ADVERTISEMENT

ಎಚ್‌ಐವಿ ನಿಯಂತ್ರಣಕ್ಕೆ ಜಾಗೃತಿ ಮುಖ್ಯ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2017, 6:28 IST
Last Updated 2 ಡಿಸೆಂಬರ್ 2017, 6:28 IST

ಶಹಾಪುರ: ‘ಏಡ್ಸ್ ರೋಗ (ಎಚ್‌ಐವಿ) ತಡೆಗಟ್ಟಬೇಕಾದರೆ ಅದು ಬರದಂತೆ ನೋಡಿಕೊಳ್ಳುವುದು ಮುಖ್ಯ. ಅಸುರಕ್ಷತೆ ಲೈಂಗಿಕ ಸಂಪರ್ಕದಿಂದ ಹೆಚ್ಚಾಗಿ ರೋಗ ಬರುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಕೊರತೆಯಿಂದ ಮುಗ್ದ ಜನ ಬಲಿಯಾಗುತ್ತಿದ್ದಾರೆ. ರೋಗ ನಿಯಂತ್ರಣಕ್ಕೆ ಅರಿವು ಮೂಡಿಸುವುದು ಅಗತ್ಯವಾಗಿದೆ’ ಎಂದು ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಎಚ್.ಎ.ಸಾತ್ವಿಕ ಹೇಳಿದರು.

ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಶುಕ್ರವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಸರ್ಕಾರಿ ಆಸ್ಪತ್ರೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಏಡ್ಸ್ ಸೋಂಕಿತ ರೋಗಿಯನ್ನು ಸಮಾನತೆಯ ಭಾವನೆಯಿಂದ ಕಾಣಬೇಕು. ಆತ್ಮವಿಶ್ವಾಸ ಮೂಡಿಸ ಬೇಕು. ರೋಗಕ್ಕೆ ತುತ್ತಾದವರಿಗೆ ಸರ್ಕಾರ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಅವೆಲ್ಲವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸ್ವಚ್ಛತೆ ಹಾಗೂ ಸುರಕ್ಷತೆಯ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎಂದರು.

ADVERTISEMENT

ತಾಲ್ಲೂಕು ವೈದ್ಯಾಧಿಕಾರಿ ಡಾ.ರಮೇಶ ಗುತ್ತೇದಾರ ಮಾತನಾಡಿ, ‘ಯುವಕರು ದುಶ್ವಟಗಳಿಂದ ದೂರವಿರಬೇಕು. ಆಯಾ ಸರ್ಕಾರಿ ಆಸ್ಪತ್ರೆಗಳಲ್ಲಿ ಈಗಾಗಲೇ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹೆಸರನ್ನು ಕೂಡಾ ಗೌಪ್ಯವಾಗಿ ಇಡಲಾಗಿದೆ’ ಎಂದರು.

‘ಆರೋಗ್ಯ ರಕ್ಷಣೆ ನಮ್ಮ ಗುರಿಯಾಗಲಿ. ಏಡ್ಸ್‌  ಅಂಟು ರೋಗವಲ್ಲ. ಅನವಶ್ಯಕವಾಗಿ ಭೀತಿಗೆ ಒಳಗಾಗ ಬಾರದು. ಗ್ರಾಮೀಣ ಪ್ರದೇಶದಲ್ಲಿ ಆಶಾ ಕಾರ್ಯಕರ್ತರು ಮಾರಕ ರೋಗದ ಬಗ್ಗೆ ಜಾಗೃತಿ ಹಾಗೂ ಚಿಕಿತ್ಸೆ ಕುರಿತ ಮಾಹಿತಿ ನೀಡುವ ಕಾರ್ಯ ಸಾಗಿದೆ. ಇಂತಹ ಹೆಮ್ಮಾರಿಯಿಂದ ನಾವು ದೂರವಿರಬೇಕು ಎಂದರೆ ಸ್ವ ನಿಯಂತ್ರಣ. ನೈತಿಕ ಮೌಲ್ಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ತಿಳಿಸಿದರು.

