ADVERTISEMENT

ಯಡಿಯೂರಪ್ಬ ಬಹಳ ದಿನ ಸಿಎಂ ಆಗಿರಲ್ಲ: ಯತ್ನಾಳ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2020, 10:43 IST
Last Updated 20 ಅಕ್ಟೋಬರ್ 2020, 10:43 IST
ಬಸನಗೌಡ ಪಾಟೀಲ ಯತ್ನಾಳ
ಬಸನಗೌಡ ಪಾಟೀಲ ಯತ್ನಾಳ   

ವಿಜಯಪುರ: ಯಡಿಯೂರಪ್ಪ ಅವರು ಮ್ಯಾಗಿನವರಿಗೂ (ಹೈಕಮಾಂಡ್) ಸಾಕಾಗಿದ್ದಾರೆ. ಇನ್ನೇನು ಬಹಳ ದಿನ ಅವರು ಮುಖ್ಯಮಂತ್ರಿ ಆಗಿರುವುದಿಲ್ಲ. ಉತ್ತರ ಕರ್ನಾಟಕದವರನ್ನು ಮುಖ್ಯಮಂತ್ರಿ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ನೀಡಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ, ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಎಲ್ಲ ಅನುದಾನವನ್ನು ಶಿವಮೊಗ್ಗಕ್ಕೆ ಕೊಂಡೊಯ್ಯುತ್ತಿದ್ದಾರೆ‘ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಹರಿಹಾಯ್ದರು.

‘ವಿಜಯಪುರ ನಗರದ ಅಭಿವೃದ್ಧಿಗೆ ಬಂದಿದ್ದ ₹125 ಕೋಟಿ ಅನುದಾನ ಕಡಿತ ಮಾಡಿದ್ದಕ್ಕೆ ಅವರಿಗೂ, ನನಗೂ ಜಗಳವಾಗಿದೆ. ಬಿಜೆಪಿ ಬೆಂಬಲಿಸಿದ ಉತ್ತರ ಕರ್ನಾಟಕದವರಿಂದಲೇ ಮುಖ್ಯಮಂತ್ರಿ ಆಗುತ್ತಿದ್ದರೂ, ಅದನ್ನು ಮರೆತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ADVERTISEMENT

‘ರಾಜ್ಯದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಮಾತ್ರ ಬಿಜೆಪಿ ಪ್ರಬಲವಾಗಿದ್ದು, ನೂರಕ್ಕೂ ಹೆಚ್ಚು ಶಾಸಕರು ಇಲ್ಲಿಂದ ಆಯ್ಕೆಯಾದರೂ 10-15 ಶಾಸಕರು ಆಯ್ಕೆಯಾಗುವ ದಕ್ಷಿಣ ಕರ್ನಾಟಕದವರು ಮುಖ್ಯಮಂತ್ರಿ ಆಗುತ್ತಾರೆ. ಮಂಡ್ಯ, ಚಾಮರಾಜನಗರ, ಕೋಲಾರ ಭಾಗದಲ್ಲಿ ಬಿಜೆಪಿಯವರಿಗೆ ಯಾರು ಮತ ಹಾಕುತ್ತಾರೆ. ಹೀಗಾಗಿ ಹೈಕಮಾಂಡಗೂ ಇದು ಗೊತ್ತಾಗಿದೆ. ಬಿಜೆಪಿ ಬೆಂಬಲಿಸುವ ಈ ಭಾಗದ ಜನರ ಆಶಯ ಈಡೇರಿಸಲು ಪ್ರಧಾನಿ ಅವರು ಮುಖ್ಯಮಂತ್ರಿ ಸ್ಥಾನ ನೀಡುವ ಭರವಸೆ ನೀಡಿದ್ದಾರೆ’ ಎಂದರು.

‘ನನ್ನ ಕ್ಷೇತ್ರಕ್ಕೆ ನೀಡಿದ ಅನುದಾನ ಹಿಂಪಡೆದ ಕಾರಣ ನಗರದಲ್ಲಿ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಸದ್ಯ ಉತ್ತರ ಕರ್ನಾಟಕವರು ದಕ್ಷಿಣ ಕರ್ನಾಟಕದವರ ಮನೆ ಬಾಗಿಲು ಕಾಯುವ ಸ್ಥಿತಿ ಇದೆ. ಆದರೆ, ನಾನೇನು ಅಂಜುವುದಿಲ್ಲ, ಬೆಂಗಳೂರಿನವರೇ ನನ್ನ ಮನೆ ಬಾಗಿಲಿಗೆ ಬಂದು ನಿಲ್ಲುವಂತೆ ಮಾಡುತ್ತೇನೆ. ಅನುದಾನ ತಂದೇ ತರುತ್ತೇನೆ, ನಗರವನ್ನು ಅಭಿವೃದ್ಧಿ ಮಾಡಿಯೇ ತೀರುತ್ತೇನೆ, ಕಾದು ನೋಡಿ’ ಎಂದು ಸವಾಲು ಎಸೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.