
ವಿಜಯಪುರ: ನಗರದ ಯಶೋದಾ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಕಳೆದ ಮೂರು ವರ್ಷದಲ್ಲಿ 28 ರೋಗಿಗಳಿಗೆ ಕಿಡ್ನಿ ಕಸಿ (ಟ್ರಾನ್ಸ್‌ಪ್ಲಾಂಟ್) ಯಶಸ್ವಿಯಾಗಿ ಮಾಡಲಾಗಿದೆ ಎಂದು ಕೇಂದ್ರದ ಚೇರ್ಮನ್ ಡಾ.ರವೀಂದ್ರ ಮದ್ರಕಿ ತಿಳಿಸಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯಶೋದಾ ಆಸ್ಪತ್ರೆಯಿಂದ ಕಿಡ್ನಿ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸಾ ವಿಧಾನದ ಮೂಲಕ ಉತ್ತಮ ಸೇವೆ ಸಲ್ಲಿಸುತ್ತಿದ್ದೇವೆ. ಕಿಡ್ನಿ ತೊಂದರೆಗಳ ಬಗ್ಗೆ ಜನರಿಗೆ ಹೆಚ್ಚು ಜಾಗೃತಿ ಮೂಡಿಸುತ್ತಿದ್ದೇವೆ’ ಎಂದರು.
‘ಜಿಲ್ಲೆಯಲ್ಲಿ ಬಿಸಿಲು ಹೆಚ್ಚಿರುವುದರಿಂದ ಹಾಗೂ ಮಧುಮೇಹ, ರಕ್ತದೊತ್ತಡ ಪ್ರಕರಣಗಳು ಹೆಚ್ಚಿರುವುದರಿಂದ ಕಿಡ್ನಿಯಲ್ಲಿ ಕಲ್ಲಾಗುವುದು, ತೊಂದರೆಯಾಗುವುದು ಹೆಚ್ಚು. ಈ ಬಗ್ಗೆ ಜನರಲ್ಲಿ ಜಾಗೃತಿ ಅಗತ್ಯ. ಮುನ್ನೆಚ್ಚರಿಕೆ ಕ್ರಮಕೈಗೊಂಡರೆ ಡಯಾಲಿಸಿಸ್ ಹಂತಕ್ಕೆ ಹೋಗುವುದನ್ನು ತಡೆಯಬಹುದಾಗಿದೆ’ ಎಂದರು.
‘ಪ್ರತಿ ವರ್ಷ ನಮ್ಮ ದೇಶದಲ್ಲಿ 2.5 ಲಕ್ಷ ಜನ ಡಯಾಲಿಸಿಸ್‌ಗೆ ಹಂತಕ್ಕೆ ಹೋಗುತ್ತಿದ್ದಾರೆ. ಇದರಲ್ಲಿ 13 ರಿಂದ 15 ಸಾವಿರ ಜನರಿಗೆ ಮಾತ್ರ ಕಿಡ್ನಿ ಕಸಿ ಮಾಡಲಾಗುತ್ತಿದೆ. ಉಳಿದವರಿಗೆ ಕಿಮೋ ಡಯಾಲಿಸಿಸ್ ಮಾಡಲಾಗುತ್ತಿದೆ. ಅರ್ಧದಷ್ಟು ಜನ ಡಯಾಲಿಸಿಸ್ ಪಡೆಯದೇ ಒಂದೆರಡು ವರ್ಷಗಳಲ್ಲಿ ಜೀವ ಕಳೆದುಕೊಳ್ಳುತ್ತಿದ್ದಾರೆ’ ಎಂದರು.
‘ಕಿಡ್ನಿ ಕಸಿಗೆ ದಾನಿಗಳ ಕೊರತೆ ಇದೆ. ಎರಡನೆಯದು ಚಿಕಿತ್ಸೆಗೆ ಹಣಕಾಸು ಸಮಸ್ಯೆ. ಹೀಗಾಗಿ ಕಿಡ್ನಿ ದಾನಕ್ಕೆ ಜನರು ಮುಂದೆ ಬರಬೇಕು’ ಎಂದರು.
‘ಕಿಡ್ನಿ ಕಸಿ ಮಾಡಲು ಈ ಮೊದಲು ರಕ್ತ ಹೊಂದಾಣಿಕೆ ಕಡ್ಡಾಯವಾಗಿತ್ತು. ಇಲ್ಲವಾದರೆ ಕಿಡ್ನಿ ಕಸಿ ಮಾಡಲು ಆಗುತ್ತಿರಲಿಲ್ಲ. ಸದ್ಯ ವೈಜ್ಞಾನಿಕ ವಿಧಾನಗಳು ಬಂದಿರುವುದರಿಂದ ಕಿಡ್ನಿ ಕಸಿ ಮಾಡಲು ಸಾಧ್ಯವಾಗಿದೆ’ ಎಂದರು.
‘ಕಿಡ್ನಿ ಸಮಸ್ಯೆ ತೀವ್ರವಾದರೆ ವೈದ್ಯಕೀಯ ವೆಚ್ಚವೂ ಹೆಚ್ಚಾಗುತ್ತದೆ. ಸರ್ಕಾರವು ಸಾಕಷ್ಟು ಸೌಲಭ್ಯವನ್ನು ಒದಗಿಸಿದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಹೇಳಿದರು.
ದಾನಿಗಳಿಗೆ ಸನ್ಮಾನ:
ಯಾದಗಿರಿ ಜಿಲ್ಲೆಯ ಕಕ್ಕಳಮೇಲಿಯ ನೀಲಮ್ಮ ಯಾಳಗಿ, ಸುರಪುರ ತಾಲ್ಲೂಕಿನ ಶಾಂತರಾಬಾಯಿ ಮೇಲಿನಮನಿ ಅವರು ತಮ್ಮ ಸೊಸೆಯಂದಿಯರಿಗೆ ಹಾಗೂ ಸಿಂದಗಿ ತಾಲ್ಲೂಕಿನ ಗುಂದಗಿಯ ಲಲಿತಾಬಾಯಿ ತನ್ನ ಮಗನಿಗೆ ಕಿಡ್ನಿಯನ್ನು ದಾನ ಮಾಡಿದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಸನ್ಮಾನಿಸಲಾಯಿತು.
ಯಶೋದಾ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ಸಹ ಅಧ್ಯಕ್ಷೆ ಡಾ.ಕಮಲಾ ಮದ್ರಕಿ, ನೆಫ್ರೋಲೊಜಿಸ್ಟ್ ಡಾ.ರಾಕೇಶ ಪಾಟೀಲ್, ಡಾ.ಸುನೀಲ್ ಕುಮಾರ್ ಸಜ್ಜನ, ಡಾ.ರವೀಂದ್ರ ತೋಟದ ಇದ್ದರು.
Highlights - null
Quote - ಯಶೋದಾ ಆಸ್ಪತ್ರೆಯು ಮುಖ್ಯಮಂತ್ರಿ ಪರಿಹಾರ ನಿಧಿ ಪ್ರಧಾನಮಂತ್ರಿ ಮೆಡಿಕಲ್ ರಿಲೀಫ್ ಫಂಡ್ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತ ಕಿಡ್ನಿ ಕಸಿ ಸೌಲಭ್ಯ ಇದ್ದು ಸದುಪಯೋಗ ಪಡೆದುಕೊಳ್ಳಬೇಕು – ಡಾ.ರವೀಂದ್ರ ಮದ್ರಕಿ ಯಶೋದಾ ಆಸ್ಪತ್ರೆ ವಿಜಯಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.