ADVERTISEMENT

ಅಧಿಕಾರಿಗಳ ವಿರುದ್ಧ ಕ್ರಮ: ಸಚಿವರ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2011, 10:15 IST
Last Updated 7 ಸೆಪ್ಟೆಂಬರ್ 2011, 10:15 IST

ಯಾದಗಿರಿ: ಇಲಾಖಾವಾರು ಕಾಮಗಾರಿಗಳ ಪ್ರಗತಿಯ ಕುರಿತು ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡದೇ ಇರುವ ಹಿನ್ನೆಲೆಯಲ್ಲಿ ಮಂಗಳವಾರ ಇಲ್ಲಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ನರಸಿಂಹ ನಾಯಕ (ರಾಜುಗೌಡ), 15 ದಿನ ಮುಂದೂಡಿದರು.

ಬೆಳಿಗ್ಗೆ ಸಭೆ ಆರಂಭವಾಗುತ್ತಿದ್ದಂತೆಯೇ ಅಧಿಕಾರಿಗಳು ನೀಡಿದ ಪುಸ್ತಕದಲ್ಲಿ ಒಂದು ಮಾಹಿತಿ ಇದ್ದರೆ, ಅಧಿಕಾರಿಗಳು ನೀಡುವ ಮಾಹಿತಿಯೇ ಬೇರೆ. ಇದರಲ್ಲಿ ಸಮರ್ಪಕ ಮಾಹಿತಿಯೇ ಇಲ್ಲ. ಹಾಗಾಗಿ ಅಧಿಕಾರಿಗಳು ಹೇಳಿದ್ದನ್ನೇ ಕೇಳಿ ಹೋಗುವಂತಾಗಿದೆ ಎಂದು ಶಾಸಕ ಶರಣಬಸಪ್ಪ ದರ್ಶನಾಪೂರ ಬೇಸರ ವ್ಯಕ್ತಪಡಿಸಿದರು.

ಸಭೆಗೆ ನೀಡಲಾಗುವ ಪುಸ್ತಕದಲ್ಲಿ ಸಮಗ್ರವಾದ ಮಾಹಿತಿ ಇರಬೇಕು. ಅಂದಾಗ ಮಾತ್ರ ಎಲ್ಲ ವಿವರಗಳನ್ನು ತಿಳಿಯಲು ಸಾಧ್ಯ. ಕೇವಲ ಅಂಕಿ-ಅಂಶ ನೀಡಿದರೆ, ಗೊತ್ತಾಗುವುದು ಹೇಗೆ ಎಂದು ಪ್ರಶ್ನಿಸಿದರು.

ಇದಕ್ಕೆ ಸಹಮತ ವ್ಯಕ್ತಪಡಿಸಿದ ಸಚಿವ ನರಸಿಂಹ ನಾಯಕ (ರಾಜುಗೌಡ), ಎಲ್ಲ ಇಲಾಖೆಗಳು ಸರಿಯಾದ ಮಾಹಿತಿ ನೀಡಬೇಕು. ಇದರ ಉಸ್ತುವಾರಿ ನಿರ್ವಹಿಸುತ್ತಿರುವ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ವಿರುಪಾಕ್ಷಪ್ಪನವರೂ ಮಾಹಿತಿಯನ್ನು ಸರಿಯಾಗಿ ಕೊಡುವ ಕೆಲಸ ಮಾಡಬೇಕು ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.

ಸಿಬ್ಬಂದಿಗಳ ಕೊರತೆ ಇದೆ ಎಂಬ ಕಾರಣಕ್ಕೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದಿಲ್ಲ ಎಂಬ ಮನೋಭಾವ ಬೆಳೆಸಿಕೊಳ್ಳಬೇಡಿ. ಮೊದಲ ಸಭೆ ಆಗಿರುವುದರಿಂದ ಈ ಬಾರಿ ಅವಕಾಶ ನೀಡಲಾಗುವುದು. ಮುಂದಿನ ಸಭೆಯಲ್ಲಿ ಸಮಗ್ರ ಮಾಹಿತಿ ನೀಡದೇ ಇರುವ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ ಜೆಸ್ಕಾಂನಿಂದ ಸರಿಯಾಗಿ ಕೆಲಸ ಆಗುತ್ತಿಲ್ಲ. ವಿದ್ಯುತ್ ಪರಿವರ್ತಕಗಳ ಸಮರ್ಪಕ ಪೂರೈಕೆ ಆಗುತ್ತಿಲ್ಲ. ಈ ಬಗ್ಗೆ ವಿವರ ಕೇಳಲು ಜೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಕೂಡ ಸಭೆಯಲ್ಲಿ ಇಲ್ಲ. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗಾಗಿ ಕೊರೆಯಿಸಿರುವ ಬೋರವೆಲ್‌ಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿಲ್ಲ. ಹೀಗಾದರೆ ಹೇಗೆ ಎಂದು ಖಾರವಾಗಿ ಪ್ರಶ್ನಿಸಿದರು.

