ADVERTISEMENT

ಎಸ್ಸೆಸ್ಸೆಲ್ಸಿ ಫಲಿತಾಂಶ: ಜಿಲ್ಲೆಗೆ ಕೊನೆಯ ಸ್ಥಾನ

34ನೇ ಸ್ಥಾನಕ್ಕೆ ಕುಸಿದ ಜಿಲ್ಲೆ; ಪೋಷಕರ ಟೀಕೆಗೆ ಗುರಿಯಾದ ಸಾರ್ವಜನಿಕ ಶಿಕ್ಷಣ ಇಲಾಖೆ

ಮಲ್ಲೇಶ್ ನಾಯಕನಹಟ್ಟಿ
Published 8 ಮೇ 2018, 14:50 IST
Last Updated 8 ಮೇ 2018, 14:50 IST

ಯಾದಗಿರಿ: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ 35ರಷ್ಟು ಫಲಿತಾಂಶ ಪಡೆಯುವ ಮೂಲಕ 34ನೇ ಸ್ಥಾನಕ್ಕೆ ಕುಸಿದಿದೆ. ರಾಜ್ಯದಲ್ಲಿಯೇ ಕಟ್ಟಕಡೆಯ ಸ್ಥಾನ ಹಾಗೂ ಕಳಪೆ ಫಲಿತಾಂಶದಿಂದಾಗಿ ಇಲ್ಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯು ವಿದ್ಯಾರ್ಥಿ, ಪೋಷಕರ ಟೀಕೆಗೆ ಗುರಿಯಾಗಿದೆ.

2016–17ನೇ ಸಾಲಿನಲ್ಲಿ ಜಿಲ್ಲೆ ಶೇ 74.84 ರಷ್ಟು ಫಲಿತಾಂಶ ಪಡೆದು 16ನೇ ಸ್ಥಾನಕ್ಕೆ ಜಿಗಿದಿತ್ತು. ಆಗ ಮಹಾ ಯಶಸ್ಸು ಅಂತಲೇ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದರು. ಅಧಿಕಾರಿಗಳೇ ಸಿಹಿ ಹಂಚಿ ಸಂಭ್ರಮಿಸಿದ್ದರು. ಆದರೆ, ಈ ಬಾರಿ ಕಳಪೆ ಫಲಿತಾಂಶದಿಂದಾಗಿ ಡಿಡಿಪಿಐ ಕಚೇರಿಯಲ್ಲಿ ಸ್ಮಶಾನ ಮೌನ ಆವರಿಸಿತ್ತು.

ಜಿಲ್ಲೆಯಲ್ಲಿ ಒಟ್ಟು 203 ಪ್ರೌಢಶಾಲೆಗಳಿವೆ. 122 ಸರ್ಕಾರಿ, 15 ಅನುದಾನಿತ ಹಾಗೂ 66 ಅನುದಾನಿತ ಶಾಲೆಗಳಿವೆ. ಅವುಗಳಲ್ಲಿನ ಸರ್ಕಾರಿ ಪ್ರೌಢಶಾಲೆಗಳಲ್ಲಿ 200 ಸಹ ಶಿಕ್ಷಕರ ಹುದ್ದೆಗಳು, 68 ಮುಖ್ಯೋಪಾಧ್ಯಾಯರ ಹುದ್ದೆಗಳು ಖಾಲಿ ಇವೆ. 22 ಕನ್ನಡ , 19 ಇಂಗ್ಲಿಷ್, 19 ಗಣಿತ, 13 ವಿಜ್ಞಾನ, 25 ವಿಶೇಷ, 12 ಹಿಂದಿ ಭಾಷಾ ಶಿಕ್ಷಕರ ಕೊರತೆ ನೀಗಿಲ್ಲ. ಶಿಕ್ಷಕರ ಕೊರತೆ ಫಲಿತಾಂಶದ ಮೇಲೆ ಪರಿಣಾಮ ಬೀರಲು ಕಾರಣವಾಗಿದೆ ಎಂದು ಜಿಲ್ಲೆಯಲ್ಲಿನ ಪ್ರೌಢಶಾಲೆ ಶಿಕ್ಷಕರು ಕಳಪೆ ಫಲಿತಾಂಶ ಕುರಿತು ವಿಶ್ಲೇಷಿಸುತ್ತಿದ್ದಾರೆ.

