ADVERTISEMENT

ಕಂದಾಚಾರ ಖಂಡಿಸಿದ್ದ ಮಡಿವಾಳ ಮಾಚಿದೇವ

ಮಡಿವಾಳ ಮಾಚಿದೇವ ಜಯಂತಿ: ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ ಅಭಿಮತ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2019, 13:37 IST
Last Updated 2 ಫೆಬ್ರುವರಿ 2019, 13:37 IST
ಯಾದಗಿರಿಯ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ ಮಾತನಾಡಿದರು
ಯಾದಗಿರಿಯ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ ಮಾತನಾಡಿದರು   

ಯಾದಗಿರಿ: ‘12ನೇ ಶತಮಾನದಲ್ಲಿ ಸಮಾಜದಲ್ಲಿನ ಮೂಢನಂಬಿಕೆ, ಧಾರ್ಮಿಕ ಕಂದಾಚಾರಗಳನ್ನು ಖಂಡಿಸಿ, ತಿದ್ದುವ ಮೂಲಕ ಸಮಾಜಕ್ಕೆ ಸನ್ಮಾರ್ಗ ತೋರಿದ ಶರಣರಲ್ಲಿ ಮಡಿವಾಳ ಮಾಚಿದೇವ ಪ್ರಮುಖರಾಗಿದ್ದಾರೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ ಹೇಳಿದರು.

ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಶುಕ್ರವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಡಿವಾಳ ಮಾಚಿದೇವ ಜಯಂತ್ಯುತ್ಸವ ಸಮಿತಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಮಹಾನ್ ಶರಣರು ನಡೆಸಿದ ವಚನ ಚಳವಳಿಯು ಅದ್ಭುತ ಕಾರ್ಯವಾಗಿತ್ತು. ಮಡಿವಾಳ ಮಾಚಿದೇವ ಶರಣರ ಬಟ್ಟೆಗಳನ್ನು ಮಡಿ ಮಾಡುವ ಕಾರ್ಯ ಬಹಳ ನಿಷ್ಠೆಯಿಂದ ಮಾಡುತ್ತಿದ್ದರು. ಅವರ ಕಾರ್ಯ ನಿಷ್ಠೆಯನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಆಗ ಅಭಿವೃದ್ಧಿ ಹೊಂದಲು ಸಾಧ್ಯ’ ಎಂದರು.

ADVERTISEMENT

ಕೆ.ಆರ್.ನಾಡಗೌಡ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಎಸ್.ನಾಯಕ ಮಾತನಾಡಿ,‘ಮೇಲು-ಕೀಳು, ತುಳಿತಕ್ಕೆ ಒಳಗಾದ ಸಮಾಜವನ್ನು ತಮ್ಮ ವಚನಗಳ ಮೂಲಕ ತಿದ್ದಿ, ಸಮಾಜವನ್ನು ಎತ್ತಿ ಹಿಡಿದ 12ನೇ ಶತಮಾನ ಸುವರ್ಣಾಕ್ಷರಗಳಿಂದ ಬರೆದಿಡುವ ಕಾಲವಾಗಿತ್ತು. ಕ್ರಾಂತಿಕಾರಿ ಶರಣ ಮಡಿವಾಳ ಮಾಚಿದೇವರು ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ದೇವರ ಹಿಪ್ಪರಗಿಯ ಪರ್ವತಯ್ಯ ಮತ್ತು ಸುಜ್ಞಾನಮ್ಮ ದಂಪತಿಗೆ ಜನಿಸಿದರು ಎಂಬುದಾಗಿ ಇತಿಹಾಸದಿಂದ ತಿಳಿದು ಬರುತ್ತದೆ’ ಎಂದರು.

‘ವಚನಗಳ ರಕ್ಷಕನಾದ ಮಡಿವಾಳ ಮಾಚಿದೇವರು ಅನುಭವ ಮಂಟಪಕ್ಕೆ ಬರುವ ಶರಣರನ್ನು ಬರಮಾಡಿಕೊಳ್ಳುವ ಕಾಯಕವು ಇಂದಿನ ವಿದೇಶಾಂಗ, ರಕ್ಷಣಾ ಸಚಿವರ ಕಾಯಕದಂತೆ ಇತ್ತು. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವ ತತ್ವ ವಚನ ಚಳವಳಿಯ ಮೂಲಕ ತಿಳಿಸಿದರು. ಅಂತಹ ಶರಣರ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ’ ಎಂದರು.

