ADVERTISEMENT

ಅಂಗವಿಕಲರ ಅನುದಾನ ಶೇ 5ಕ್ಕೆ ಏರಿಕೆ

ವಿಶ್ವ ಅಂಗವಿಕಲರ ದಿನಾಚರಣೆಯಲ್ಲಿ ಉಪ ನಿರ್ದೇಶಕ ಶರಣಪ್ಪ ಪಾಟೀಲ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2017, 7:05 IST
Last Updated 6 ಡಿಸೆಂಬರ್ 2017, 7:05 IST
ಯಾದಗಿರಿಯ ಬಾಲಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ಅಂಗವಿಕಲರ ಪೋಷಕರನ್ನು ಸನ್ಮಾನಿಸಲಾಯಿತು
ಯಾದಗಿರಿಯ ಬಾಲಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ಅಂಗವಿಕಲರ ಪೋಷಕರನ್ನು ಸನ್ಮಾನಿಸಲಾಯಿತು   

ಯಾದಗಿರಿ: ‘ಸ್ಥಳೀಯ ಸಂಸ್ಥೆಗಳಲ್ಲಿ ಅಂಗವಿಕಲರ ಅಭಿವೃದ್ಧಿಗಾಗಿ ಶೇ 3ರಷ್ಟು ನಿಗದಿಪಡಿಸಿದ್ದ ಮೀಸಲು ಅನುದಾನವನ್ನು ಸುಪ್ರೀಂ ಕೋರ್ಟ್ ಶೇ 5ರಷ್ಟು ನಿಗದಿಪಡಿಸುವಂತೆ ಆದೇಶಿಸಿದ್ದು, ಅಂಗವಿಕಲರಿಗೆ ಹೆಚ್ಚಿನ ಸೌಲಭ್ಯ ಸಿಗಲಿದೆ’ ಎಂದು ಜಿಲ್ಲಾ ಅಂಗವಿಕಲ ಮತ್ತು ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಉಪ ನಿರ್ದೇಶಕ ಶರಣಪ್ಪ ಪಾಟೀಲ ಹೇಳಿದರು.

ನಗರದ ಬಾಲಭವನ ಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ನಗರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿಗಳು ಇನ್ನು ಮುಂದೆ ಅಂಗವಿಕಲರ ಅಭಿವೃದ್ಧಿಗಾಗಿ ಶೇ 5ರಷ್ಟು ಅನುದಾನ ಮೀಸಲಿಡಬೇಕಾಗಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ಜಿಲ್ಲೆಗೆ ಸ್ಥಳೀಯ ಸಂಸ್ಥೆಗಳು ₹3ರಿಂದ ₹5 ಕೋಟಿಯಷ್ಟು ಅನುದಾನ ಮೀಸಲಿಡಲಿವೆ. ಆದರೆ, ಸ್ಥಳೀಯ ಸಂಸ್ಥೆಗಳ ಈಗಿರುವ  ಅನುದಾ ನವನ್ನು ಅಂಗವಿಕಲರು ಸಮರ್ಕಪವಾಗಿ ಬಳಸಿಕೊಳ್ಳುತ್ತಿಲ್ಲ’ ಎಂದರು.

ADVERTISEMENT

‘ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆ ನಿಮಗೆ ಸಾಧನ ಸಲಕರಣೆಗಳನ್ನು ಒದಗಿಸಿಕೊಡುತ್ತದೆ. ಸಾಧನಾ ಸಲಕರಣೆ ಪಡೆದ ಅಂಗವಿಕಲರು ಭವಿಷ್ಯ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಮುಂದಾಗುತ್ತಿಲ್ಲ. ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಹೋಗಿ ತಮ್ಮ ಮೀಸಲು ಅನುದಾನವನ್ನು ಕೇಳಿ ಪಡೆದುಕೊಳ್ಳಬೇಕು. ಆದರೆ, ಎಷ್ಟೋ ಅಂಗವಿಕಲರು ಸೌಲಭ್ಯ ಪಡೆಯಲು ಹಿಂಜರಿಯುವುದು ಕಂಡುಬಂದಿದೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಬುದ್ಧಿಮಾಂದ್ಯ ಮಕ್ಕಳು ಸೂಕ್ತ ಪೋಷಣೆ ಹಾಗೂ ಆರೋಗ್ಯ ತಪಾಸಣೆ ಇಲ್ಲದೆ ಮೃತಪಡುತ್ತಿರುವುದು ವರದಿಯಾಗಿದೆ. ಸೌಲಭ್ಯ ಪಡೆದ ಅಂಗವಿಕಲರು ಸೌಲಭ್ಯ ವಂಚಿತರಿಗೆ, ಬುದ್ಧಿ ಮಾಂದ್ಯರಿಗೂ ಮಾಹಿತಿ ನೀಡಿ ಸಹಕರಿಸಬೇಕು’ ಎಂದು ಮನವಿ ಮಾಡಿದರು.

ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಸದಾನಂದ ನಾಯಕ್ ಮಾತನಾಡಿ, ‘ಅಂಗವಿಕಲರನ್ನು ಸಮಾಜ ಗೌರವಿ ಸಬೇಕು. ಅವರ ವ್ಯಕ್ತಿತ್ವವನ್ನು ಹೀಗಳೆಯಬಾರದು. ಅವರೂ ಸಮಾಜದಲ್ಲಿ ಸಾಮಾನ್ಯರಂತೆ ಬದುಕಲು ಅವಕಾಶ ಕಲ್ಪಿಸಿಕೊಡಬೇಕು’ ಎಂದು ಕಿವಿಮಾತು ಹೇಳಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅಂಗವಿಕಲರಾದ ಕೊಡೇಕಲ್‌ನ ಪೀರಪ್ಪ ಎಚ್.ಕಟ್ಟಿಮನಿ, ಯಾದಗಿರಿಯ ವೆಂಕಣ್ಣಗೌಡ, ಭೀಮರಾಯನಗುಡಿಯ ರೇಣುಕಾ ಬಿ.ಹುಗ್ಗಿ, ಹಣಮಂತ ಬಂದಳ್ಳಿ, ಬಸಮ್ಮ ಶಹಾಪುರ, ಚಂದಪ್ಪ ಸಗರ ಅವರನ್ನು ಸನ್ಮಾನಿಸಲಾಯಿತು.

ಮುಖ್ಯ ನ್ಯಾಯಿಕ ದಂಡಾಧಿಕಾರಿ ನಾಮದೇವ ಕೆ.ಸಾಲಮಂಟಪಿ, ಜಿಲ್ಲಾ ವಕೀಲರ ಸಂಘದ ಜಿಲ್ಲಾಧ್ಯಕ್ಷ ಭೀಮರಾಯ ಕಿಲ್ಲನಕೇರಾ, ಜಿಲ್ಲಾ ಯೋಜನಾ ಸಹಾಯಕಿ ನಾಗಮ್ಮ ಜಕಾತಿ, ಅಜೀತ್ ದೋಖ, ವಿಶ್ವನಾಥ ರೆಡ್ಡಿ, ರಾಧಾ, ಶರಣಪ್ಪ, ಮಲ್ಲಯ್ಯ ಬಂದಳ್ಳಿ, ಅಬ್ದುಲ್ ಬಾಷ ಇದ್ದರು.

ಅಂಗವಿಕಲರ ದಿನಾಚರಣೆ ಅಂಗವಾಗಿ ನಡೆದ ವಿವಿಧ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.