ನೀರು ಬಳಕೆ ಮಾಡಿಕೊಳ್ಳಿ: ಕೃಷ್ಣಾ ನದಿಯಿಂದ ಅಪಾರ ಪ್ರಮಾಣ ನೀರು ಹಳ್ಳಕ್ಕೆ ಹರಿದು ಹೋಗುತ್ತಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಕೃಷ್ಣಾ ಭಾಗ್ಯ ಜಲನಿಗಮದ ಭೀಮರಾಯನಗುಡಿ ವಿಭಾಗದ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಒಂದೆಡೆ ರೈತರು ನೀರಿಲ್ಲ ಎಂದು ಗೋಗರೆಯುತ್ತಿದ್ದಾರೆ. ಇನ್ನೊಂದೆಡೆ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ. ಇದನ್ನು ರೈತರ ಹೊಲಗಳಿಗೆ ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯ ರಸಗೊಬ್ಬರ ವಿತರಣೆಯಲ್ಲಿನ ಲೋಪದೋಷಗಳಿಂದಾಗಿಯೇ ಈಗ ಸಮಸ್ಯೆ ಉದ್ಭವಿಸಿದೆ. ರೈತರಿಗೆ ಸಮರ್ಪಕ ವಿತರಣೆ ಮಾಡುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ಸೇರಿದಂತೆ ಹಲವಾರು ಜನಪ್ರತಿನಿಧಿಗಳು ದೂರಿದರು.

ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ದೇವರಾಜ ನಾಯಕ, ಹನುಮೇಗೌಡ ಮರಕಲ್, ಸಿದ್ಧಣ್ಣಗೌಡ ಪೊಲೀಸ್‌ಪಾಟೀಲ ಜಿಲ್ಲಾ ಪಂಚಾಯಿತಿ ವಿರೋಧ ಪಕ್ಷದ ನಾಯಕ ಎಚ್.ಸಿ. ಪಾಟೀಲ ದನಿಗೂಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಗುರನೀತ್ ತೇಜ್ ಮೆನನ್, ಜಿಲ್ಲೆಯಲ್ಲಿನ ಕ್ರಿಯಾಶೀಲ ವ್ಯವಸಾಯ ಸೇವಾ ಸಹಕಾರಿ ಸಂಘಗಳ ಬಗ್ಗೆ ಮಾಹಿತಿ ಕಲೆ ಹಾಕುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದರಿಂದ ಆಯಾ ವಿಎಸ್‌ಎಸ್‌ಎನ್‌ಗಳ ಮೂಲಕ ಎಷ್ಟು ರೈತರಿಗೆ ರಸಗೊಬ್ಬರ ವಿತರಣೆ ಮಾಡಲು ಸಾಧ್ಯವಾಗಲಿದೆ ಎಂಬುದು ಸ್ಪಷ್ಟವಾಗಲಿದೆ ಎಂದು ತಿಳಿಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರ, ಶಾಲೆಗಳನ್ನು ಕಟ್ಟಲು ಜಮೀನು ದೇಣಿಗೆ ನೀಡಲಾಗಿದ್ದು, ಪಹಣಿಯಲ್ಲಿ ಮಾತ್ರ ಇನ್ನೂ ಮಾಲೀಕರ ಹೆಸರೇ ಮುಂದುವರಿದಿದೆ. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಚಿವ ರಾಜುಗೌಡ, ಡಿಡಿಪಿಐ ಅವರಿಗೆ ಸೂಚಿಸಿದರು.

