ವಿಜಯಪುರ: ‘ಶಾಸಕ ಯಶವಂತರಾಯಗೌಡ ಪಾಟೀಲ್ ಅವರಿಗೆ ಸರ್ಕಾರದಿಂದ ಹಣ ತಂದು ಕ್ಷೇತ್ರದ ಅಭಿವೃದ್ಧಿ ಮಾಡುವುದು ಹೇಗೆ ಎನ್ನುವುದರಲ್ಲಿ ಬಹಳ ಪ್ರಾಮಾಣಿಕರು ಮತ್ತು ಚಾಣಾಕ್ಷರು, ಅವರನ್ನು ಕಂಡರೆ ನನಗೆ ಪ್ರೀತಿ ಹೆಚ್ಚು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಗಳಿದರು.
ಇಂಡಿಯಲ್ಲಿ ಸೋಮವಾರ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ವಿಜಯಪುರ ಜಿಲ್ಲೆ ಬಹುತೇಕ ನೀರಾವರಿ ಆಗಿದೆ. ಇದಕ್ಕೆ ಸಚಿವರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ, ಯಶವಂತ ರಾಯಗೌಡ ಪಾಟೀಲ, ವಿಠಲ ಕಟಕದೊಂಡ ಕಾರಣ’ ಎಂದು ಶ್ಲಾಘಿಸಿದರು.
‘ವಿಜಯಪುರ ಜಿಲ್ಲೆಗೆ ಸಂಬಂಧಿಸಿದ ಎಲ್ಲ ನೀರಾವರಿ ಯೋಜನೆಯನ್ನು ಮುಂದುವರಿಸಿ, ಪೂರ್ಣಗೊಳಿಸಿ, ಹಸಿರು ವಿಜಯಪುರ ಮಾಡುತ್ತೇವೆ’ ಎಂದು ಭರವಸೆ ನೀಡಿದರು.
‘ಇಂಡಿಯಲ್ಲಿ ₹4557 ಕೋಟಿ ಮೊತ್ತದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಇನ್ನೂ ಹೆಚ್ಚಿನ ಪ್ರಚಾರ ಮಾಡಿ, ಪತ್ರಿಕೆಗಳಿಗೆ ಜಾಹೀರಾತು ನೀಡಿ’ ಎಂದು ಯಶವಂತ ರಾಯಗೌಡ ಪಾಟೀಲರಿಗೆ ಸಲಹೆ ನೀಡಿದರು.
‘ಇಂಡಿಯಲ್ಲಿ ಲಿಂಬೆ ಅಭಿವೃದ್ಧಿ ಮಂಡಳಿ ಸ್ಥಾಪಿಸಿ, ಪ್ರೋತ್ಸಾಹ ನೀಡುತ್ತಿರುವುದು ನಮ್ಮ ಸರ್ಕಾರ’ ಎಂದು ಹೇಳಿದರು.
‘ಇಂಡಿ ಅತೀ ಹಿಂದುಳಿದ ತಾಲ್ಲೂಕು ಎಂದು ನಂಜುಂಡಪ್ಪ ವರದಿಯಲ್ಲಿ ಉಲ್ಲೇಖವಾಗಿತ್ತು. ಆದರೆ, ಈಗ ಇಂಡಿ ಹಿಂದುಳಿದ ತಾಲ್ಲೂಕುಗಳ ಪಟ್ಟಿಯಲ್ಲಿ ಬರಲು ಸಾಧ್ಯವಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.