ADVERTISEMENT

ಕೆಡಿಪಿ ಸಭೆ- ಡೆಂಗೆ ಜ್ವರದ ಚರ್ಚೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2012, 10:20 IST
Last Updated 12 ಅಕ್ಟೋಬರ್ 2012, 10:20 IST

ಯಾದಗಿರಿ: “ಡೆಂಗೆ ಜ್ವರ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಡೆಂಗೆ ಜ್ವರ ನಿಯಂತ್ರಿಸಲು ಸಾಧ್ಯ. ಆದರೆ ಅದಕ್ಕಾಗಿಯೇ ಚಿಕಿತ್ಸೆ ಎಂಬುದು ಇಲ್ಲ. ಈ ಜ್ವರಕ್ಕೆ ಕಾರಣವಾದ ಸೊಳ್ಳೆಗಳು ಹಗಲು ಹೊತ್ತಿನಲ್ಲಿಯೇ ಕಚ್ಚುತ್ತವೆ. ಸ್ವಚ್ಛ ನೀರಿನಲ್ಲಿಯೇ ಈ ಸೊಳ್ಳೆಗಳು ಉತ್ಪತ್ತಿ ಆಗುತ್ತವೆ. ಡೆಂಗೆ ಹರಡುವುದನ್ನು ತಡೆಗಟ್ಟಲು ಈ ಸೊಳ್ಳೆಗಳ ಉತ್ಪಾದನೆಯನ್ನು ನಿಯಂತ್ರಿಸಬೇಕು”

ಇಲ್ಲಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಲ್ಲಿಕಾರ್ಜುನ ಮುಕ್ಕಾ, ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಡೆಂಗೆ ಜ್ವರದ ಪ್ರಕರಣಗಳು ಕುರಿತು ವಿವರಣೆ ನೀಡಿದರು. ಆಗ ಸಭೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು, ಜನಪ್ರತಿನಿಧಿಗಳು ತಮ್ಮ ಅಕ್ಕಪಕ್ಕದಲ್ಲಿ ಸೊಳ್ಳೆಗಳು ಓಡಾಡುತ್ತಿವೆಯೇ ಎಂದು ನೋಡಿಕೊಂಡರು.

`ಇದೆಂಥ ವಿಚಿತ್ರ ಸೊಳ್ಳೇರಿ. ಕೊಳಚೆ ನೀರಲ್ಲಿ ಉತ್ಪತ್ತಿ ಆಗಲ್ಲ. ರಾತ್ರಿ ಹೊತ್ತು ಕಚ್ಚಲ್ಲ. ಇದರ ವಿಶೇಷತೆಗಳು ಚೆನ್ನಾಗಿವೆ. ಆದರೆ ಕಚ್ಚಿದರೆ ಮಾತ್ರ ಭಯಂಕರ ಪರಿಣಾಮ ಉಂಟಾಗುತ್ತದೆ~ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಬಸವರಾಜಪ್ಪ ಸಂದೇಹ ನಿವಾರಿಸಿಕೊಂಡರು.

`ಹೌದು ಸರ್. ಈ ಸೊಳ್ಳೆಗಳು ಸ್ವಚ್ಛ ನೀರಿನಲ್ಲಿ ಉತ್ಪಾದನೆ ಆಗುತ್ತದೆ. ಬಳಕೆಗೆ ಸಂಗ್ರಹಿಸಿ ಇಡುವ ನೀರಿನಲ್ಲಿ ಈ ಸೊಳ್ಳೆಗಳು ಮೊಟ್ಟೆ ಇಡುತ್ತವೆ. ಏಳು ದಿನದಲ್ಲಿ ಈ ಮೊಟ್ಟೆಗಳು ಸೊಳ್ಳೆಗಳಾಗಿ ಪರಿವರ್ತನೆ ಆಗುತ್ತದೆ.

ಅಷ್ಟರೊಳಗಾಗಿ ಸಂಗ್ರಹಿಸಿರುವ ನೀರನ್ನು ಖಾಲಿ ಮಾಡಿ, ಸ್ವಚ್ಛಗೊಳಿಸಬೇಕು. ಇದರಿಂದ ಸೊಳ್ಳೆಗಳು ಉತ್ಪಾದನೆ ಆಗುವುದನ್ನು ತಡೆಗಟ್ಟಿದಂತಾಗುತ್ತದೆ. ಅಲ್ಲದೇ ಸೊಳ್ಳೆಗಳನ್ನು ನಿಯಂತ್ರಿಸಲು ಫಾಗಿಂಗ್ ಮಾಡಬೇಕು. ಇದೊಂದು ಡೆಂಗೆ ನಿಯಂತ್ರಣಕ್ಕೆ ಇರುವ ದಾರಿ~ ಎಂದು ಡಾ. ಮುಕ್ಕಾ ವಿವರಿಸಿದರು.
ಜಿಲ್ಲೆಯಲ್ಲಿ 11 ಡೆಂಗೆ ಪ್ರಕರಣಗಳು ದೃಢಪಟ್ಟಿವೆ. 6 ಶಂಕಿತ ಪ್ರಕರಣಗಳಿವೆ. ಇಲ್ಲಿಯವರೆಗೆ ಯಾರೂ ಮೃತಪಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.