
ವಿಜಯಪುರ: ‘ರಾಜಕೀಯದಲ್ಲಿ ಯಾರೂ ಶಾಶ್ವತ ಶತೃಗಳಲ್ಲ; ಯಾರೂ ಮಿತ್ರರಲ್ಲ’ ಎಂಬ ಮಾತಿದೆ. ಆದರೆ, ಎರಡು ದಿನಗಳ ಹಿಂದೆ ವಿಜಯಪುರ ನಗರದ ದರ್ಬಾರ್ ಮೈದಾನದಲ್ಲಿ ನಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ವೇದಿಕೆಯಲ್ಲಿ ಹೆಚ್ಚಿನ ಆದ್ಯತೆ ನೀಡಿರುವುದಕ್ಕೆ ಕಾರಣವೇನು ಎಂಬುದರ ಕುರಿತು ಗುಮ್ಮಟನಗರದಲ್ಲಿ ‘ಪಿಸುಮಾತು’ಗಳು ಕೇಳಿಬರತೊಡಗಿವೆ.
ತಮ್ಮದೇ ಪಕ್ಷದ ಘಟಾನುಘಟಿ ಸಚಿವರು, ಶಾಸಕರು ವೇದಿಕೆಯಲ್ಲೇ ಇದ್ದರೂ ಅವರಿಗೆ ಸಿಗದ ಆದ್ಯತೆಯನ್ನು ಮುಖ್ಯಮಂತ್ರಿಯವರು ಬಿಜೆಪಿಯ ಉಚ್ಛಾಟಿತ ಶಾಸಕ ಯತ್ನಾಳ ಅವರಿಗೆ ನೀಡಲು ಕಾರಣವೇನು? ವೇದಿಕೆ ಮೇಲೆ ತಮ್ಮ ಬಳಿ ಯತ್ನಾಳ ಅವರನ್ನು ಕರೆದು ಚರ್ಚಿಸಿದ್ದೇನು? ಸನ್ಮಾನದ ವೇಳೆ ಯತ್ನಾಳ ಅವರನ್ನು ಕರೆದು ಪಕ್ಕದಲ್ಲಿ ನಿಲ್ಲಿಸಿಕೊಂಡಿದ್ದು ಏಕೆ? 115 ದಿನಗಳಿಂದ ವಿಜಯಪುರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜಿಗಾಗಿ ಜನರು ಪ್ರತಿಭಟನೆ ನಡೆಸಿದರೂ ಹಣವಿಲ್ಲ ಎಂದು ಹೇಳುತ್ತಿದ್ದ ಮುಖ್ಯಮಂತ್ರಿಗಳು ಏಕಾಏಕಿ ಯತ್ನಾಳ ಅವರು ಹೇಳಿದ ನಗರದ ಕೆಲಸಗಳಿಗೆ ಆ ಕ್ಷಣವೇ ಅಸ್ತು ಎಂದಿದ್ದೇಕೆ? ಉದ್ದೇಶ ಪೂರ್ವಕವಾಗಿಯೇ ಯತ್ನಾಳ ಅವರಿಗೆ ಆದ್ಯತೆ ನೀಡಿದರೇ? ಮುಂಬರುವ ಚುನಾವಣೆಯಲ್ಲಿ ಯತ್ನಾಳ ಅವರನ್ನು ಬಿಜೆಪಿ ವಿರುದ್ಧ ಬ್ರಹ್ಮಾಸ್ತ್ರವಾಗಿ ಬಳಸಲು ಸಿದ್ಧತೆ ನಡೆದಿದೆಯೇ? ಯತ್ನಾಳ ಅವರ ಮೂಲಕ ಬಲಿಷ್ಠ ಲಿಂಗಾಯತ ಪಂಚಮಸಾಲಿ ಸಮಾಜದ ವೋಟುಗಳ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದೆಯೇ? ಯತ್ನಾಳ ಅವರಿಗೆ ಹೊಸ ಪಕ್ಷ ಕಟ್ಟಲು ಉತ್ತೇಜನ ನೀಡಿ ಅವರ ಮೂಲಕ ಬಿಜೆಪಿಯನ್ನು ಅಧಿಕಾರಕ್ಕೆ ಬರದಂತೆ ಕಟ್ಟಿಹಾಕಲು ಕೈ ಕಾರ್ಯತಂತ್ರ ಹೆಣೆದಿದೆಯೇ? ಅಥವಾ ಯತ್ನಾಳ ಅವರ ‘ರಾಜಕೀಯ ಋಣ’ ತೀರಿಸಲು ಮುಖ್ಯಮಂತ್ರಿ ಮತ್ತು ಅವರ ಸಚಿವರು ‘ಪಿಪಿಪಿ ಗಿಫ್ಟ್’ ಕೊಡಲಾಗದಿರುವುದಕ್ಕೆ ‘ಫ್ಲೈ ಓವರ್ ಬಿಡ್ಜ್’ ಕೊಟ್ಟರೇ ಎಂಬ ಹತ್ತಾರು ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ.