ADVERTISEMENT

ಫಲಿತಾಂಶ ಕುಸಿತಕ್ಕೆ ಕಾರಣಗಳೇನು?:

ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಸೇತುಬಂಧ, ನಿರಂತರ ಪರಿಹಾರ ಬೋಧನೆ, ವಿಶೇಷ ತರಗತಿ ಬೋಧನೆ, ಶಿಕ್ಷಕರ ವಿಷಯ ಪ್ರಬುದ್ಧತೆ, ಮಾದರಿ ಪಾಠ, ವಿಷಯವಾರು ಶಿಕ್ಷಕರ ವೇದಿಕೆ, ಪೋಷಕರ ಸಭೆ, ಗ್ರಂಥಾಲಯ ಬಳಕೆ ಶಿಕ್ಷಕರೊಂದಿಗೆ ವಿದ್ಯಾರ್ಥಿಗಳ ಆಪ್ತ ಸಮಾಲೋಚನೆ.. ಹೀಗೆ ಅನೇಕ ಶೈಕ್ಷಣಿಕ ಕ್ರಿಯಾಯೋಜನೆ ರೂಪಿಸಿದ್ದರೂ, ಬದಲಾದ ಮಾದರಿ ಪ್ರಶ್ನೆ ಪತ್ರಿಕೆಗಳು ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಾಗಿತ್ತು. ಪರೀಕ್ಷಾ ಕೇಂದ್ರಗಳಲ್ಲಿ ಪ್ರಶ್ನೆಪತ್ರಿಕೆಗಳನ್ನು ಉತ್ತರಿಸಲು ಪರೀಕ್ಷಾರ್ಥಿಗಳು ಹರಸಾಹಸ ಪಡುತ್ತಿದ್ದರು ಎಂದು ವಿಷಯ ಪರಿವೀಕ್ಷಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಬಿಗಿಕ್ರಮ ತಂದ ಆತಂಕ

ಮಾರ್ಚ್‌ನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 39 ವಿದ್ಯಾರ್ಥಿಗಳನ್ನು ಪರೀಕ್ಷಾ ಜಾಗೃತ ದಳ ಡಿಬಾರ್‌ ಮಾಡಿದೆ. 79 ವಿದ್ಯಾರ್ಥಿಗಳನ್ನು ಅನುಚಿತ ವರ್ತನೆಯ ಕಾರಣ ನೀಡಿ ಪರೀಕ್ಷಾ ಕೇಂದ್ರದಿಂದ ಹೊರ ಹಾಕಲಾಗಿದೆ. ಈ ಬಿಗಿ ಕ್ರಮ ಪರೀಕ್ಷೆ ಬರೆಯುವ ಇತರೆ ವಿದ್ಯಾರ್ಥಿಗಳ ಆತಂಕಕ್ಕೂ ಕಾರಣವಾಗಿತ್ತು. ಫಲಿತಾಂಶ ಕುಸಿತಕ್ಕೂ ಕಾರಣವಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಪರೀಕ್ಷಾ ಕೊಠಡಿ ಮೇಲ್ವಿಚಾರಕರಾಗಿದ್ದ ಶಿಕ್ಷಕರೊಬ್ಬರು ಹೇಳಿದರು.

ಫಲಿತಾಂಶ ಸುಧಾರಣೆಗೆ ಕ್ರಮ: ಡಿಸಿ

ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ನಿರಾಸೆ ತಂದಿದೆ. ಶೈಕ್ಷಣಿಕ ಕಾರ್ಯಾಗಾರವೊಂದರಲ್ಲಿ ಪ್ರಾದೇಶಿಕ ಆಯುಕ್ತ ಹರ್ಷಗುಪ್ತಾ ಅವರು ಪರೀಕ್ಷಾ ಕ್ರಮ ಬಿಗಿಗೊಳಿಸುವಂತೆ ಆದೇಶಿಸಿದ್ದರು. ಅದರಂತೆ ಪರೀಕ್ಷೆ ಕೇಂದ್ರಗಳಲ್ಲಿ ಬಿಗಿಕ್ರಮ ಕೈಗೊಳ್ಳಲಾಯಿತು. ಇದರಿಂದ ಫಲಿತಾಂಶ ಕುಸಿದಿರಬಹುದು. ಶಿಕ್ಷಣದ ಗುಣಮಟ್ಟ ಕಾಪಾಡಲು ತರಬೇತಿ, ಶೈಕ್ಷಣಿಕ ಕಾರ್ಯಾಗಾರಗಳನ್ನು ಎಸ್ಸೆಸ್ಸೆಲ್ಸಿ ಹಂತದಿಂದ ಆರಂಭಿಸಲಾಗಿದೆ. ಇನ್ನು ಮುಂದೆ 8 ಮತ್ತು 9ನೇ ತರಗತಿಯಿಂದಲೇ ಮಾದರಿ ಪ್ರಶ್ನೆ ಪತ್ರಿಕೆ ಎದುರಿಸುವ ಕುರಿತು ಮತ್ತು ಶಿಕ್ಷಣ ಗುಣಮಟ್ಟ ಕಾಪಾಡಲು ವಿಶೇಷ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು.

**
ಶಿಕ್ಷಕರ ಕೊರತೆ ಫಲಿತಾಂಶದ ಮೇಲೆ ಆಗಿದೆ. ಮುಖ್ಯೋಪಾಧ್ಯಾಯರ ಹುದ್ದೆ ಖಾಲಿ ಇದ್ದರೆ ತರಗತಿ ಮತ್ತು ಶಾಲಾಡಳಿತದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ
ಬಸವರಾಜ ಸಿ.ಗವನಹಳ್ಳಿ, ಡಿಡಿಪಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.