ADVERTISEMENT

ಕಾಲುವೆಗೆ ಅಕ್ರಮ ಪೈಪ್ ಅಳವಡಿಕೆ ಭೀತಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2012, 7:35 IST
Last Updated 9 ಜುಲೈ 2012, 7:35 IST

ಹುಣಸಗಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರ ಜೀವನಾಡಿಯಾಗಿರುವ ನಾರಾಯಣಪುರ ಎಡದಂಡೆ ಕಾಲುವೆಯ ಪುನರ್ ನವೀಕರಣ ಬೆನ್ನಲ್ಲೇ ಕಾಲುವೆಗೆ ರಂದ್ರ ಕೊರೆದು ನೀರು ಪಡೆಯಲು ಕೆಲವರು ಮುಂದಾಗಲು ಸನ್ನದ್ಧರಾಗುತ್ತಿರುವದು ಬೆಳಕಿಗೆ ಬಂದಿದೆ.

ಸುಮಾರು ನಾಲ್ಕು ಜಿಲ್ಲೆಯ   ಲಕ್ಷಾಂತರ ರೈತರ ಅನುಕೂಲಕ್ಕಾಗಿ ಅಂದಾಜು 200 ಕೋಟಿ ರೂ ವೆಚ್ಚದಲ್ಲಿ ಕಾಲುವೆ ನಿರ್ಮಾಣಮಾಡಲಾಗಿದ್ದು, ಇನ್ನು ನೀರು ಹರಿಸುವ ಹಂತದಲ್ಲಿರುವಾಗ 40 ರಿಂದ 42 ನೇ ಕಿಮಿ ಸೇರಿದಂತೆ ಅಲ್ಲಲ್ಲಿ ರಸ್ತೆಯನ್ನೇ ಕೊರೆದು ಪೈಪ್‌ಗಳನ್ನು ಹಾಕುತ್ತಿದ್ದಾರೆ. ಈ ರೀತಿ ಕಾಲುವೆ ಕೊರೆದವರ ವಿರುದ್ಧ ನಿರ್ಧಾಕ್ಷೀಣ್ಯವಾಗಿ ಕ್ರಮ ಕೈಗೊಳ್ಳುವದಾಗಿ ಅಧಿಕಾರಿಗಳು ಮೊದಲೇ ತಿಳಿಸಿದರೂ ಯಾವದೇ ಪ್ರಯೋಜವಾಗುತ್ತಿಲ್ಲ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ತಿಳಿಸಿದರು.

ಅಲ್ಲದೇ ಈ ರೀತಿಯಾಗಿ ಅಕ್ರಮವಾಗಿ ನೀರು ಪಡೆಯುವವರು ಪ್ರಭಾವಿ ವ್ಯಕ್ತಿಗಳೇ ಆಗಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಲಿಖೀತ ರೂಪದಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದರೂ ಪೊಲೀಸರು ಸಹ ಯಾವದೇ ಕ್ರಮ ಕೈಗೊಂಡಿರುವದಿಲ್ಲ.

ಇಂತಹ ಸಂದರ್ಭದಲ್ಲಿ ನಿರ್ಧಾಕ್ಷೀಣ್ಯವಾಗಿ ಕ್ರಮ ಜರುಗಿಸಿದಲ್ಲಿ ಮಾತ್ರ ಮುಂದೆ ಆಗಬಹುದಾದ ಅನಾಹುತ ತಪ್ಪಿಸಬಹುದು ಎಂದು ಜನ ಸಾಮಾನ್ಯರು ಮಾತನಾಡುವಂತಾಗಿದೆ.

ಈಗಾಗಲೇ ಅಲ್ಲಲ್ಲಿ ಕಾಲುವೆಯಲ್ಲಿ ನಿಂತ ನೀರನ್ನು ಬಳಸಿಕೊಂಡು ಭತ್ತದ ಸಸಿ ಹಾಕುತ್ತಿದ್ದಾರೆ. ಪುನರ್ ನವೀಕರಣಕ್ಕೆ ಮೂವತ್ತು ವರ್ಷ ಹಿಡಿಯಿತು. ಒಂದು ವೇಳೆ ಕಾಲುವೆಗೆ ಧಕ್ಕೆಯಾದಲ್ಲಿ ಮುಂದೆ ದೊಡ್ಡ ಹಾನಿಯೇ ಆಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.