ಕೆಂಭಾವಿ: ಪಟ್ಟಣ ಸೇರಿದಂತೆ ಸುತ್ತಲಿನ ಅನೇಕ ಗ್ರಾಮಗಳಲ್ಲಿ ಜನ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವುದು ಒಂದೆಡೆಯಾದರೆ ಸಮೀಪದ ಕರಡಕಲ್ ಗ್ರಾಮದ ಜನತೆ ಆರ್ಸೆನಿಕ್ ನೀರನ್ನೇ ಕುಡಿಯುತ್ತಿದ್ದಾರೆ.
ಆರ್ಸೆನಿಕ್ ಯುಕ್ತ ನೀರನ್ನು ಬಳಸದಂತೆ ಕರಡಕಲ್, ಪರಸನಹಳ್ಳಿ, ಹೆಗ್ಗಣದೊಡ್ಡಿ, ಮಾವಿನಮಟ್ಟಿ ಗ್ರಾಮಗಳ ಕೊಳವೆಬಾವಿಗಳಿಗೆ ಕೆಂಪುಬಣ್ಣ ಬಡಿದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಆದರೆ, ಗ್ರಾಮಸ್ಥರಿಗೆ ಪರ್ಯಾಯ ನೀರಿನ ವ್ಯವಸ್ಥೆ ಮಾಡದೇ ಜಿಲ್ಲಾಡಳಿತ ಇಂತಹ ನಿರ್ಧಾರ ತೆಗೆದುಕೊಂಡಿರುವುದರಿಂದ ಜನ ಅನಿವಾರ್ಯವಾಗಿ ರಾಸಾಯನಿಕ ಯುಕ್ತ ನೀರನ್ನೇ ಸೇವಿಸಬೇಕಾಗಿದೆ.
ಸುರಪುರ ತಾಲ್ಲೂಕಿನ ಒಂಬತ್ತಕ್ಕೂ ಹೆಚ್ಚು ಗ್ರಾಮಗಳ ಕುಡಿಯುವ ನೀರಿನಲ್ಲಿ ಅರ್ಸೆನಿಕ್ ಅಂಶ ಹೆಚ್ಚಾಗಿದ್ದು, ಈ ಗ್ರಾಮಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಸರ್ಕಾರ ಜಿಲ್ಲಾಡಳಿತಕ್ಕೆ ಸೂಚನೆ ನೀಡಿತ್ತು. ಆರು ತಿಂಗಳು ಗತಿಸಿದರೂ ಜಿಲ್ಲಾ ಮಟ್ಟದ ಅಧಿಕಾರಿಗಳು ರಾಸಾಯನಿಕ ಅಂಶ ಹೆಚ್ಚಾಗಿರುವ ಕೊಳವೆಬಾವಿ ಹಾಗೂ ಬಾವಿಗಳಿಗೆ ಕೆಂಪು ಬಣ್ಣ ಬಳಿದದ್ದು ಬಿಟ್ಟರೆ ಯಾವುದೇ ಪರ್ಯಾಯ ವ್ಯವಸ್ಥೆ ಮಾಡಿಲ್ಲ ಎನ್ನುತ್ತಾರೆ ಜೆಡಿಎಸ್ ಮುಖಂಡ ವಿರೂಪಾಕ್ಷಿ ಕರಡಕಲ್.
ಕಿರದಳ್ಳಿ ತಾಂಡಾದಲ್ಲಿ ಆರ್ಸೆನಿಕ್ ನೀರು ಸೇವಿಸಿ ಅನೇಕರು ಚರ್ಮ ಕ್ಯಾನ್ಸರ್ದಿಂದ ಬಳಲುತ್ತಿದ್ದಾರೆ ಎಂಬ ಹಿನ್ನೆಲೆಯಲ್ಲಿ ಜೈನಾಪುರ ಹಾಗೂ ಕಿರದಳ್ಳಿ ತಾಂಡಾದಲ್ಲಿ ನೀರು ಶುದ್ಧೀಕರಣ ಘಟಕ ತೆರೆಯಲಾಗಿದೆ. ಇದನ್ನು ಹೊರತುಪಡಿಸಿ ತಾಲ್ಲೂಕಿನ ಎಲ್ಲಿಯೂ ನೀರೂ ಶುದ್ಧೀಕರಣ ಘಟಕಗಳು ಪ್ರಾರಂಭಿಸಿಲ್ಲ. ಹೀಗಾಗಿ ಇಲ್ಲಿಯ ಜನತೆ ಇಂದಿಗೂ ವಿಷಯುಕ್ತ ನೀರನ್ನೆ ಸೇವಿಸುವಂತಾಗಿದೆ.
