ADVERTISEMENT

ಏಕ ವಚನ ಬಳಕೆ: ಗೊಂದಲದ ಗೂಡಾದ ಸಭೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2012, 7:45 IST
Last Updated 9 ಜುಲೈ 2012, 7:45 IST

ಸುರಪುರ: ಇಲ್ಲಿನ ಪುರಸಭೆ ಸಾಮಾನ್ಯ ಸಭೆಯಲ್ಲಿ ಗುರುವಾರ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದವರ ಮಧ್ಯೆ ಮಾತಿನ ಚಕಮಕಿ ನಡೆದು, ಪರಸ್ಪರ ಏಕ ವಚನದಲ್ಲಿ ಸಂಬೋಧಿಸಿದ್ದರ ಪರಿಣಾಮವಾಗಿ ಸಭೆ ಗೊಂದಲದ ಗೂಡಾಗಿ ಪರಿವರ್ತನೆಯಾಯಿತು. ಒಂದು ಹಂತದಲ್ಲಿ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದ ಸಭೆಯನ್ನು ಹಿರಿಯ ಸದಸ್ಯರು ತಹ ಬದಿಗೆ ತಂದರು.

ವಿರೋಧ ಪಕ್ಷದ ನಾಯಕ ಅಬ್ದುಲ್ ಗಫಾರ್ ನಗನೂರಿ, 8 ತಿಂಗಳಿಂದ ಸಾಮಾನ್ಯ ಸಭೆ ಕರೆದಿಲ್ಲ. ಪ್ರತಿ ತಿಂಗಳು ಕಡ್ಡಾಯವಾಗಿ ಸಭೆ ಕರೆಯಬೇಕು. ಸಭೆ ಕರೆಯದೆ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಿರುವುದರಿಂದ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಅಭಿವೃದ್ಧಿ ಕಾರ್ಯ, ಮೂಲಭೂತ ಸೌಕರ್ಯಗಳು ಕುಂಠಿತಗೊಂಡಿವೆ ಎಂದು ಆರೋಪಿಸಿದರು.

ಪಟ್ಟಣದಲ್ಲಿ ಕುಡಿವ ನೀರಿಗೆ ತೀವ್ರ ತತ್ವಾರ ಉಂಟಾಗಿದೆ. ಜನ ಹಿಡಿಶಾಪ ಹಾಕುತ್ತಿದ್ದಾರೆ. ಸದಸ್ಯರು ತಮ್ಮ    ವಾರ್ಡ್‌ನಲ್ಲಿ ಮುಖ ತೋರಿಸಲು ಆಗುತ್ತಿಲ್ಲ.

ಆಡಳಿತದ ಚುಕ್ಕಾಣಿ ಹಿಡಿದವರು ಕನಿಷ್ಠ ಕುಡಿವ ನೀರು, ಸ್ವಚ್ಛತೆ, ಬೀದಿ ದೀಪದ ವ್ಯವಸ್ಥೆಯನ್ನಾದರೂ ಮಾಡಬೇಕು. ಇಲ್ಲದಿದ್ದರೆ ಆಡಳಿತ ನಿಷ್ಕ್ರಿಯಗೊಂಡಂತೆ. ಇದರ ಹೊಣೆ ಅಧ್ಯಕ್ಷರೆ ಹೊರಬೇಕಾಗುತ್ತದೆ ಎಂದು  ಛೇಡಿಸಿದರು.

ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಏಕವಚನ ಬಳಕೆ ನಡೆಯಿತು. ಇದರಿಂದ ಕುಪಿತರಾದ ಅಧ್ಯಕ್ಷ ಚಂದ್ರಶೇಖರ ಜಡಿಮರಳ, ಸಭ್ಯತೆ ಪ್ರದರ್ಶಿಸಬೇಕು. ಮಾತಿನಲ್ಲಿ ಹಿಡಿತ ಇರಬೇಕು. ಇನ್ನೊಬ್ಬರನ್ನು ಹೀಯಾಳಿಸುವುದು ತರವಲ್ಲ ಎಂದು ತಾಕೀತು ಮಾಡಿದರು.

