ADVERTISEMENT

ಕನ್ನಡ ಭವನವೂ ಇಲ್ಲ: ರಂಗಮಂದಿರವೂ ಆಗಲಿಲ್ಲ

ಚಿದಂಬರಪ್ರಸಾದ್
Published 2 ಸೆಪ್ಟೆಂಬರ್ 2013, 8:43 IST
Last Updated 2 ಸೆಪ್ಟೆಂಬರ್ 2013, 8:43 IST

ಯಾದಗಿರಿ: ಜಿಲ್ಲೆಯಾಗಿ ನಾಲ್ಕು ವರ್ಷಗಳು ಕಳೆದಿವೆ. ಇನ್ನೂ ಕನ್ನಡದ ಕಾರ್ಯಕ್ರಮಗಳಿಗೆ ಒಂದೇ ಒಂದು ಸೂರು ಸಿಕ್ಕಿಲ್ಲ. ಕನ್ನಡ ಸಾಹಿತ್ಯ ಪರಿಷತ್ ಭವನವಾಗಲಿ, ಕನ್ನಡ ಭವನವಾಗಲಿ, ರಂಗಮಂದಿರವಾಗಲಿ ತಲೆ ಎತ್ತಲೇ ಇಲ್ಲ.

ಇದು ಆಚ್ಚರಿಯ ಮೂಡಿಸುವ ಸಂಗತಿಯಾದರೂ ಸತ್ಯ. ಯಾದಗಿರಿಯಲ್ಲಿ ಕನ್ನಡದ ಕಾರ್ಯಕ್ರಮಗಳು ಖಾಸಗಿ ಕಲ್ಯಾಣ ಮಂಟಪಗಳಲ್ಲಿಯೇ ನಡೆಯಬೇಕಾಗಿದೆ.

ಹೀಗಾಗಿ ಕನ್ನಡ ಸೇವೆ ಮಾಡುವ ಸಂಘಟನೆಗಳೂ ಪರದಾಡುವಂತಾಗಿದೆ. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಅಸ್ತಿತ್ವಕ್ಕೆ ಬಂದು ಒಂದೂವರೆ ವರ್ಷವಾದರೂ, ಈಗಲೂ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯೂ ಹಿಂದಿ ಪ್ರಚಾರ ಸಭೆಯ ಒಂದು ಕೋಣೆಯಲ್ಲಿ ನಡೆಯುತ್ತಿದೆ. ಎಂ.ಕೆ. ಬೀರನೂರ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಭವನ ನಿರ್ಮಾಣಕ್ಕಾಗಿ ನಗರಸಭೆಯಿಂದ ನಿವೇಶನ ಮಂಜೂರು ಮಾಡಿದೆ.

ತಾಲ್ಲೂಕು ಘಟಕವೂ ಈ ಜಾಗದಲ್ಲಿ ಭವನ ನಿರ್ಮಾಣಕ್ಕಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದೆ.
ಪ್ರಾಧಿಕಾರದಿಂದ ರೂ.15 ಲಕ್ಷ ಅನುದಾನ ಬಿಡುಗಡೆ ಆಗಿದೆ. ಆದರೆ ಕೆಲ ತಪ್ಪು ಕಲ್ಪನೆಗಳಿಂದಾಗಿ ಈ ಕಾಮಗಾರಿಯೂ ನೆನಗುದಿಗೆ ಬಿದ್ದಿದೆ.

ಇದರ ಜೊತೆಗೆ ಜಿಲ್ಲಾ ಕೇಂದ್ರದಲ್ಲಿ ರಂಗಮಂದಿರ ನಿಮಾಣಕ್ಕಾಗಿ ಸರ್ಕಾರದಿಂದ ರೂ.60 ಲಕ್ಷ ಅನುದಾನ ಬಿಡುಗಡೆ ಆಗಿದೆ. ರಂಗಮಂದಿರ ನಿರ್ಮಾಣಕ್ಕೆ ನಗರಸಭೆ ನೀಡಿದ್ದ ನಿವೇಶನ ಬಗ್ಗೆ ನ್ಯಾಯಾಲಯದಿಂದ ತಡೆಯಾಜ್ಞೆ ಇತ್ತು. ಆದರೆ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಈ ತಡೆಯಾಜ್ಞೆ ತೆರವುಗೊಂಡಿದೆ. ಇನ್ನಾದರೂ ರಂಗಮಂದಿರದ ಕಾಮಗಾರಿ ಆರಂಭಕ್ಕೆ ಮುಹೂರ್ತ ಕೂಡಿಬರುತ್ತಿಲ್ಲ ಎಂಬುದು ಕನ್ನಡ ಅಭಿಮಾನಿಗಳ ಬೇಸರ.

ಕಲ್ಯಾಣ ಮಂಟಪವೇ ಆಸರೆ: ಜಿಲ್ಲಾ ಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸಲು ಸಾಹಿತ್ಯ ಸಂಘಟನೆಗಳು ಈಗಲೂ ಖಾಸಗಿ ಕಲ್ಯಾಣ ಮಂಟಪಗಳನ್ನೇ ಅವಲಂಬಿಸಬೇಕಾಗಿದೆ. ಮೊದಲೇ ಅನುದಾನದ ಮಿತಿಯಿಂದಾಗಿ ಕಾರ್ಯಕ್ರಮ ನಡೆಸುವುದೇ ಕಷ್ಟಕರವಾಗಿದ್ದು, ಅದರಲ್ಲಿ ಹೆಚ್ಚಿನ ಹಣವನ್ನು ಕಲ್ಯಾಣ ಮಂಟಪಗಳ ಬಾಡಿಗೆಗೆ ನೀಡಬೇಕಾಗಿರುವುದು ಸಂಘಟನೆಗಳಿಗೆ ನುಂಗಲಾರದ ತುತ್ತಾಗಿದೆ.

