ADVERTISEMENT

ಅಡುಗೆ ಕೋಣೆಗಳ ಕೊರತೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2012, 10:50 IST
Last Updated 5 ಏಪ್ರಿಲ್ 2012, 10:50 IST

ಯಾದಗಿರಿ: ಜಿಲ್ಲೆಯಲ್ಲಿ ಅಕ್ಷರ ದಾಸೋಹದ ಬಿಸಿಯೂಟ ಯೋಜನೆಗೆ ಅಡುಗೆ ಕೋಣೆಗಳ ಕೊರತೆ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದು, ಶಾಲಾ ಕೊಠಡಿಗಳೇ ಅಡುಗೆ ಕೋಣೆಗಳಾಗಿ ಪರಿವರ್ತನೆ ಆಗುತ್ತಿವೆ.

ಇದರಿಂದಾಗಿ ಕುಳಿತುಕೊಳ್ಳಲು ಕೋಣೆಗಳ ಸಮಸ್ಯೆ ಎದುರಿಸುತ್ತಿರುವ ವಿದ್ಯಾರ್ಥಿಗಳು, ಇನ್ನಷ್ಟು ತೊಂದರೆ ಅನುಭವಿಸುವಂತಾಗಿದೆ.

ಯಾದಗಿರಿ ಜಿಲ್ಲೆಯಲ್ಲಿ ಒಟ್ಟು 1,094 ಸರ್ಕಾರ, 31 ಅನುದಾನಿತ ಶಾಲೆಗಳಿದ್ದು, ಅವುಗಳಲ್ಲಿ ಒಟ್ಟಾರೆ 827 ಅಡುಗೆ ಕೇಂದ್ರಗಳನ್ನು ಆರಂಭಿಸಲಾಗಿದೆ. ಆದರೆ ಕೇವಲ 307 ಅಡುಗೆ ಕೋಣೆಗಳು ಮಾತ್ರ ಲಭ್ಯವಾಗಿದ್ದು, ಇನ್ನೂ 708 ಅಡುಗೆ ಕೋಣೆಗಳ ಕೊರತೆ ಜಿಲ್ಲೆಯಲ್ಲಿದೆ.

ಶಹಾಪುರ ತಾಲ್ಲೂಕಿನಲ್ಲಿ 216, ಸುರಪುರ ತಾಲ್ಲೂಕಿನಲ್ಲಿ 278 ಹಾಗೂ ಯಾದಗಿರಿ ತಾಲ್ಲೂಕಿನಲ್ಲಿ 214 ಅಡುಗೆ ಕೋಣೆಗಳು ಇಲ್ಲದಾಗಿವೆ. ಬಹುತೇಕ ಶಾಲೆಗಳಲ್ಲಿ ಅಡುಗೆ ಕೋಣೆಗಳೇ ಇಲ್ಲದಿರುವುದರಿಂದ ಬಯಲು ಪ್ರದೇಶದಲ್ಲಿ ಅಥವಾ ಶಾಲೆಯ ಕೊಠಡಿಗಳಲ್ಲಿಯೇ ಅಡುಗೆ ತಯಾರಿಸುವ ಅನಿವಾರ್ಯತೆ ಎದುರಾಗಿದೆ.

ಜಿಲ್ಲೆಯಾದ್ಯಂತ ಬಿಸಿಯೂಟದ ಯೋಜನೆಯಿಂದ ಸುಮಾರು 1,47,280 ಮಕ್ಕಳು ಊಟ ಮಾಡುತ್ತಿದ್ದು, ಅವರಿಗಾಗಿ ಅಡುಗೆ ತಯಾರಿಸಲು ಸುಮಾರು 2,366 ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇಷ್ಟೆಲ್ಲ ಇದ್ದರೂ, ಅಡುಗೆ ತಯಾರಿಸಲು ಕೋಣೆಗಳೇ ಇಲ್ಲದಾಗಿರುವುದು ಸಮಸ್ಯೆಯಾಗಿ ಪರಿಣಮಿಸಿದೆ.