ಗ್ರಾಮದಲ್ಲಿ ನೀರಿನ ಕೊರತೆ ಇಲ್ಲ ಆದರೆ, ನೀರಿನಲ್ಲಿ ಆರ್ಸೆನಿಕ್ ರಾಸಾಯನಿಕ ವಸ್ತು ಹೆಚ್ಚಿನ ಪ್ರಮಾಣದಲ್ಲಿದ್ದು, ಕೊಳವೆಬಾವಿಗಳಿಗೆ ಕೆಂಪುಬಣ್ಣ ಬಡಿದು ನೀರನ್ನು ಬಳಸದಂತೆ ಸೂಚಿಸಿದ್ದಾರೆ. ಅಲ್ಲದೇ ಆರು ತಿಂಗಳ ಹಿಂದೆ ಕೆಲ ದಿನಗಳ ಕಾಲ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿದರೂ, ಅಲ್ಲಿಂದ ಇಲ್ಲಿಯವರೆಗೆ ಯಾವ ಅಧಿಕಾರಿಗಳೂ ಬಂದಿಲ್ಲ. ಹೀಗಾಗಿ ನಾವು ಅದೇ ಕೊಳವೆ ಬಾವಿಯ ನೀರನ್ನೇ ಸೇವಿಸುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ಎಂಥಹ ರೋಗ ಬರುತ್ತದೆ ಎಂಬ ಆತಂಕ ಕಾಡುತ್ತಿದೆ. ಆದರೂ ಅನಿವಾರ್ಯವಾಗಿದೆ. ನಮ್ಮ ಮಕ್ಕಳಿಗೆ ಈ ನೀರನ್ನು ಕುಡಿಸುವಾಗ ಮನ ಕುಲುಕುತ್ತದೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ನಮ್ಮ ಗ್ರಾಮದಲ್ಲಿ ನೀರು ಶುದ್ಧೀಕರಣ ಘಟಕ ಸ್ಥಾಪಿಸಲಾಗಿದೆ. ಆದರೆ, ಅದು ಇದುವರೆಗೂ ಪ್ರಾರಂಭಿಸಿಲ್ಲ. ಹೀಗಾಗಿ ಅನಿವಾರ್ಯವಾಗಿ ನಾವು ವಿಷಯುಕ್ತ ನೀರನ್ನೇ ಕುಡಿಯುತ್ತಿದ್ದೇವೆ. ಈ ಬಗ್ಗೆ ಅಧಿಕಾರಿಗಳಿಗೆ ಹೇಳಿದರೂ ಹಾರಿಕೆ ಉತ್ತರ ನೀಡುತ್ತಿದ್ದಾರೆ. ವಿದ್ಯುತ್ ಇಲಾಖೆಯವರ ಮೇಲೆ ಹಾಕಿ ಜಾರಿಕೊಳ್ಳುತ್ತಿದ್ದಾರೆ, ಇದರಿಂದ ಅನಿವಾಯರ್ವಾಗಿ ಗ್ರಾಮದ ಜನತೆ ಅದೇ ನೀರನ್ನು ಕುಡಿಯುತ್ತಿದ್ದೇವೆ ಎಂದು ಗ್ರಾಮ ಪಂಚಾಯತಿ ಸದಸ್ಯ ಭೀಮರಾವ ಕುಲಕರ್ಣಿ ಹೇಳುತ್ತಾರೆ.
‘ನೀರಿನಲ್ಲಿ ಆರ್ಸೆನಿಕ್ ಅಂಶ ಇರುವ ಗ್ರಾಮಗಳಾದ ಕಿರದಳ್ಳಿ ತಾಂಡಾ, ಜೈನಾಪುರ, ಗೊಡ್ರಿಹಾಳ ಗ್ರಾಮಗಳಲ್ಲಿ ನೀರು ಶುದ್ಧೀಕರಣ ಘಟಕ ಪ್ರಾರಂಭಿಸಲಾಗಿದೆ, ಪರಸನಹಳ್ಳಿ, ಹೆಗ್ಗಣಡೊಡ್ಡಿ ಗ್ರಾಮಗಲಲ್ಲಿ ಕಾಮಗಾರಿ ಪೂರ್ಣಗೊಂಡಿದೆ ವಿದ್ಯುತ್ ಸಮಸ್ಯೆಯಿಂದ ಪ್ರಾರಂಭಿಸಿಲ್ಲ. ಕೆಲವೆಡೆ ಸ್ಥಳದ ಅಭಾವದಿಂದಾಗಿ ನೀರು ಶುದ್ಧೀಕರಣ ಘಟಕ ಸ್ಥಾಪಿಸಲು ಅಡಚಣೆಯಾಗುತ್ತಿದೆ ಎಂದು ತಾಲ್ಲೂಕು ಪಂಚಾಯಿತಿ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಬಸಯ್ಯ ಹಿರೇಮಠ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.