ADVERTISEMENT

ಕಿಲಾರಿದೊಡ್ಡಿ: ನ್ಯಾಯಾಧೀಶರ ಭೇಟಿ

​ಪ್ರಜಾವಾಣಿ ವಾರ್ತೆ
Published 28 ಮೇ 2012, 10:40 IST
Last Updated 28 ಮೇ 2012, 10:40 IST

ಶಹಾಪುರ:  ತಾಲ್ಲೂಕಿನ ಕಿಲಾರಿದೊಡ್ಡಿ ಜನತೆಗೆ ಜೀವಿಸುವ ಹಕ್ಕು ಮೊಟಕುಗೊಳಿಸಿದಂತೆ ಆಗಿದೆ. ಅವರು ಕಳೆದ 100 ವರ್ಷಗಳಿಂದ ಗ್ರಾಮದಲ್ಲಿ ವಾಸವಾಗಿದ್ದಾರೆ. ಬದುಕಿನ ಅವಶ್ಯಕ ಸೌಲಭ್ಯಗಳು ಇಲ್ಲವೆಂದರೆ ಜೀವಿಸುವುದಾದರು ಹೇಗೆ ?. ಜನತೆ ಹಕ್ಕುಗಳನ್ನು ಪಡೆಯಲು ನ್ಯಾಯಾಲಯ ಹಾಗೂ ಕಾನೂನುನನ್ನು ಹೋರಾಟದ ವೇದಿಕೆಯನ್ನಾಗಿ ರೂಪಿಸಿಕೊಳ್ಳಬೇಕೆಂದು ಜಿಲ್ಲಾ ಸೆಷನ್ಸ್ ನ್ಯಾಯಾಧೀಶರಾದ ಹಂಚಾಟೆ ಸಂಜೀವಕುಮಾರ ಹೇಳಿದರು.

ತಾಲ್ಲೂಕಿನ ನಾಗನಟಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ  ಕಿಲಾರಿದೊಡ್ಡಿ ಪ್ರಾಥಮಿಕ ಶಾಲಾ ಆವರಣದಲ್ಲಿ ಭಾನುವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಸಮಿತಿ, ನಿಸರ್ಗ ಸಂಸ್ಥೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು  ಮಾತನಾಡಿದರು.

ನಮ್ಮಲ್ಲಿನ ಅರಿವು ಹಾಗೂ ಜಾಗೃತಿಯ ಕೊರತೆಯಿಂದ ಅವಶ್ಯಕ ಸೌಲಭ್ಯಗಳನ್ನು ಪಡೆಯವಲ್ಲಿ ವಂಚಿತರಾಗಿದ್ದೇವೆ. ಮತ್ತೊಬ್ಬರಿಗೆ ದೂಷಿಸುವುದು ಬೇಡ. ಸಂವಿಧಾನದಲ್ಲಿ ಹಕ್ಕುಗಳನ್ನು ದಯಾಪಾಲಿಸಿರುವಾಗ ಅದರ ಸದ್ಭಳಕೆ ಮಾಡಿಕೊಳ್ಳಬೇಕೆಂದು ನ್ಯಾಯಾಧೀಶರು ಕರೆ ನೀಡಿದರು.

ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಶ್ವಾಸಕೋಶ ಕ್ಯಾನ್ಸರ್‌ನಂತಹ ಭೀಕರ ಕಾಯಿಲೆಗಳು ಬರುತ್ತವೆ. ಮೇ 31 ತಂಬಾಕು ವಿರೋಧ ದಿನಾಚರಣೆ ಆಚರಿಸುತ್ತಾರೆ. ದುಶ್ಚಟಗಳಿಂದ ಗ್ರಾಮಸ್ಥರು ದೂರವಿರಬೇಕೆಂದು ಸ್ಥಳೀಯ ಕೋರ್ಟ್‌ನ ನ್ಯಾಯಾಧೀಶರಾದ ಸತೀಶ.ಎಸ್.ಟಿ ಹೇಳಿದರು.
ಗ್ರಾಮ ದರ್ಶನ: ನಂತರ ಗ್ರಾಮಸ್ಥರ ಒತ್ತಾಯದ ಮೇರೆಗೆ ಪರಿಶೀಲನೆಗೆ ತೆರಳಿದಾಗ ಗ್ರಾಮದಲ್ಲಿನ ಸಮಸ್ಯೆಗಳ ಕರಾಳ ಮುಖ ನ್ಯಾಯಾಧೀಶರನ್ನು ಬರಮಾಡಿಕೊಂಡಿತು.