ಜಿಲ್ಲೆಯಾದ ನಂತರ ವಿವಿಧ ಸಂಘಟನೆಗಳು ಕನ್ನಡದ ಕಾರ್ಯಕ್ರಮಗಳನ್ನು ಆಯೋಜಿಸಿವೆ. ಆದರೆ ಎಲ್ಲವೂ ಕಲ್ಯಾಣ ಮಂಟಪಗಳಲ್ಲಿಯೇ ನಡೆದಿವೆ. ಕನ್ನಡಕ್ಕಾಗಿಯೇ ಒಂದು ಭವನದ ಕೊರತೆ ಮಾತ್ರ ಸದಾ ಕಾಡುತ್ತಲೇ ಇದೆ.

ಮೊದಲೇ ಗಡಿ ಜಿಲ್ಲೆಯಾಗಿರುವ ಯಾದಗಿರಿಯಲ್ಲಿ ಕನ್ನಡದ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತಗಳು ಈ ನಿಟ್ಟಿನಲ್ಲಿ ಹೆಚ್ಚು ಕಾರ್ಯೋನ್ಮುಖವಾಗಬೇಕು. ಕನ್ನಡ ಭವನವಾಗಲಿ, ಸಾಹಿತ್ಯ ಭವನವಾಗಲಿ, ರಂಗಮಂದಿರವಾಗಲಿ, ಶೀಘ್ರ ತಲೆ ಎತ್ತಬೇಕು ಎಂಬುದು ಸಾಹಿತಿಗಳ ಮನವಿ.

`ಅನುದಾನ ಮಂಜೂರು'
ಯಾದಗಿರಿಯ ತಾಲ್ಲೂಕು ಪಂಚಾಯಿತಿ ಬಳಿ ಸಾಹಿತ್ಯ ಪರಿಷತ್ತಿಗೆ ನಿವೇಶನ ಮಂಜೂರಾಗಿದೆ. ಇಲ್ಲಿ ಭವನ ನಿರ್ಮಾಣಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ರೂ.15 ಲಕ್ಷ ಬಿಡುಗಡೆಯಾಗಿದ್ದು, ಜಿಲ್ಲಾಡಳಿತಕ್ಕೆ ಬಂದಿದೆ.

ಆದರೆ ರಂಗಮಂದಿರದ ನಿವೇಶನದ ಕುರಿತಾದ ಗೊಂದಲಗಳಿಂದಾಗಿ ಜಿಲ್ಲಾಡಳಿತದಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ತಪ್ಪು ಮಾಹಿತಿ ಹೋಗಿದೆ. ಈ ಕುರಿತು ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರನ್ನು ಭೇಟಿ ಮಾಡಿ ಚರ್ಚಿಸಲಾಗಿದೆ. ಕೂಡಲೇ ಭವನ ನಿರ್ಮಾಣ ಮಾಡಿಕೊಳ್ಳಲು ಸೂಚಿಸಿದ್ದಾರೆ. ಅದರಂತೆ ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಲಾಗಿದ್ದು, ಆದಷ್ಟು ಶೀಘ್ರ ಈ ನಿವೇಶನದಲ್ಲಿ ಭವನ ನಿರ್ಮಾಣ ಆಗಲಿದೆ.
-ಸಿದ್ಧಪ್ಪ ಹೊಟ್ಟಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಅಧ್ಯಕ್ಷ

`ರಂಗ ಮಂದಿರ ಅವಶ್ಯಕ'
ಯಾದಗಿರಿಯಲ್ಲಿ ರಂಗಮಂದಿರ ನಿರ್ಮಾಣ ಅತ್ಯಂತ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಸಾಹಿತಿಗಳು, ಕಲಾವಿದರು ಹೆಚ್ಚಿನ ಒತ್ತಡ ಹೇರುವ ಅವಶ್ಯಕತೆ ಇದೆ. ಈಗಾಗಲೇ ಈ ಕುರಿತು ಜಿಲ್ಲಾಡಳಿತವೂ ಪೂರಕವಾಗಿ ಸ್ಪಂದಿಸಿದೆ.

ರಂಗಮಂದಿರ ನಿರ್ಮಾಣಕ್ಕೆ ರೂ.60 ಲಕ್ಷ ಅನುದಾನವೂ ಲಭ್ಯವಾಗಿದೆ. ನ್ಯಾಯಾಲಯದ ತಡೆಯಾಜ್ಞೆಯೂ ತೆರವಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಒಟ್ಟಾಗಿ ರಂಗಮಂದಿರ ನಿರ್ಮಾಣಕ್ಕೆ ಮುಂದಾಗಲು ಜಿಲ್ಲಾಡಳಿತದ ಮೇಲೆ ಒತ್ತಡ ಹೇರಬೇಕಾಗಿದೆ.
-ವೆಂಕಟರಾವ ಕುಲಕರ್ಣಿ, ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.