ಸಭೆಗೆ ವಿಳಂಬವಾಗಿ ಆಗಮಿಸಿದ ಕಾಂಗ್ರೆಸ್ ಪಕ್ಷದ ಸದಸ್ಯ ಅಬ್ದುಲ್ ಅಲೀಂ ಗೋಗಿ ಮಾತನಾಡಿ, ಗುರುವಾರ ಶಾಲೆಗಾಗಿ ನಾವು ನೀವು ಕಾರ್ಯಕ್ರಮ ಇದೆ. ಇಂತಹ ಮಹತ್ವಪೂರ್ಣ ಕಾರ್ಯಕ್ರಮದ ದಿನ ಸಭೆ ಕರೆಯುವುದು ತಪ್ಪು. ಸಭೆ ಮುಂದೂಡಿ ಎಂದು ಆಗ್ರಹಿಸಿದರು. ಇದಕ್ಕೆ ಕಾಂಗ್ರೆಸ್ ಪಕ್ಷದ ಎಲ್ಲ ಸದಸ್ಯರು ಬೆಂಬಲಿಸಿದರು.

ಅಧ್ಯಕ್ಷರು ಸಭೆ ಮುಂದೂಡುವುದಿಲ್ಲ ಎಂದು ನಿರಾಕರಿಸಿದಾಗ, ಮತ್ತೆ  ಗದ್ದಲದ ವಾತಾವರಣ ನಿರ್ಮಾಣವಾಯಿತು. ಅಬ್ದುಲ್ ಅಲೀಂ ಗೋಗಿ ಸಭೆ ಬಹಿಷ್ಕರಿಸಿ ಹೊರನಡೆಯಲು   ಸಿದ್ಧರಾದರು.
 ಬಿಜೆಪಿ ಸದಸ್ಯ ನರಸಿಂಹಕಾಂತ ಪಂಚಮಗಿರಿ ಸಮಾಧಾನ ಪಡಿಸಿದರು.

ವರ್ಷದ ಹಿಂದೆ ಉದ್ಘಾಟಿಸಿದ ಸಾರ್ವಜನಿಕ ಶೌಚಾಲಯಗಳು ಕಾರ್ಯಾರಂಭ ಮಾಡಿಲ್ಲ. ಹಿಂದಿನ ಸಭೆಯ ನಿರ್ಣಯಗಳು ಕಾರ್ಯಾರೂಪಕ್ಕೆ ಬಂದಿಲ್ಲ. ಹೀಗಾಗಿ ಸಭೆ ನಡೆಯಲು ಬಿಡುವುದಿಲ್ಲ ಎಂದು ಪ್ರತಿಪಕ್ಷದ ಸಸದಸ್ಯರು ಪಟ್ಟು ಹಿಡಿದರು.

ಗದ್ದಲದ ನಡುವೆಯೆ 13ನೆ ಹಣಕಾಸು ಯೋಜನೆಯಲ್ಲಿ ರಸ್ತೆ, ಸೇತುವೆ ಹಾಗೂ ಎನ್.ಸಿ.ಪಿ. ಯೋಜನೆಗೆ ಅನುಮೋದನೆ ನೀಡಲಾಯಿತು. ಅವಶ್ಯವಿರುವ ವಾರ್ಡುಗಳಲ್ಲಿ ಬೋರವೆಲ್ ಹಾಕಿಸಿ ಕಿರು ನೀರು ಸರಬರಾಜು ಆರಂಭಿಸಲು ನಿರ್ಧರಿಸಲಾಯಿತು. ಹೈಮಾಸ್ಟ್ ದೀಪಗಳ ದುರಸ್ತಿ, ತುಕ್ಕು ಹಿಡಿದಿರುವ ವಿದ್ಯುತ್ ಕಂಬಗಳ ಬದಲಾವಣೆ ಮಾಡಲು ಸಭೆ ಒಪ್ಪಿಗೆ ಸೂಚಿಸಿತು.

ಇದೇ ಸಂದರ್ಭದಲ್ಲಿ ತಿಮ್ಮಾಪುರ ವಾರ್ಡಿನ ನಾಗರಿಕರು ಸಭೆಗೆ ನುಗ್ಗಿ 15 ದಿನಗಳಿಂದ ಕುಡಿಯಲು ನೀರಿಲ್ಲ. ಚರಂಡಿಗಳ ಸ್ವಚ್ಛತೆ ಮಾಡಿಲ್ಲ.

 ಅಧಿಕಾರದಲ್ಲಿ ಇರಲು ನೀವು ಯೋಗ್ಯರಲ್ಲ. ಕುರ್ಚಿ ಖಾಲಿ ಮಾಡಿ ಎಂದು ಹೀಯಾಳಿಸಿದ ಘಟನೆ ನಡೆಯಿತು. ಜನರನ್ನು ಸಮಾಧಾನ ಪಡಿಸಿದ ಅಧ್ಯಕ್ಷರು ಶೀಘ್ರದಲ್ಲಿ ಅವ್ಯವಸ್ಥೆ ಸರಿಪಡಿಸವುದಾಗಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.