂಗೂಬಾಯಿ ಪವಾರ ಎಂಬುವವರಿಗೆವೃದ್ಧಾಪ್ಯ ವೇತನ ವಿತರಿಸಿದರು.

ಅಂಗವಿಕಲ ಬಾಲಕ ಬಸವರಾಜನಿಗೆ ವೀಲ್ ಚೇರ್ ವಿತರಿಸಲಾಯಿತು.

ಗ್ರಾಮದಲ್ಲಿ 60 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಡಿಸಿ ಸುನೀಲ್ ಕುಮಾರ್ ಮನವಿ ಮಾಡಿದರು.

ಜಿಲ್ಲಾ ಪಂಚಾಯ್ತಿ ಸಿಇಒ ಗೋವಿಂದ ರೆಡ್ಡಿ ಮಾತನಾಡಿ, ಜಲಜೀವನ ಮಷಿನ್ ಯೋಜನೆ ಅಡಿ ಯಲಗೂರು, ಬೂದಿಹಾಳ ಮತ್ತು ಕಾಸಿನಕುಂಟೆ ಗ್ರಾಮದ ಪ್ರತಿ ಮನೆಗೆ ನಳ ಸಂಪರ್ಕ ಕಲ್ಪಿಸುವ ಮೂಲಕ ಇನ್ನೊಂದು ವರ್ಷದೊಳಗೆ ಶಾಶ್ವತ ಕುಡಿಯುವ ನೀರು ಒದಗಿಸಲಾಗುವುದು ಎಂದರು.

ಸಾರ್ವಜನಿಕರಿಗೆ ಸಾಮೂಹಿಕ ಶೌಚಾಲಯ, ಸ್ಮಶಾನ ನಿರ್ಮಾಣ ಮಾಡಿಕೊಡಬೇಕು. ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.