ಮಕ್ಕಳಿಗೆ ಶುದ್ಧ ಆಹಾರ ನೀಡುವ ಮೂಲಕ ಮಕ್ಕಳನ್ನು ಶಾಲೆಗೆ ಬರುವಂತೆ ಮಾಡುವ ನಿಟ್ಟಿನಲ್ಲಿ ಬಿಸಿಯೂಟ ಯೋಜನೆ ಆರಂಭಿಸಲಾಗಿದೆ. ಇಂತಹ ಮಹತ್ವದ ಯೋಜನೆಗೆ ಜಿಲ್ಲೆಯಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಾಗುತ್ತಿಲ್ಲ.

ಬಿಡುಗಡೆ ಆಗದ ಅನುದಾನ: ಗುಲ್ಬರ್ಗ ಜಿಲ್ಲೆಯಿಂದ ವಿಭಜನೆಗೊಂಡು ಯಾದಗಿರಿ ನೂತನ ಜಿಲ್ಲೆ ರಚನೆ ಆಯಿತು. ಆದರೆ ಜಿಲ್ಲಾ ಪಂಚಾಯಿತಿಯ ಬಹುತೇಕ ಯೋಜನೆಗಳ ಅನುದಾನ ಮಾತ್ರ ಗುಲ್ಬರ್ಗ ಜಿಲ್ಲಾ ಪಂಚಾಯಿತಿಯಿಂದ ಯಾದಗಿರಿ ಜಿಲ್ಲಾ ಪಂಚಾಯಿತಿಗೆ ಬಿಡುಗಡೆ ಆಗಿಯೇ ಇಲ್ಲ.

ಅಕ್ಷರ ದಾಸೋಹದಲ್ಲಿ ಅಡುಗೆ ಕೋಣೆಗಳ ಕೊರತೆಗೂ ಇದೇ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. 2009 ರಲ್ಲಿ ಗುಲ್ಬರ್ಗ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿದ್ದ ಈಗಿನ ಯಾದಗಿರಿಗೆ ಜಿಲ್ಲೆಗೆ ಅಡುಗೆ ಕೋಣೆ ನಿರ್ಮಿಸಲು ಅನುದಾನ ಬಿಡುಗಡೆ ಮಾಡಲಾಗಿತ್ತು. ಒಂದು ವರ್ಷದಲ್ಲಿ ಯಾದಗಿರಿ ಜಿಲ್ಲೆ ರಚನೆ ಆಗಿದ್ದು, ಜಿಲ್ಲೆಯ ಸುಮಾರು 400 ಕ್ಕೂ ಹೆಚ್ಚು ಅಡುಗೆ ಕೋಣೆಗಳ ನಿರ್ಮಾಣಕ್ಕೆ ಗುಲ್ಬರ್ಗ ಜಿಲ್ಲಾ ಪಂಚಾಯಿತಿಯಲ್ಲಿ ಲಭ್ಯವಿರುವ ಅನುದಾನ ಮಾತ್ರ ಇದುವರೆಗೂ ಬಿಡುಗಡೆ ಆಗುತ್ತಿಲ್ಲ.

