ADVERTISEMENT

`ಏಸುಕ್ರಿಸ್ತ ಲೋಕಕ್ಕೆ ಬೆಳಕಾಗಿದ್ದಾನೆ'

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2012, 7:01 IST
Last Updated 5 ಡಿಸೆಂಬರ್ 2012, 7:01 IST

ಸುರಪುರ: ಏಸುಕ್ರಿಸ್ತ ಇಡೀ ಲೋಕಕ್ಕೆ ಬೆಳಕಾಗಿದ್ದಾನೆ. ವಿಶ್ವವನ್ನು ಒಂದು ಮಾಡಿದ ಜೆಸಸ್ ಸ್ವರ್ಗ ನಿರ್ಮಾಣವನ್ನೂ ಮಾಡಿದ್ದಾನೆ. ಮಾನವ ಜನಾಂಗದ ಸೃಷ್ಟಿಗೆ ಏಸು ಕಾರಣಕರ್ತನಾಗಿದ್ದಾನೆ. ದಯಾಮಯನೂ, ಕರುಣಾಮಯಿಯೂ ಆದ ಏಸು ಸಾಕ್ಷಾತ್ ದೇವರು. ಆತನ ಪ್ರಾರ್ಥನೆಯಿಂದ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಆನಂದ ವಿದ್ಯಾಲಯದ ಆಡಳಿತ ಮಂಡಳಿಯ ಉಪಾಧ್ಯಕ್ಷರೂ ಆದ ಮೆಥೋಡಿಸ್ಟ್ ಚರ್ಚ್‌ನ ಜಿಲ್ಲಾ ಮೇಲ್ವಿಚಾರಕ ರೆವ್ಹರೆಂಡ್ ನೆಲ್ಸನ್ ಸುಮಿತ್ರ ವಿವರಿಸಿದರು.

ಪಟ್ಟಣದ ಆನಂದ ವಿದ್ಯಾಲಯದಲ್ಲಿ ಸೋಮವಾರ ಏರ್ಪಡಿಸಿದ್ದ ಕ್ರಿಸಮಸ್ ಹಬ್ಬದ ಸಿದ್ಧತಾ ಕಾರ್ಯಕ್ರಮದ ನಿಮಿತ್ತ ಕ್ರಿಸ್‌ಮಸ್ ಕೇಕ್ ಕತ್ತರಿಸಿ ಮಾತನಾಡಿದರು.

ಡಿಸೆಂಬರ್ 25 ರಂದು ಕ್ರಿಸ್‌ಮಸ್ ಇದೆ. ವಿಶ್ವದಾದ್ಯಂತ ಮೂರು ತಿಂಗಳ ಮೊದಲೆ ಕ್ರಿಸ್‌ಮಸ್ ಆಗಮನದ ಸಂಭ್ರಮಾಚರಣೆ ಆಚರಿಸುತ್ತಾರೆ. ಇದರ ಅಂಗವಾಗಿ ಕ್ಯಾರಲ್ಸ್, ಕ್ರಿಸ್‌ಮಸ್ ನಾಟಕಗಳ ಪ್ರದರ್ಶನ, ಕ್ರಿಸ್‌ಮಸ್ ಭಜನೆ, ಪ್ರಾರ್ಥನೆಗಳನ್ನು ಕೈಗೊಳ್ಳಲಾಗುತ್ತದೆ. ಕಾರಣ ಎಲ್ಲರೂ ಈ ಕ್ರಿಸ್‌ಮಸ್ ದಿನಗಳನ್ನು ಶ್ರದ್ಧಾ, ಭಕ್ತಿಯಿಂದ ಆಚರಿಸಿ ಏಸುವಿನ ಕೃಪೆಗೆ ಪಾತ್ರರಾಗಬೇಕೆಂದು ಕರೆ ನೀಡಿದರು.

ಮೆಥೋಡಿಸ್ಟ್ ಚರ್ಚ್‌ನ ಕೋಶಾಧಿಕಾರಿ ಸಾಮ್ಯುವೆಲ್ ಮ್ಯಾಥ್ಯೂ ಮಾತನಾಡಿದರು. ಪ್ರಾಚಾರ್ಯೆ ಮಿಸ್ ಪ್ರೇಮಲತಾ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಸಭಾಪಾಲಕ ರೆವ್ಹರೆಂಡ್ ಪ್ರಕಾಶ ಹಂಚಿನಾಳ, ಪ್ರಧಾನ ಗುರು ಎ. ಜಾನ್‌ವೆಸ್ಲಿ ವೇದಿಕೆಯಲ್ಲಿದ್ದರು.
ಸುನಿಲಾ ಶಾಂತಕುಮಾರ ಸ್ವಾಗತಿಸಿ, ನಿರೂಪಿಸಿದರು. ಸುಜಾತಾ ಜಯಪ್ಪ ವೇದಪಾರಾಯಣ ಮಾಡಿದರು. ಮಹೇಶ ಜಾಗೀರದಾರ ವಂದಿಸಿದರು.

ಜ್ಞಾನಮಿತ್ರ, ಅನುರಾಧ, ವಿನೋದ ದೀವಟೆ, ನಿಂಗಪ್ಪ ಮಾಳೆಗಾರ, ರಮೇಶ ಬಿರಾದಾರ, ಅಮಿತಪಾಲ್, ಈರಣ್ಣ, ಭಾಗಣ್ಣ, ಶಾಂತಕುಮಾರಿ ಸಾಮ್ಯೂವೆಲ್, ಸುಧೀರ್, ಚಂದಮ್ಮ, ಸೌಮ್ಯ, ಯಶೋಧಾ, ರೇಶ್ಮಾ, ಜ್ಯೋತಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.