ADVERTISEMENT

ಕಾರ್ಮಿಕ ಇಲಾಖೆ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 8:20 IST
Last Updated 2 ಜನವರಿ 2012, 8:20 IST

ಸುರಪುರ: ಪ್ರತಿ ಭಾನುವಾರ ವ್ಯಾಪಾರ, ವಹಿವಾಟು ಬಂದ್ ಮಾಡಿ ಕಾರ್ಮಿಕರಿಗೆ ವಿಶ್ರಾಂತಿ ನೀಡಬೇಕು ಎಂಬ ಕಾರ್ಮಿಕ ಇಲಾಖೆಯ ನಿಯಮವನ್ನು ತಡವಾಗಿಯಾದರೂ ಇಂದು (ಭಾನುವಾರ) ಇಲ್ಲಿನ ಕಾರ್ಮಿಕ ನಿರೀಕ್ಷಕರು ಜಾರಿಗೆ ತಂದರು.

ಸಾಮಾನ್ಯವಾಗಿ ಪಟ್ಟಣದಲ್ಲಿ ಭಾನುವಾರವೂ ಎಲ್ಲಾ ವ್ಯಾಪಾರ ವಹಿವಾಟು ನಡೆದಿರುತ್ತದೆ. ಈಚೆಗೆ ಕಿರಾಣಿ ವರ್ತಕರು ಸಭೆ ಸೇರಿ ಪ್ರತಿ ಭಾನುವಾರ ತಮ್ಮ ಅಂಗಡಿಗಳನ್ನು ಬಂದ್ ಮಾಡಲು ನಿರ್ಧರಿಸಿದ್ದಾರೆ. ಅದರಂತೆ ಭಾನುವಾರ ಎಲ್ಲಾ ಕಿರಾಣಿ ಅಂಗಡಿಗಳು ಬಂದಾಗಿದ್ದವು.

ಬೆಳಿಗ್ಗೆ ಕಾರ್ಮಿಕ ನಿರೀಕ್ಷಕ ರವೀಂದ್ರ ತಮ್ಮ ಸಿಬ್ಬಂದಿಯೊಂದಿಗೆ ಪಟ್ಟಣದಲ್ಲಿ ತಿರುಗಾಡಿ ಎಲ್ಲಾ ಅಂಗಡಿಗಳನ್ನು ಮುಚ್ಚಿಸಿದರು. ಇನ್ನು ಮುಂದೆ ಭಾನುವಾರ ಅಂಗಡಿ ತೆಗದರೆ ದಂಡ ವಿಧಿಸಲಾಗುವುದು ಮತ್ತು ಮೊಕದ್ದಮೆ ಹಾಕಲಾಗುವುದು ಎಂದು ರವೀಂದ್ರ ಎಚ್ಚರಿಸಿದರು.

ಈ ನಿಯಮ ಮೊದಲಿನಿಂದಲೂ ಇದೆ. ಆದರೆ ಸಮರ್ಪಕವಾಗಿ ಅನುಷ್ಟಾನವಾಗಿರಲಿಲ್ಲ. ಈಗ ಇಲಾಖೆ ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಆದೇಶ ನೀಡಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ರವೀಂದ್ರ ವಿವರಿಸಿದರು.

ಏಕಾಏಕಿ ಕಾರ್ಯಾಚರಣೆ ನಡೆದಿದ್ದರಿಂದ ವ್ಯಾಪಾರಸ್ಥರು ಮುಜುಗರಕ್ಕೊಳಗಾದರು. ಹೊಟೆಲ್‌ನವರು ಮೊದಲೆ ತಿಂಡಿ ಸಿದ್ಧಪಡಿಸಿದ್ದರಿಂದ ಅದು ವ್ಯರ್ಥವಾಯಿುತು ಎಂದು ಹೊಟೆಲ್ ಮಾಲಿಕರೊಬ್ಬರು ತಿಳಿಸಿದರು.

ಇದರಿಂದ ಪಟ್ಟಣ ಬಿಕೋ ಎನ್ನುತ್ತಿತ್ತು. ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ತಮಗೆ ರೆಸ್ಟ್ ಸಿಕ್ಕ ಸಂಭ್ರಮದಲ್ಲಿ ಖುಷಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.