ಸಿದ್ದರಾಮಯ್ಯ ಅವರು ಯತ್ನಾಳ ಅವರೊಂದಿಗೆ ಅಷ್ಟೊಂದು ಸಲುಗೆ, ಪ್ರೀತಿ ಇಟ್ಟುಕೊಂಡಿರುವುದು ಏಕೆ? ಇದುವರೆಗೂ ಒಳಗೊಳಗೆ ಇದ್ದ ಇಬ್ಬರ ನಡುವಿನ ಮುದ್ದಿನ ಸ್ನೇಹ–ಸಂಬಂಧ ವಿಜಯಪುರದಲ್ಲಿ ಬಹಿರಂಗವಾಗಿಯೇ ವ್ಯಕ್ತವಾಗಿದ್ದೇಕೆ?ಇದರ ಮರ್ಮವೇನು ಎಂಬುದು ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.
‘ಪಂಚಮಸಾಲಿ ಸಮಾಜದ ಹಾಗೂ ಉತ್ತರ ಕರ್ನಾಟಕದ ಬಲಿಷ್ಠ ನಾಯಕ ಯತ್ನಾಳ ಅವರನ್ನು ಕಾಂಗ್ರೆಸ್ ಪಕ್ಷ ಸೆಳೆಯಲು ಮನವೊಲಿಕೆ ನಡೆದಿದೆಯೇ’ ಎಂದು ಊಹಿಸಲು, ನಂಬಲು ಸಾಧ್ಯವಿಲ್ಲದ ಮಾತುಗಳನ್ನು ಇನ್ನೂ ಕೆಲವರು ತೇಲಿ ಬಿಟ್ಟಿದ್ದಾರೆ. ಆದರೆ, ಯತ್ನಾಳ ಮತ್ತು ಕಾಂಗ್ರೆಸ್ ವಿಚಾರಧಾರೆಗಳು ವಿಭಿನ್ನ ಇರುವುದರಿಂದ ಹೊಂದಾಣಿಕೆ ಕಷ್ಟ ಎನ್ನಲಾಗುತ್ತಿದೆ.
ಸಿದ್ಧರಾಮಯ್ಯ ಮತ್ತು ಯತ್ನಾಳ ಅವರ ರಾಜಕೀಯ ಮೀರಿದ ವೈಯಕ್ತಿಕ ಸ್ನೇಹ– ಸೌಹಾರ್ದ ನಡಾವಳಿಕೆ ಅವರ ಹಿಂಬಾಲಕರಿಗೆ ಅರ್ಥವಾಗದೇ ಪೇಚಿಗೆ ಸಿಲುಕಿದ್ದಾರೆ. ‘ಧೃತದಾಷ್ಟ್ರ ಆಲಿಂಗನ’ದಿಂದ ಪಕ್ಷಕ್ಕೆ ಆಗುವ ಲಾಭ–ನಷ್ಠದ ಲೆಕ್ಕಾಚಾರದಲ್ಲಿ ಅನೇಕರು ತೊಡಗಿದ್ದಾರೆ.
ಆದರೆ, ಬಸನಗೌಡ ಪಾಟೀಲ ಅವರು ವಿಜಯಪುರ ನಗರ ಕ್ಷೇತ್ರದ ಶಾಸಕರಾಗಿರುವುದರಿಂದ ಸರ್ಕಾರದ ಶಿಷ್ಟಾಚಾರದ ಪ್ರಕಾರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹೀಗಾಗಿ ಮುಖ್ಯಮಂತ್ರಿಯವರು ಆದ್ಯತೆ ನೀಡಿದ್ದಾರೆ. ಇದರಲ್ಲೇನು ವಿಶೇಷ ಇಲ್ಲ ಎಂದು ಕೆಲವರು ಸಮರ್ಥಿಸಿಕೊಂಡಿದ್ದಾರೆ.
ನಾನು ಸಿದ್ದರಾಮಯ್ಯ ಏಜೆಂಟ್ ಎಂದು ಕೆಲವರು ಟೀಕಿಸುತ್ತಾರೆ. ಆದರೆ ನಾನು ಸಿದ್ದರಾಮಯ್ಯ ಏಜೆಂಟ್ ಅಲ್ಲ ಅವರು ಒಳ್ಳೆಯ ಕೆಲಸ ಮಾಡಿದಾಗ ಅಭಿನಂದಿಸುತ್ತೇನೆ. ಅಭಿನಂದಿಸಲು ನಾನು ಯಾರಿಗೂ ಅಂಜುವುದಿಲ್ಲ.ಬಸನಗೌಡ ಪಾಟೀಲ ಯತ್ನಾಳ ಶಾಸಕ ವಿಜಯಪುರ
ವಿಜಯಪುರ ನಗರ ಬಸನಗೌಡ ಪಾಟೀಲ ಯತ್ನಾಳ ಅವರ ಕ್ಷೇತ್ರ ಅವರ ಅಭಿಮಾನಿಗಳು ಹೆಚ್ಚಿದ್ದಾರೆ. ಯತ್ನಾಳ ಅಭಿಮಾನಿಗಳು ನಮ್ಮ ಅಭಿಮಾನಿಗಳು ಕೂಡಸಿದ್ದರಾಮಯ್ಯ ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.