ಇದರಿಂದಾಗಿ ಸುಮಾರು 400 ಕ್ಕೂ ಹೆಚ್ಚು ಅಡುಗೆ ಕೋಣೆಗಳ ನಿರ್ಮಾಣ ಕಾರ್ಯ ನೆನೆಗುದಿಗೆ ಬಿದ್ದಿದೆ. ಗುಲ್ಬರ್ಗ ಜಿಲ್ಲಾ ಪಂಚಾಯಿತಿಯಿಂದ ಈ ಅನುದಾನವನ್ನು ತರಿಸಿಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳೂ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾಗಿ ಗೋವಿಂದರಾಜು, ಗುಲ್ಬರ್ಗ ಜಿಲ್ಲಾ ಪಂಚಾಯಿತಿಯಿಂದ ಯಾದಗಿರಿ ಜಿಲ್ಲಾ ಪಂಚಾಯಿತಿಗೆ ಬರಬೇಕಾಗಿರುವ ಅನುದಾನವನ್ನು ಬಿಡುಗಡೆ ಮಾಡಿಸಲು, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿಗಳಿಗೆ ಜವಾಬ್ದಾರಿ ವಹಿಸಿದ್ದರು. ಗುಲ್ಬರ್ಗ ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ಜೊತೆ ಚರ್ಚಿಸಿ, ಯಾದಗಿರಿ ಜಿಲ್ಲಾ ಪಂಚಾಯಿತಿಯ ವಿವಿಧ ಇಲಾಖೆಗಳಿಗೆ ಬರಬೇಕಾಗಿರುವ ಅನುದಾನವನ್ನು ಬಿಡುಗಡೆ ಮಾಡಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು.

ಆದರೆ ಇತ್ತ ಗೋವಿಂದರಾಜು ಅವರ ವರ್ಗಾವಣೆ ಆಗಿದ್ದು, ಈ ಪ್ರಕ್ರಿಯೆಯೂ ನೆನೆಗುದಿಗೆ ಬಿದ್ದಂತಾಗಿದೆ. ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಸೈಯ್ಯದ್ ಅಬ್ದುಲ್ ರಬ್ ಈ ನಿಟ್ಟಿನಲ್ಲಿ ಮುಂದಿನ ಪ್ರಕ್ರಿಯೆ ನಡೆಸಬೇಕಾಗಿದೆ ಎಂದು ಇಲಾಖೆಯ ಅಧಿಕಾರಿಗಳೇ ಹೇಳುತ್ತಿದ್ದಾರೆ.

ನೂತನ ಜಿಲ್ಲೆಯಾಗಿ ಎರಡೂವರೆ ವರ್ಷ ಕಳೆಯುತ್ತ ಬಂದಿದ್ದರೂ, ಇನ್ನೂ ಯಾದಗಿರಿ ಜಿಲ್ಲಾ ಪಂಚಾಯಿತಿಗೆ ಬರಬೇಕಾಗಿರುವ ಅನುದಾನ ಮಾತ್ರ ಗುಲ್ಬರ್ಗ ಜಿಲ್ಲಾ ಪಂಚಾಯಿತಿಯಿಂದ ಬಿಡುಗಡೆ ಆಗುತ್ತಲೇ ಇಲ್ಲ. ಆರಂಭದಲ್ಲಿಯೇ ಈ ಬಗ್ಗೆ ಕ್ರಮ ಕೈಗೊಳ್ಳದೇ ಇರುವುದೇ ಇದಕ್ಕೆ ಕಾರಣ ಎಂದು ಜಿಲ್ಲಾ ಪಂಚಾಯಿತಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮೇಗೌಡ ಮರಕಲ್, ಮಕ್ಕಳಿಗೆ ಬಿಸಿಯೂಟ ಅತ್ಯಂತ ಅವಶ್ಯಕವಾಗಿದ್ದು, ಇಂತಹ ವಿಷಯದಲ್ಲೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವುದು ಸರಿಯಲ್ಲ. ಕೂಡಲೇ ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು. ಅಗತ್ಯ ಬಿದ್ದಲ್ಲಿ, ಗುಲ್ಬರ್ಗ ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ಜೊತೆಗೂ ಮಾತನಾಡುವುದಾಗಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಅಗತ್ಯವಿರುವ ಬಿಸಿಯೂಟ ಕೋಣೆಗಳು, ಸಿಲಿಂಡರ್ ಪೂರೈಕೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಬಗ್ಗೆ ಸ್ಥಾಯಿ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.