‘ದೇವರಿಗೆ ಬಲಿಕೊಡುವ ಕಂದಾಚಾರದ ಆಚರಣೆಗಳನ್ನು ಖಂಡಿಸಿದರು. ಸತ್ಯ ನಿತ್ಯ ಅಳವಡಿಸಿಕೊಂಡಾಗ ಸಮಾಜ ಸುಧಾರಣೆ ಸಾಧ್ಯ ಎಂದ ಅವರು ಅರಸುತನ ಮೇಲಲ್ಲ; ಅಗಸತನ ಕೀಳಲ್ಲ ಎಂದು ಸಮಾಜದಲ್ಲಿನ ಗೊಂದಲಗಳಿಗೆ ಕಿವಿಗೊಡದೆ, ವೈಚಾರಿಕತೆಯ ಹಿನ್ನೆಲೆಯಲ್ಲಿ ಸಮಾಜವನ್ನು ಶುಚಿಮಾಡುವ ಕಾಯಕದ ಜತೆಗೆ ಅನುಭವ ಮಂಟಪದ ಶರಣರ ಬಟ್ಟೆಗಳನ್ನು ಮಡಿ ಮಾಡಿ ಕೊಡುತ್ತಿದ್ದರು. ನೇರನುಡಿಯ ವ್ಯಕ್ತಿತ್ವದ ಮಡಿವಾಳ ಮಾಚಿದೇವ ಬಸವಣ್ಣನವರನ್ನೇ ಪ್ರಶ್ನೆ ಮಾಡುತ್ತಿದ್ದರು. ಪ್ರಶ್ನೆ ಮಾಡುವುದರ ಮೂಲಕ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ನಂಬಿದ್ದ ಅವರು ಕಲಿದೇವರ ದೇವಾ ಎಂಬ ಅಂಕಿತನಾಮದಿಂದ ಹಲವು ವಚನಗಳನ್ನು ರಚಿಸಿದ್ದಾರೆ’ ಎಂದರು.

ಮಡಿವಾಳ ಮಾಚಿದೇವರ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಮಹಾದೇವಪ್ಪ ಯಲಸತ್ತಿ, ಮಡಿವಾಳ ಸಮಾಜದ ಜಿಲ್ಲಾ ಅಧ್ಯಕ್ಷ ಮಡಿವಾಳಪ್ಪ ಬಿಜಾಸ್ಪೂರ ಸೇರಿದಂತೆ ಸಮಾಜದ ಮುಖಂಡರು, ಸಾರ್ವಜನಿಕರು ಭಾಗವಹಿಸಿದ್ದರು.

ರಾಮಸಮುದ್ರದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಸಂಗೀತ ಶಿಕ್ಷಕ ಶರಣಬಸವ ವಠಾರ ಮತ್ತು ತಂಡದವರು ನಾಡಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಸ್ವಾಗತಿಸಿದರು. ಉಪನ್ಯಾಸಕ ಗುರುಪ್ರಸಾದ ವೈದ್ಯ ಕಾರ್ಯ ನಿರ್ವನಿರೂಪಿಸಿದರು.

ಕಾರ್ಯಕ್ರಮಕ್ಕೂ ಮೊದಲು ನಗರದ ಪದವಿ ಮಹಾವಿದ್ಯಾಲಯದಿಂದ ವಿದ್ಯಾಮಂಗಲ ಕಾರ್ಯಾಲಯದವರೆಗೆ ಮಡಿವಾಳ ಮಾಚಿದೇವರ ಭಾವಚಿತ್ರದ ಮೆರವಣಿಗೆ ನಡೆಯಿತು.

*ಮಡಿವಾಳ ಮಾಚಿದೇವ ಶರಣರ ಬಟ್ಟೆಗಳನ್ನು ಮಡಿ ಮಾಡುವ ಕಾರ್ಯ ಬಹಳ ನಿಷ್ಠೆಯಿಂದ ಮಾಡುತ್ತಿದ್ದರು. ಅವರ ಕಾರ್ಯ ನಿಷ್ಠೆ ಎಲ್ಲರಿಗೂ ಮಾದರಿ.
ಪ್ರಕಾಶ್ ಜಿ.ರಜಪೂತ,ಹೆಚ್ಚುವರಿ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.