ADVERTISEMENT

ಕಾಡಿನ ತಪ್ಪಲಲ್ಲಿ ಅರಳಿದ ಕಸೂತಿ ಕಲೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2012, 11:00 IST
Last Updated 15 ಜನವರಿ 2012, 11:00 IST

ಲಂಬಾಣಿಗರು ದುಡಿವ ಜನ ಅಥವಾ ಕಾಯಕ ಜೀವಿಗಳು. ಬಡತನ-ಸಿರಿತನ ಏನೇ ಬಂದರೂ, ಎಲ್ಲಿಯೇ ಜೀವಿಸಿದರೂ ಇವರು ಭಾಷೆ ಹಾಗೂ ಸಂಸ್ಕೃತಿಯಿಂದ ವಿಮುಖರಾಗಿಲ್ಲ. ಭಾರತದ ವಿವಿಧ ಭಾಗಗಳಲ್ಲಿ ಹಂಚಿ ಹೋಗಿರುವ ಲಂಬಾಣಿ ಸಮುದಾಯದವರು ಭಾಷೆ ಹಾಗೂ ಸಂಸ್ಕೃತಿ ಮೂಲಕ ಬಹುಬೇಗ ಗುರುತಿಸಲ್ಪಡುತ್ತಾರೆ. 21ನೇ ಶತಮಾನದ ಆಧುನಿಕತೆ ಪ್ರಭಾವದಲ್ಲೂ ಅವರ ದೇಸಿ ಸಾಂಸ್ಕೃತಿಕ ಕಾಳಜಿ ಅನನ್ಯ.

ಈಗಲೂ ಅವರ ಮದುವೆಯಲ್ಲಿ ತವರು ಮನೆಯವರು ನವ ವಧುವಿಗೆ ಒಂದು ಜೊತೆ ಲಂಬಾಣಿ ಉಡುಪು ನೀಡುವುದು ಕಡ್ಡಾಯ. ಹಿಂದಿನ ಕಾಲದಲ್ಲಿ ಹತ್ತಾರು ಉಡುಪುಗಳು ನೀಡಲಾಗುತ್ತಿತ್ತು.

ಈ ಉಡುಪು ತಯಾರಿಸುವುದೂ ನಯನಾಜೂಕು ಕೆಲಸ. ತರಬೇತಿ ಇಲ್ಲದೇ ಹಿರಿಯರನ್ನು ನೋಡಿ ಕಲಿಯುತ್ತಾರೆ. ಬಾಳ ದೋಣಿ ಮುನ್ನಡೆಸಲು ಉಡುಪು ತಯಾರಿಕೆಯೇ ಆಧಾರವಾಗಿಸಿಕೊಂಡ ಮಹಿಳೆಯರೂ ಇಲ್ಲಿದ್ದಾರೆ.   

ದಿನ ಬೆಳಗಾದರೆ ವಯೋವೃದ್ಧ ಮಹಿಳೆಯರು ಉಡುಪು ತಯಾರಿಸುವ ಕೆಲಸದಲ್ಲಿ ತೊಡಗಿರುವುದು ಕಾಣಿಸುತ್ತದೆ. ಇಳಿ ವಯಸ್ಸಿನಲ್ಲಿಯೂ ಸೂಜಿ ದಾರ ಹಿಡಿದು ಮುತ್ತು, ಮಣಿ, ಕವಡೆ, ಮಿಂಚುವ ಲೈಸ್, ಹಳೆ ನಾಣ್ಯ, ರಿಂಗ್ ಹಾಗೂ ವೃತ್ತಾಕಾರ ಮತ್ತು ಚೌಕಾಕಾರದ ಗಾಜಿನ ತುಂಡುಗಳನ್ನು ಸರತಿಯಂತೆ ಕಸೂತಿ ಕೆಲಸದ ಮೂಲಕ ಬಟ್ಟೆಗೆ ಜೋಡಿಸಿ ಉಡುಪು ಸಿದ್ಧಪಡಿಸುತ್ತಾರೆ.

ಕೊಂಚಾವರಂ ಕಾಡಿನ ತಪ್ಪಲಿನಲ್ಲಿ ಆಂಧ್ರದ ಗಡಿಗೆ ಹೊಂದಿಕೊಂಡ ಗುಲ್ಬರ್ಗ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಕಟ್ಟಕಡೆಯ ಗ್ರಾಮ ಸಂಗಾಪುರದಲ್ಲಿ `ಶ್ರೀ ಮರಿಯಮ್ಮ ಸ್ವಸಹಾಯ ಸಂಘ~ದ ರೂಪ್ಲಿಬಾಯಿ ಅಂಬ್ರು ರಾಠೋಡ್, ಚೌಳಿಬಾಯಿ ಲಾಲು ರಾಠೋಡ್, ಜಮಣಿಬಾಯಿ ಖೀರು ಜಾಧವ್, ಹೀರಾಬಾಯಿ ನಾಣು ಜಾಧವ್ ಮತ್ತು ದೇವಿಬಾಯಿ ಲಕ್ಷ್ಮಣ ಜಾಧವ್ ಮತ್ತು ಸಂಗಡಿಗರು ಹಲವಾರು ವರ್ಷಗಳಿಂದ ಉತ್ಕೃಷ್ಟ ದರ್ಜೆಯ ಲಂಬಾಣಿ ಉಡುಪು ತಯಾರಿಸುತ್ತಿದ್ದಾರೆ.