ಸುಮಾರು 100ಕ್ಕೂ ಹೆಚ್ಚು ವರ್ಷಗಳಿಂದ ನಾವು ಇಲ್ಲಿ ಬದುಕು ಸಾಗಿಸುತ್ತಿದ್ದೇವೆ. ಇಲ್ಲಿ 250 ಜನಸಂಖ್ಯೆಯನ್ನು ಹೊಂದಿದ್ದು 42 ಮನೆಗಳಿವೆ. ಗ್ರಾಮದಲ್ಲಿ ಜೀವಿಸುವುದೇ ಒಂದು ಪವಾಡವಾಗಿದೆ. ರಸ್ತೆಯ ಮುಖವನ್ನು ಗ್ರಾಮ ಕಂಡಿಲ್ಲ. ಅದೇ ಕಾಲು ದಾರಿಯಂತೆ ಇರುವ ಏಕಮುಖ ರಸ್ತೆಯಿದೆ. ಗಂಗನಾಳ ಗ್ರಾಮದಿಂದ ಮೂರು ಕಿ.ಮೀ. ಕ್ರಮಿಸಿಬೇಕು. ಹೆರಿಗೆ, ಅನಾರೋಗ್ಯ ಕಾಡಿದರೆ ನಮ್ಮ ಗೋಳು ಹೇಳ ತೀರದು.  ಚಕ್ಕಡಿಯನ್ನು (ಬಂಡಿ) ತೆಗೆದುಕೊಂಡು  ನೆರೆ ಗ್ರಾಮಕ್ಕೆ ತೆರಳಬೇಕು. ಗ್ರಾಮದಲ್ಲಿ ಏಕೈಕ ಕುಡಿಯುವ ನೀರಿನ ಕೊಳವೆಬಾವಿ ಇದೆ. ಸರ್ಕಾರ ಯೋಜನೆ ಎಂಬುವುದು ನಮಗೆ ಗೊತ್ತಿಲ್ಲವಾಗಿದೆ ಎನ್ನುತ್ತಾರೆ ಗ್ರಾಮದ ಮಹಿಳೆ ಲಕ್ಷ್ಮಿಬಾಯಿ.

ವಿದ್ಯುತ್ ಬೆಳಕಿನ ಭಾಗ್ಯ ಲಭಿಸಿಲ್ಲ. ಹಲವಾರು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡಿದರು ಕೂಡಾ ಕೆಪಿಟಿಸಿಎಲ್ ನಿಗಮದ ಅಧಿಕಾರಿಗಳು ದಿನಕೊಂದು ಸಬೂಬು ಹೇಳುತ್ತಾರೆ. ಗ್ರಾಮದಲ್ಲಿ ಕತ್ತಲು ಆಗುತ್ತಿದ್ದಂತೆ ಮನೆಗೆ ಸೇರುತ್ತೇವೆ. ರಾತ್ರಿ ವಿಷಜಂತುಗಳಾದ ಹಾವು, ಚೇಳು ಕಾಟದ ಭಯದ ಭೀತಿಯಲ್ಲಿ ಜೀವನ ಕಳೆಯುತ್ತೇವೆ. ಕೈಯಲ್ಲಿ ಬ್ಯಾಟರಿ ಹಿಡಿದುಕೊಂಡು ರಾತ್ರಿ ಸದಾ  ಅಲೆದಾಡಬೇಕು.

ಮನೆಯಂಗಳದಲ್ಲಿ ಮುಂದಿನ ನೆಲದ ಮೇಲೆ ಕುಳಿತುಕೊಳ್ಳಲು ಭಯ. ಮಂಚ (ವರ್ಸ) ಮೇಲೆ ಆಸರೆ ಪಡೆಯಬೇಕು ಎನ್ನುತ್ತಾರೆ ಹಣಮಂತ.

ಗುಡಿಸಲು ಮನೆಗಳಾಗಿದ್ದರಿಂದ ರಾತ್ರಿ ಸಮಯದಲ್ಲಿ ಚಿಮಣಿ ಬುಡ್ಡಿ ಹಚ್ಚಲು ಸಹ ಭಯ. ಆಕಸ್ಮಿಕವಾಗಿ ಗಾಳಿಗೆ ಬೆಂಕಿ ತಗುಲಿದರೆ ಗುಡಿಸಲು ಸುಟ್ಟು ಹೋಗುತ್ತದೆ. ಬೆಳಕಿನ ಭಾಗ್ಯವನ್ನು ಒದಗಿಸುವ ಶಕ್ತಿ ತಮ್ಮ ಕೈಯಲ್ಲಿದೆ ಎಂದು ಗ್ರಾಮಸ್ಥರು ಪರಿ ಪರಿಯಾಗಿ ನ್ಯಾಯಾಧೀಶರನ್ನು ಬೇಡಿಕೊಂಡರು.

ಆಗ ನ್ಯಾಯಾಧೀಶರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಗ್ರಾಮಕ್ಕೆ ವಿದ್ಯುತ್ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಜಿಲ್ಲಾಧಿಕಾರಿ ಸೇರಿದಂತೆ ಕೆಪಿಟಿಸಿಎಲ್, ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗುವುದೆಂದು  ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ, ಸಿದ್ದಣ್ಣ, ಈರಣ್ಣ ಕಿಲಾರಿ, ಮಾಳಪ್ಪ, ನಿಸರ್ಗ ಸಂಸ್ಥೆಯ ಮಲ್ಲಯ್ಯ ಪೊಲ್ಲಂಪಲ್ಲಿ, ವಸಂತ ಸುರಪುರಕರ್, ತಿರುಪತಿಗೌಡ ಬಾಣತಿಹಾಳ, ಮಹಾದೇವಪ್ಪ, ರಾಮಕೋಟೆಪ್ಪ, ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರಾದ ವಿಜಯಕುಮಾರ ಸಾಲಿಮನಿ, ಭೀಮರಾಯ ಶಖಾಪುರ,ಶ್ರೀಕಾಂತ ಸುಬೇದಾರ, ವಿಜಯಸಿಂಗ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.