ADVERTISEMENT

ಯುವಜನರು ಗುರಿ ಕಡೆಗೆ ಗಮನ ಹರಿಸಿ: ರಕ್ಷಿತಾ ರಾಜು

ವಾರ್ಷಿಕ ಕ್ರೀಡಾಕೂಟದ ಸಮಾರೋಪಳ ಅಂತರರಾಷ್ಟ್ರೀಯ ಪ್ಯಾರಾ ಅಥ್ಲೀಟ್ ರಕ್ಷಿತಾ ರಾಜು ಸಲಹೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 2:32 IST
Last Updated 4 ಫೆಬ್ರುವರಿ 2026, 2:32 IST
ತಿಕೋಟಾದಲ್ಲಿ ನಡೆದ ಬಿ.ಎಲ್.ಡಿ.ಇ ಸಂಸ್ಥೆಯ 11ನೇ ಅಂತರಶಾಲೆ ಮತ್ತು ಕಾಲೇಜುಗಳ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು
ತಿಕೋಟಾದಲ್ಲಿ ನಡೆದ ಬಿ.ಎಲ್.ಡಿ.ಇ ಸಂಸ್ಥೆಯ 11ನೇ ಅಂತರಶಾಲೆ ಮತ್ತು ಕಾಲೇಜುಗಳ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು   

ವಿಜಯಪುರ: ‘ಯುವಜನರು ಸಾಮಾಜಿಕ ಜಾಲತಾಣಗಳ ದಾಸರಾಗುವುದನ್ನು ಬಿಟ್ಟು, ಜೀವನದ ಮುಖ್ಯ ಗುರಿಗಳ ಕಡೆ ಗಮನ ಹರಿಸಬೇಕು’ ಎಂದು ಅಂತರರಾಷ್ಟ್ರೀಯ ಪ್ಯಾರಾ ಅಥ್ಲೀಟ್ ರಕ್ಷಿತಾ ರಾಜು ಹೇಳಿದರು.

ತಿಕೋಟಾದ ಬಿ.ಎಲ್.ಡಿ.ಇ ಸಂಸ್ಥೆಯ ಎ. ಬಿ. ಜತ್ತಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದಲ್ಲಿ ದಿ. ಡಾ.ಸಿ.ಆರ್. ಬಿದರಿ ಸ್ಮರಣಾರ್ಥ ಈಚೆಗೆ ಆಯೋಜಿಸಿದ್ದ ಎರಡು ದಿನಗಳ ಬಿ.ಎಲ್.ಡಿ.ಇ ಸಂಸ್ಥೆಯ 11ನೇ ಅಂತರಶಾಲೆ ಮತ್ತು ಕಾಲೇಜುಗಳ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

‘ಬಿದರಿ ಕುಟುಂಬದವರು ಇಂಥ ಅಥ್ಲೆಟಿಕ್ ಕ್ರೀಡಾಕೂಟ ಆಯೋಜಿಸುತ್ತಿರುವುದು ಗ್ರಾಮೀಣ ಕ್ರೀಡಾಪಟುಗಳ ಪಾಲಿಗೆ ವರದಾನವಾಗಿದೆ. ಯುವತಿಯರು ಕೂಡಾ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಉನ್ನತ ಸಾಧನೆ ಮಾಡಬಹುದು’ ಎಂದರು.

ADVERTISEMENT

‘ಕ್ರೀಡೆಗಳಲ್ಲಿ ಸೋಲು–ಗೆಲುವು ಸಾಮಾನ್ಯ. ಶ್ರಮ, ಏಕಾಗ್ರತೆಯಿಂದ ಸಾಧನೆ ಮಾಡಬಹುದು. ಬಿ.ಎಲ್.ಡಿ.ಇ ಸಂಸ್ಥೆಯು ಶಿಕ್ಷಣದ ಜೊತೆಗೆ ಸಂಸ್ಕಾರವನ್ನೂ ನೀಡುತ್ತಿದೆ. ಜಿಲ್ಲೆಯ ಯುವಕ ಯುವತಿಯರು ಮುಂಬರುವ ದಿನಗಳಲ್ಲಿ ಏಷಿಯನ್ ಗೇಮ್ಸ್ ಮತ್ತು ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಗೆದ್ದು ನಾಡಿಗೆ ಕೀರ್ತಿ ತರಬೇಕು’ ಎಂದು ಹೇಳಿದರು.

ವಿಜಯೇಂದ್ರ ಬಿದರಿ, ಬಿ.ಎಲ್.ಡಿ.ಇ ಡೀಮ್ಡ್‌ ವಿಶ್ವವಿದ್ಯಾಲಯದ ಕಲುಸಚಿವ ಆರ್.ವಿ. ಕುಲಕರ್ಣಿ, ಬಿ.ಎಲ್.ಡಿ.ಇ ಸಂಸ್ಥೆಯ ಆಡಳಿತಾಧಿಕಾರಿ ವಿ.ಎಸ್. ಬಗಲಿ, ಐ. ಎಸ್. ಕಾಳಪ್ಪನವರ, ದೈಹಿಕ ಶಿಕ್ಷಣ ನಿರ್ದೇಶಕ ಎಸ್. ಎಸ್. ಕೋರಿ, ಜಗದೀಶ ಪಾಟೀಲ, ಕೈಲಾಸ ಹಿರೇಮಠ, ಮಹಾದೇವಿ ವಾಲಿ, ಕ್ರೀಡಾಕೂಟ ಸಂಘಟಕ ಶಿವರಾಜ ಕಲ್ಯಾಣ, ಉಪನ್ಯಾಸಕಿ ಬಸಲಿಂಗಮ್ಮ ಹಯ್ಯಾಳ, ಪ್ರಾಚಾರ್ಯೆ ಶಿಲ್ಪಾ ಪಾಟೀಲ ಇದ್ದರು. 

‘ನಿರಂತರವಾಗಿ ಕ್ರೀಡೆಯಲ್ಲಿ ಪಾಲ್ಗೊಳ್ಳಿ’

ಒಂದು ದಿನ ಮಾತ್ರ ಕ್ರೀಡೆಗಳಲ್ಲಿ ಪಾಲ್ಗೊಂಡರೆ ಸಾಲದು. ನಿರಂತರವಾಗಿ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಇದಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು’ ಎಂದು ಬಂಜಾರ ಕಸೂತಿ ಸಂಸ್ಥೆಯ ಸಂಸ್ಥಾಪಕಿ ಆಶಾ ಎಂ. ಪಾಟೀಲ ತಿಳಿಸಿದರು. ಬಿ.ಎಲ್.ಡಿ.ಇ ಸಂಸ್ಥೆಯ ಜಮಖಂಡಿ ಭಾಗದ ಆಡಳಿತ ಅಧಿಕಾರಿ ಎಸ್.ಎಚ್. ಲಗಳಿ ಮಾತನಾಡಿ ‘ಕ್ರೀಡಾ ಚಟುವಟಿಕೆಗಳು ಅಗತ್ಯವಾಗಿದ್ದು ಎಲ್ಲರೂ ಇಂಥ ಕ್ರೀಡಾಕೂಟಗಳ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.