ಇಲ್ಲಿನ ಹಲವು ಬಡ, ಅನಕ್ಷರಸ್ಥ ಲಂಬಾಣಿಗರಿಗೆ ಕೃಷಿಯ ಜತೆಗೆ ಕಸೂತಿ ಕಲೆಯೇ ಇವರ ಜೀವನಾಧಾರ. 
ಲಂಬಾಣಿ ಸ್ತ್ರೀಯರ ಉಡುಪುಗಳಿಗೆ ವಿಜಾಪುರ ಪ್ರಸಿದ್ಧ. ಅವುಗಳಿಗಿಂತಲೂ ಉತ್ತಮ ಗುಣಮಟ್ಟದ ಆಕರ್ಷಕ ಉಡುಪು ತಯಾರಿಸುವುದು ಸಂಗಾಪುರದ ಬಡ ಮಹಿಳೆಯರ ವಿಶೇಷ. ಹೀಗಾಗಿ ಇವರಿಗೆ ಸರ್ಕಾರ ಸೂಕ್ತ ನೆರವು ನೀಡಬೇಕು ಎನ್ನುತ್ತಾರೆ, ಅಖಿಲ ಭಾರತ ಬಂಜಾರಾ ಸೇವಾ ಸಂಘದ ತಾಲ್ಲೂಕು ಅಧ್ಯಕ್ಷ ರಾಮಶೆಟ್ಟಿ ಪವಾರ್.

ಬಟ್ಟೆ ಹಾಗೂ ಅಗತ್ಯವಾದ ಅಲಂಕಾರಿಕ ಸಾಮಗ್ರಿಗಳನ್ನು ತಂದು ಕೊಟ್ಟರೆ 300ರಿಂದ 400 ರೂಪಾಯಿಗೆ ಒಬ್ಬ ಮಹಿಳೆ ಧರಿಸಬಹುದಾದ ಎಲ್ಲ ಉಡುಪುಗಳನ್ನು 10-15 ದಿನಗಳಲ್ಲಿ ತಯಾರಿಸಿ ಕೊಡುತ್ತಾರೆ. ಸಾಮಾನ್ಯ ಮಾರುಕಟ್ಟೆ ದರದಲ್ಲಿ ಇದು ಸಾವಿರಕ್ಕಿಂತಲೂ ಹೆಚ್ಚು ಬೆಲೆ. ಸಿದ್ಧ ಉಡುಪುಗಳೂ ಇವೆ. ಹಿಂದೆ ಸಿನಿಮಾ ಕಲಾವಿದರು ಭಾಂಡೆ ಸಾಮಾನು ನೀಡಿ ಅವುಗಳನ್ನು ಕೊಂಡೊಯ್ದಿದ್ದರು.  ಹಿಂದೆ ಹೈದರಾಬಾದ್‌ನ ವ್ಯಕ್ತಿಯೊಬ್ಬರು ಬಂದು ಸಿದ್ಧ ಉಡುಪು ಖರೀದಿಸುತ್ತಿದ್ದರು. ಈಗ ಅವರೂ ಬರುತ್ತಿಲ್ಲ ಎಂದು ಲಕ್ಷ್ಮಣ ನಾಯಕ್ ನೆನೆಪಿಸುತ್ತಾರೆ.

ಕಾಚಳಿ (ಕುಪ್ಪಸ), ಘಾಗ್ರಾ (ಲಂಗ), ಘಾಲಾ (ಸಿಂಬಿ), ಗೂಂಗೂಟ್ (ಓಣಿ), ಕೊತಳಿ (ಎಲೆ ಚೀಲ), ಬಸ್ತಾ (ಕೈಚೀಲ) ದರ್ತಿ (ದೇವರಿಗಾಗಿ ಹಾಸುವ ವಸ್ತ್ರ) ಇವರು ತಯಾರಿಸಿ ಕೊಡುತ್ತಾರೆ. ಇವರು ತಯಾರಿಸಿದ  ಉಡುಪುಗಳು ಸಿನಿಮಾದಲ್ಲೂ ಬಳಕೆಯಾಗಿವೆ.

ಹೈದರಾಬಾದಿನಿಂದ ಉಡುಪುಗಳಿಗೆ ಬೇಕಾಗುವ ವಸ್ತು (ಸಾಮಗ್ರಿ) ಖರೀದಿಸಿ ತಂದು ಉಡುಪು ಸಿದ್ಧಪಡಿಸುತ್ತಾರೆ. ಬಾಳಿನ ಮುಸ್ಸಂಜೆಯಲ್ಲಿರುವ ಇವರು ಇಂದಿಗೂ ತಮ್ಮ ಉಡುಪುಗಳಿಗಾಗಿ ಬೇರೆಯವರತ್ತ ದೃಷ್ಟಿ ಬೀರಿಲ್ಲ. ತಮ್ಮ ಜೀವನದುದ್ದಕ್ಕೂ ತಾವೇ ತಯಾರಿಸಿದ ಉಡುಪು ಧರಿಸಿದ ಹಿರಿಮೆ ಇವರದ್ದು. ಜತೆಗೆ ನೂರಾರು ಹೆಂಗಳೆಯರಿಗೆ ಉಡುಪು ತಯಾರಿಸಿಕೊಟ್ಟ ಖ್ಯಾತಿಯೂ ಇದೆ.
(ಆಸಕ್ತರು ಮೊ 09542523300 ಸಂಪರ್ಕಿಸಬಹುದು).
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.