‘ಏಡ್ಸ್ ರೋಗಕ್ಕೆ ತುತ್ತಾದವರಲ್ಲಿ ಪುರುಷರಿಗಿಂತ ಮಹಿಳೆಯರು ಬೇಗ ಗುಣಮುಖರಾಗುತ್ತಾರೆ. ಪ್ರತಿ ತಿಂಗಳು ಮುಟ್ಟಾಗುವುದರಿಂದ ಹೊಸ ರಕ್ತ ಉತ್ಪತ್ತಿಯಾಗುತ್ತದೆ. ಸೋಂಕಿತ ರೋಗಿಗಳು ಸ್ಥಳೀಯ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡುವುದಿಲ್ಲ. ನೆರೆ ಜಿಲ್ಲೆಗೆ ತೆರಳಿ ಔಷಧಿ ಪಡೆದುಕೊಳ್ಳುತ್ತಾರೆ. ಇದರಿಂದ ನಿಖರವಾಗಿ ಮಾಹಿತಿ ಪಡೆದುಕೊಳ್ಳಲು ಕೆಲವು ಸಲ ಪರದಾಡುತ್ತೇವೆ’ ಎಂದು ಏಡ್ಸ್ ಜಾಗೃತಿ ಅಭಿಯಾನದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿ ತಿಳಿಸಿದರು.

ಹಿರಿಯ ವಕೀಲ ಆರ್.ಎಂ.ಹೊನ್ನಾರಡ್ಡಿ ಕಾನೂನು ಅರಿವು ನೆರವು ಬಗ್ಗೆ ಉಪನ್ಯಾಸ ನೀಡಿದರು. ವಕೀಲರ ಸಂಘದ ಅಧ್ಯಕ್ಷ ಅಮರೇಶ ದೇಸಾಯಿ ಸಂಘದ ಕಾರ್ಯದರ್ಶಿ ಹೇಮರಡ್ಡಿ ಕೊಂಗಂಡಿ, ಸಂತೋಷ ಸತ್ಯಂಪೇಟೆ, ಉಮೇಶ ಕುಲಕರ್ಣಿ, ಆರೋಗ್ಯ ಶಿಕ್ಷಣಾಧಿಕಾರಿ ಬಸವರಾಜ ಜಾನೆ, ಗುಂಡುರಾವ್ ಹಾಗೂ ಆಶಾ ಕಾರ್ಯಕರ್ತಯರು ಭಾಗವಹಿಸಿದ್ದರು.

‘2,617 ಎಚ್‌ಐವಿ ಸೋಂಕಿತರು ಗುಣಮುಖ’

ಶಹಾಪುರ: ‘ಜಿಲ್ಲೆಯಲ್ಲಿ 2011ರಿಂದ 2017ರವರೆಗೆ 4,132 ಜನರನ್ನು ತಪಾಸಣೆ ಮಾಡಲಾಗಿದೆ. 3,700 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದು, ಅದರಲ್ಲಿ 817 ಜನ ನಿಧನರಾಗಿದ್ದಾರೆ. ಆರೋಗ್ಯ ಇಲಾಖೆ ವರದಿಯ ಪ್ರಕಾರ ಸೋಂಕಿತ 2,617 ರೋಗಿಗಳು ಗುಣಮುಖರಾಗಿ ಉತ್ತಮ ಜೀವನ ನಡೆಸುತ್ತಿದ್ದಾರೆ’ ಎಂದು ಏಡ್ಸ್ ನಿಯಂತ್ರಣ ಜಿಲ್ಲಾ ಘಟಕದ ಮೇಲ್ವಿಚಾರಕಿ ಆರತಿ ಧನಶ್ರೀ ತಿಳಿಸಿದರು.

‘ಬಾಣಂತಿ ಹಾಗೂ ಮಗುವಿಗೂ ತಪಾಸಣೆ ಮಾಡಲಾಗುತ್ತಿದೆ. ಸೋಂಕಿತ ರೋಗಿಗಳಿಗೆ ಸ್ವಾವಲಂಬನೆಯ ಬದುಕಿಗಾಗಿ ₹50 ಸಾವಿರ ಸಹಾಯ ಧನ ನೀಡಲಾಗುತ್ತಿದೆ. ಸೋಂಕು ತಗುಲಿದ ತಾಯಿಗೂ ಮಾಸಿಕ ಸಹಾಯ ಧನ ಇಲಾಖೆ ನೀಡುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.