ಸೈದಾಪುರ ಬಳಿ ಕೈಗಾರಿಕೆಗಳ ಸ್ಥಾಪನೆಗೆ 3000 ಎಕರೆ ಜಮೀನು ನೀಡಲು ರೈತರು ಮುಂದೆ ಬಂದಿದ್ದಾರೆ. ಕೂಡಲೇ ಜಮೀನಿಗೆ ದರ ನಿಗದಿ ಮಾಡಬೇಕು ಎಂದು ಶಾಸಕ ಬಾಬುರಾವ ಚಿಂಚನಸೂರ ಆಗ್ರಹಿಸಿದರು.
ಈ ಬಗ್ಗೆ ಕೆಎಐಡಿಬಿಯಿಂದ ಪ್ರಸ್ತಾವನೆಗೆ ಮಂಜೂರಾತಿ ದೊರೆಯಬೇಕು. ನಂತರವಷ್ಟೇ ಈ ನಿಟ್ಟಿನಲ್ಲಿ ಸಭೆ ನಡೆಸಲಾಗುವುದು. ಈ ಬಗ್ಗೆ 15 ದಿನದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ತೊಗರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ. ವೆಂಕಟೇಶ ಗಡ್ಡಿಮನಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ನಾಗನಗೌಡ ಸುಬೇದಾರ, ನಗರಸಭೆ ಅಧ್ಯಕ್ಷೆ ನಾಗರತ್ನಾ ಅನಪೂರ, ಜಿಲ್ಲಾ ಪಂಚಾಯಿತಿ ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷೆ ಹಣಮವ್ವ ಸೊಲ್ಲಾಪುರೆ, ಸದಸ್ಯ ಬಸವರಾಜ ಖಂಡ್ರೆ, ಎಸ್ಪಿ ಡಿ. ರೂಪಾ ಸೇರಿದಂತೆ ಹಲವಾರು ಅಧಿಕಾರಿಗಳು ಪಾಲ್ಗೊಂಡಿದ್ದರು.

ಸಿಎಂ ಮನೆ ಎದುರು ಧರಣಿ: ಚಿಂಚನಸೂರ
ಯಾದಗಿರಿ: ಜಿಲ್ಲೆಗೆ ಬಿಡುಗಡೆ ಆಗಿರುವ ಅನುದಾನದಲ್ಲಿ ಗುರುಮಠಕಲ್ ಕ್ಷೇತ್ರಕ್ಕೆ ಅನ್ಯಾಯವಾಗಿದೆ. ಇದನ್ನು ಕೂಡಲೇ ಸರಿಪಡಿಸದಿದ್ದಲ್ಲಿ ಮುಖ್ಯಮಂತ್ರಿಗಳ ನಿವಾಸದ ಎದುರು ಆಮರಣ ಉಪವಾಸ ಮಾಡುವುದಾಗಿ ಶಾಸಕ ಬಾಬುರಾವ ಚಿಂಚನಸೂರ ಎಚ್ಚರಿಕೆ ನೀಡಿದರು.

ಈ ಬಗ್ಗೆ ಮುಖ್ಯಮಂತ್ರಿಗಳಿಗೂ ಮನವಿ ಸಲ್ಲಿಸಲಾಗಿದೆ. ಬೆಂಗಳೂರಿನಲ್ಲಿಯೇ ಚರ್ಚಿಸಿ, ಸರಿಪಡಿಸುವ ಭರವಸೆ ನೀಡಿದ್ದರು. ಆದರೆ ಜಿಲ್ಲೆಯವರೇ ಸಚಿವರಾಗಿದ್ದು, ಇಲ್ಲಿಯೇ ಸಮಸ್ಯೆ ಪರಿಹರಿಸಲು ಸಭೆಗೆ ಬಂದಿದ್ದೇನೆ. ದಯವಿಟ್ಟು ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದರು.

ಕ್ಷೇತ್ರದ ಜನರಿಗೆ ಏನು ಉತ್ತರ ಹೇಳಲಿ. ದಯಮಾಡಿ ಅಪಮಾನ ಆಗುವುದನ್ನು ತಡೆಯಿರಿ ಎಂದು ಶಾಸಕ ಚಿಂಚನಸೂರ ಮನವಿ ಮಾಡಿದ್ದು ವಿಶೇಷವಾಗಿತ್ತು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.