ADVERTISEMENT

ವರಿಷ್ಠರು ಕೊಟ್ಟ ಮಾತು ಉಳಿಸಿಕೊಳ್ಳುವ ವಿಶ್ವಾಸ: ಶಾಸಕ ಯಶವಂತರಾಯಗೌಡ ಪಾಟೀಲ

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 3:53 IST
Last Updated 23 ಜುಲೈ 2025, 3:53 IST
ಯಶವಂತರಾಯಗೌಡ ಪಾಟೀಲ
ಯಶವಂತರಾಯಗೌಡ ಪಾಟೀಲ   

ವಿಜಯಪುರ: ‘ನಾನು ಪಕ್ಷದ ಶಿಸ್ತಿನ ಸಿಪಾಯಿ, ಚುನಾವಣೆ ಪೂರ್ವದಲ್ಲಿ ಪಕ್ಷದ ವರಿಷ್ಠರು ನನಗೆ ಕೊಟ್ಟಿರುವ ಮಾತು‌ ಉಳಿಸಿಕೊಳ್ಳುತ್ತಾರೆ ಎಂಬ ವಿಶ್ವಾಸ ಇದೆ. ಒಂದು ವೇಳೆ ಕೊಟ್ಟ ಮಾತು ನೆರವೇರದಿದ್ದರೂ ಬೇಸರವಿಲ್ಲ' ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

‘ಸಚಿವ ಸಂಪುಟ ವಿಸ್ತರಣೆ ವೇಳೆ ತಮಗೆ ಅವಕಾಶ ಸಿಗುವುದೇ’ ಎಂಬ ಪತ್ರಕರ್ತರ ಪ್ರಶ್ನೆಗೆ ಶಾಸಕರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾರ್ಮಿಕವಾಗಿ ಉತ್ತರಿಸಿದರು.

ವಿಶ್ವಾಸ ವೃದ್ಧಿ:

ADVERTISEMENT

‘ಇಂಡಿ ವಿಧಾನಸಭಾ ಕ್ಷೇತ್ರದಲ್ಲಿ ₹4559 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಕಾರ್ಯಕ್ರಮ ಯಶಸ್ವಿ ಆಗಿರುವುದಕ್ಕೆ ಕ್ಷೇತ್ರದ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ. ರಾಜ್ಯ ಸರ್ಕಾರದ ಮೇಲೆ, ನಾಯಕರ ಮೇಲೆ ಹಾಗೂ ನನ್ನ ಮೇಲೆ ವಿಶ್ವಾಸ ಇಟ್ಟು ಅಪಾರ ಸಂಖ್ಯೆಯಲ್ಲಿ ಜನ ಸೇರುವ ಮೂಲಕ    ಐತಿಹಾಸಿಕ ಕಾರ್ಯಕ್ರಮ ಆಯಿತು’ ಎಂದರು. 

‘ಇಂಡಿ ಭಾಗದ ಜನರ ದಶಕಗಳ ಕನಸು ನನಸಾಗುತ್ತಿರುವುದಕ್ಕೆ ಜನ ಸಾಕ್ಷಿಯಾಗಿದರು, ಇಷ್ಟು ದೊಡ್ಡ ಪ್ರಮಾಣದ ಅನುದಾನ ನಮ್ಮ ಭಾಗಕ್ಕೆ ಈ ಹಿಂದೆ ಎಂದೂ ಬಂದಿರಲಿಲ್ಲ, ನಿಂಬೆ ನಾಡಿಗೆ ಮೆರಗು ತಂದ ಕಾರ್ಯಕ್ರಮ ಇದಾಗಿತ್ತು, ಇದರಿಂದ ನನ್ನ ಆತ್ಮ ವಿಶ್ವಾಸವೂ ವೃದ್ಧಿಯಾಗಿದೆ’ ಎಂದರು. 

‘ಮುಂಬೈ ಕರ್ನಾಟಕ ಅಭಿವೃದ್ಧಿ ಮಂಡಳಿ ರಚನೆಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ. ವಿಜಯಪುರದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಘೋಷಣೆಗೆ ಮನವಿ ಮಾಡಿದ್ದೇನೆ. ಆಗುವ ವಿಶ್ವಾಸ ಇದೆ’ ಎಂದರು.

‘ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಟೀಕೆ ಮಾಡುವವರು, ಗ್ಯಾರಂಟಿ ಯೋಜನೆಗಳನ್ನು ಟೀಕಿಸುವವರಿಗೆ ಇಂಡಿ ಕಾರ್ಯಕ್ರಮ ಉತ್ತರದಂತಿತ್ತು’ ಎಂದು ಹೇಳಿದರು.

‘ಇಂಡಿ ಕಾರ್ಯಕ್ರಮ ಶಾಸಕರ ಶಕ್ತಿ ಪ್ರದರ್ಶನದಂತೆ ಇತ್ತು’ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ದಶಕದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಕ್ಷೇತ್ರದ ಜನರು ತಮ್ಮ ಕ್ಷೇತ್ರ ಅಭಿವೃದ್ಧಿ ಆಗುತ್ತಿರುವುದಕ್ಕೆ ಹಾಗೂ ನೀರಾವರಿ, ಮೂಲಸೌಕರ್ಯಗಳ ಅನುಕೂಲ ಆಗುತ್ತಿರುವುದನ್ನು ಕಂಡು ಸೇರಿದ್ದರೇ ಹೊರತು, ಯಾವುದೇ ಶಕ್ತಿ ಪ್ರದರ್ಶನ ಆಗಿರಲಿಲ್ಲ’ ಎಂದರು.

Quote - ರಾಜ್ಯದಲ್ಲಿ ಅಭಿವೃದ್ಧಿ ವೇಗ ಹೆಚ್ಚಾಗಿದೆ.‌ ಜನಪರ ಆಡಳಿತ ನೀಡುತ್ತಿದೆ. ಜನರಿಗೆ ಸರ್ಕಾರದ ಮೇಲೆ ವಿಶ್ವಾಸ ಹೆಚ್ಚಾಗಿದೆ. ಇನ್ನು ಮೂರು ವರ್ಷಗಳ ಆಡಳಿತಾವಧಿಯಲ್ಲಿ ಇನ್ನಷ್ಟು ಜನಪರ ಆಡಳಿತವನ್ನು ಸರ್ಕಾರ ನೀಡಲಿದೆ ಯಶವಂತರಾಯಗೌಡ ಪಾಟೀಲ ಶಾಸಕ ಇಂಡಿ

ಲಿಂಬೆಗೆ ಸರ್ಕಾರದ ಆದ್ಯತೆ

‘ಇಂಡಿ ಲಿಂಬೆಗೆ ದರ ಕುಸಿತ ಸಂದರ್ಭದಲ್ಲಿ ಸರ್ಕಾರ ಬೆಂಬಲ ಬೆಲೆ ಒದಗಿಸಬೇಕು’ ಎಂಬ ರೈತರ ಬೇಡಿಕೆಗೆ ಪ್ರತಿಕ್ರಿಯಿಸಿದ ಶಾಸಕ ಯಶವಂತರಾಯಗೌಡ ಪಾಟೀಲ ‘ಲಿಂಬೆ ಅಭಿವೃದ್ಧಿ ಮಂಡಳಿಯು ಮಾರುಕಟ್ಟೆ ನಿಯಂತ್ರಣ ಮಂಡಳಿ ಅಲ್ಲ ಲಿಂಬೆ ಬೆಳೆ ಮೇಲೆ ಆವಿಷ್ಕಾರ ವಿಸ್ತರಣೆಗೆ ಆದ್ಯತೆ ನೀಡುವ ಮಂಡಳಿಯಾಗಿದೆ. ಆದರೂ ಮುಂಬರುವ ದಿನಗಳಲ್ಲಿ ಆ ಬಗ್ಗೆ ಸರ್ಕಾರ ಗಮನ ಕೊಡಲಿದೆ’ ಎಂದು ಹೇಳಿದರು.

‘ಲಿಂಬೆ ಮಾತ್ರವಲ್ಲ ಯಾವುದೇ ಬೆಳೆಗೆ ವರ್ಷ ಪೂರ್ತಿ ಸ್ಥಿರವಾದ ದರ ಸಿಗುವುದಿಲ್ಲ. ಆದರೆ ದರ ಸ್ಥಿರತೆ ಉಳಿಸಲು ಸರ್ಕಾರ ಆದ್ಯತೆ ನೀಡಲಿದೆ’ ಎಂದರು. ಆಲಮಟ್ಟಿ ಅಣೆಕಟ್ಟೆ 524 ಮೀಟರ್ ಎತ್ತರ ಆಗಲೇಬೇಕು ಜಿಲ್ಲೆಯ ಜನ ಯೋಜನೆಯಿಂದ ಬಹಳ ನೊಂದಿದ್ದಾರೆ ಸಂತ್ರಸ್ತರಾಗಿದ್ದಾರೆ ತ್ಯಾಗ ಮಾಡಿದ್ದಾರೆ ಅವರಿಗೆ ಅನುಕೂಲ ಆಗಬೇಕಿದೆ. ಅಣೆಕಟ್ಟೆ ಎತ್ತರ ಹೆಚ್ಚಳದಿಂದ 83 ಟಿಎಂಸಿ ಅಡಿ ನೀರು ವಿಜಯಪುರ ಜಿಲ್ಲೆಯೊಂದಕ್ಕೆ ಲಭಿಸಲಿದೆ ಕೇಂದ್ರ ಸರ್ಕಾರ ಆದಷ್ಟು ಬೇಗ ಗೆಜೆಟ್ ನೋಟಿಫಿಕೇಶನ್ ಹೊರಡಿಸಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.